Advertisement

ಜನ್ಮ ನೀಡಿದ ಹೆಣ್ಣು ಮಗು ಕೊಂದ ತಾಯಿ ಬಂಧನ

01:21 AM Aug 05, 2019 | Lakshmi GovindaRaj |

ಬೆಂಗಳೂರು: ಇಪ್ಪತ್ತಾರು ದಿನಗಳ ಹಿಂದಷ್ಟೇ ತಾನೇ ಜನ್ಮ ನೀಡಿದ ಹೆಣ್ಣು ಮಗುವನ್ನು ತಾಯಿಯೇ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆಗೈದಿರುವ ಘಟನೆ ರಾಜಗೋಪಾಲನಗರದಲ್ಲಿ ನಡೆದಿದೆ. ಪವಿತ್ರಾ (36)ಎಂಬುವರು ಈ ಕೃತ್ಯ ಎಸಗಿದ್ದು, “ಹೆಣ್ಣು ಮಗು ಎಂಬ ಕಾರಣ ಹಾಗೂ ಹುಟ್ಟಿದಾಗಿನಿಂದ ಉಸಿರಾಟದ ಸಮಸ್ಯೆ ಸೇರಿ ಅನಾರೋಗ್ಯದಿಂದ ಬಳಲುತ್ತಿತ್ತು. ಅದನ್ನು ನೋಡಲು ಸಾಧ್ಯವಾಗದೆ, ನಾನೇ ಕೈಯಾರೆ ಕುತ್ತಿಗೆ ಹಿಸುಕಿ ಕೊಂದೆ’ ಎಂದು ಹೇಳಿದ್ದಾರೆ.

Advertisement

ಪವಿತ್ರಾ, ಎರಡು ವರ್ಷಗಳ ಹಿಂದೆ ಕುಣಿಗಲ್‌ ಮೂಲದ ಖಾಸಗಿ ಕಂಪನಿ ಉದ್ಯೋಗಿ ದಿನೇಶ್‌ ಅವರನ್ನು ಮದುವೆಯಾಗಿದ್ದು, ದಂಪತಿಗೆ 26 ದಿನಗಳ ಹಿಂದೆಷ್ಟೇ ಹೆಣ್ಣು ಮಗು ಜನಿಸಿತ್ತು. ಆದರೆ, ಹುಟ್ಟುವಾಗಲೇ ಮಗುವಿಗೆ ಉಸಿರಾಟದ ಸಮಸ್ಯೆ ಜತೆ ನಾನಾ ರೀತಿಯ ಕಾಯಿಲೆಯಿಂದ ಬಳಲುತ್ತಿತ್ತು. ರಾಜಗೋಪಾಲನಗರದ ಆರನೇ ಕ್ರಾಸ್‌ನಲ್ಲಿರುವ ತವರು ಮನೆಗೆ ಬಂದಿದ್ದ ಪವಿತ್ರಾ, ಮಗುವಿನ ಆರೈಕೆ ಮಾಡುತ್ತಿದ್ದು, ಮಗುವಿಗೆ ಹಾಲು ಕುಡಿಸಿದ ಕೆಲವೇ ಕ್ಷಣಗಳಲ್ಲಿ ವಾಂತಿ ಮಾಡಿಕೊಳ್ಳುತ್ತಿತ್ತು.

ಈ ಬಗ್ಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಸರಿ ಹೋಗಿರಲಿಲ್ಲ. ಅದರಿಂದ ಬೇಸತ್ತ ಆಕೆ, ಜುಲೈ 30ರಂದು ಮುಂಜಾನೆಯೇ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನ ವೇಲ್‌ನಿಂದ ಮಗುವಿನ ಕುತ್ತಿಗೆ ಬಿಗಿದು ಕೊಲೆಗೈದಿದ್ದಾರೆ. ನಂತರ ಅನುಮಾನ ಬರಬಾರದು ಎಂದು ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಜಯನಗರದಲ್ಲಿರುವ ಇಂದಿರಾಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ನೀಡಿದ ವೈದ್ಯರು ಮಾರ್ಗಮಧ್ಯೆ ಮಗ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.

ಅನಂತರ ಪವಿತ್ರಾ, ಪತಿ ದಿನೇಶ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಬಂದ ದಿನೇಶ್‌ ಪತ್ನಿ ಹೇಳಿದ ಅನಾರೋಗ್ಯದ ಕಾರಣಗಳನ್ನು ನಂಬಿ ಮುಂದಿನ ಕಾನೂನು ಪ್ರಕ್ರಿಯೆ ನಡೆಸಿಕೊಡುವಂತೆ ಸಿದ್ದಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಪವಿತ್ರಾ ಅವರಿಂದ ಹೇಳಿಕೆ ದಾಖಲಿಸಿಕೊಂಡು ಪ್ರಕರಣವನ್ನು ಘಟನೆ ನಡೆದ ರಾಜಗೋಪಾಲನಗರ ಠಾಣೆಗೆ ವರ್ಗಾವಣೆ ಮಾಡಿದ್ದರು.

ನಂತರ ಇಂದಿರಾಗಾಂಧಿ ಆಸ್ಪತ್ರೆಯ ವೈದ್ಯಕೀಯ ವರದಿ ಹಾಗೂ ಮೃತ ದೇಹವನ್ನು ವಶಕ್ಕೆ ಪಡೆದ ರಾಜಗೋಪಾಲನಗರ ಪೊಲೀಸರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಪರೀಕ್ಷಿಸಿದ ವೈದ್ಯರು, ಕುತ್ತಿಗೆ ಬಿಗಿದಿರುವ ಕಾರಣ ಮಗು ಮೃತಪಟ್ಟಿದ್ದೆ’ ಎಂದು ವರದಿ ನೀಡಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ಕೂಡಲೇ ಪವಿತ್ರಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next