Advertisement
ಹಾ! ಅಂದ ಹಾಗೆ ಮಳೆ ಅಂದರೆ ಅಮ್ಮನ ಬೈಗುಳ ಅಂದೆ. ನಾವೆಲ್ಲ ಚಿಕ್ಕವರಿದ್ದಾಗ ಮಳೆ ಬಂದ ತಕ್ಷಣ ಹೊರಗೆ ಓಡಿ ಹೋಗಿ ಮಳೆಯಲ್ಲಿ ನೆನೆಯುತ್ತಿದ್ದೆವು. ಇದನ್ನು ಕಂಡ ಅಮ್ಮ ಎಲ್ಲಿ ಜ್ವರ ಬರುತ್ತದೆಯೋ ಎಂಬ ಕಾಳಜಿಯಿಂದ ಬೈಯುತ್ತಿದ್ದರು. ಈಗ ಅದನ್ನು ನೆನಪು ಮಾಡಿದರೆ ನಗು ಬರುತ್ತದೆ. ಹೀಗೆ ಮಳೆಯ ಜೊತೆ ಹಲವು ನೆನಪುಗಳಿವೆ. ಆದರೆ ಅಂದಿನ ಮಳೆಗೂ ಇಂದಿನ ಮಳೆಗೂ ಬಹಳ ವ್ಯತ್ಯಾಸವಿದೆ. ಅಂದಿನ ಮಳೆ ಬಹಳ ಜೋರು. ಅಂದಿನ ಮಳೆಯಲ್ಲಿ ನಾವೆಲ್ಲ ಪೇಪರಿನ ದೋಣಿ ಮಾಡಿಬಿಟ್ಟರೆ ಅದು ಎಲ್ಲಿ ಮುಟ್ಟುತ್ತಿತ್ತೋ ಗೊತ್ತಿಲ್ಲ. ಮಳೆ ಬರುವಾಗ ಅದರ ಸಂಗಾತಿಯಾದ ಗಾಳಿಯನ್ನು ಕರೆದುಕೊಂಡು ಬರುತ್ತಿತ್ತು. ಈ ಮಳೆಯ ಜೊತೆಗೆ ಗಾಳಿಯೂ ಸೇರಿ ನಮ್ಮನ್ನು ಭಯಪಡಿಸುತ್ತಿತ್ತು. ಶಾಲೆಗೆ ಹೋಗುವಾಗ ಆ ಗಾಳಿಮಳೆಗೆ ಕೊಡೆ ಎಲ್ಲಿ ಟಿವಿಯ ಅಂಟೆನಾ ಆಗುತ್ತದೆಯೆಂದು ಸದಾ ಭಯವಾಗುತ್ತಿತ್ತು. ಆ ಕೊಡೆ ಉಲ್ಟಾ ಆಗಿ ಎಲ್ಲಿ ಎಲ್ಲರೂ ನೋಡಿ ನಗುತ್ತಾರೆಂಬ ಭಯ.ಈಗ ಮತ್ತೆ ಮಳೆ ಬರುತ್ತಿದೆ. ಆದರೆ ಹಿಂದಿನ ಮಳೆಯಷ್ಟು ಜೋರಾಗಿ ಅಲ್ಲ. ಆದರೂ ಮಳೆಯೊಂದಿಗಿನ ನಮ್ಮ ತುಂಟಾಟದ ನೆನಪುಗಳೂ ಬಿಚ್ಚಿಕೊಳ್ಳುತ್ತಿವೆ.
ದ್ವಿತೀಯ ಬಿ.ಕಾಂ. ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು