ಸುಬ್ರಹ್ಮಣ್ಯ: ಸ್ನೇಹಿತರು, ತಮ್ಮ ಓರಗೆಯವ ರೊಂದಿಗೆ ಪ್ರವಾಸ ಹೋಗಿ ಸಂಭ್ರಮಿಸುವ ಯುವಜನರು ಸಾಮಾನ್ಯ. ಆದರೆ ಮೈಸೂರಿನ 44ರ ಹರೆಯದ ಕೃಷ್ಣಕುಮಾರ್ ಹಾಗಲ್ಲ. ತಾಯಿ 72ರ ಹರೆಯದ ಚೂಡ ರತ್ನಮ್ಮ ಅವರನ್ನು ತನ್ನ ಸ್ಕೂಟರ್‌ನಲ್ಲೇ ತೀರ್ಥಯಾತ್ರೆ ಮಾಡಿಸುತ್ತಿ ದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಯಾತ್ರೆ ನಿರತರಾಗಿದ್ದಾರೆ.
ಮಂಗಳವಾರ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು.
ಅವಿವಾಹಿತರಾಗಿರುವ ಕೃಷ್ಣ ಕುಮಾರ್ ಈ ಹಿಂದೆ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಕೆಲವು ವರ್ಷಗಳ ಹಿಂದೆ ರಾಜೀನಾಮೆ ನೀಡಿ ಋಷಿಸದೃಶ ಜೀವನ ನಡೆಸುತ್ತಿದ್ದಾರೆ. ನನ್ನ ತಾಯಿ 60 ವರ್ಷಗಳಿಗೂ ಹೆಚ್ಚು ನಾಲ್ಕು ಗೋಡೆಯ ಮಧ್ಯೆಯೇ ಜೀವನ ನಡೆಸುತ್ತಿದ್ದರು. ಇಳಿವಯಸ್ಸಿನ ಅವರ ಆಸೆಗಳನ್ನು ಈಡೇರಿಸುವುದೇ ನನ್ನ ಪರಮೋದ್ದೇಶವಾಗಿಸಿ ಕೊಂಡಿದ್ದು, 20 ವರ್ಷಗಳ ಹಿಂದೆ ತಂದೆ ಕೊಡಿಸಿದ ಸ್ಕೂಟರ್‌ನಲ್ಲೇ ಕರೆದೊಯ್ಯುತ್ತಿದ್ದೇನೆ. ಅದನ್ನೇ ತಂದೆ ಎಂದು ತಿಳಿದುಕೊಂಡು ನಾವು ಮೂವರೂ ಜತೆಯಾಗಿ ಪ್ರಯಾಣಿಸುತ್ತಿದ್ದೇವೆ ಎಂಬ ಭಾವನೆ ಹೊಂದಿದ್ದೇವೆ ಎಂದರು.
ದೇಶ ಸುತ್ತಾಟ
2018ರಲ್ಲಿ ಮೈಸೂರಿನಿಂದ ಇದೇ ಸ್ಕೂಟರ್‌ನಲ್ಲಿ ಪ್ರವಾಸ ಆರಂಭಿಸಿದ ತಾಯಿ- ಮಗನ ಜೋಡಿ ಸಮಗ್ರ ಭಾರತ ಸುತ್ತಿದೆ. ಬಳಿಕ ನೇಪಾಲ, ಭೂತನ್, ಮಾಯನ್ಮಾರ್ ದೇಶಗಳನ್ನೂ ಸಂದರ್ಶಿಸಿದ್ದಾರೆ. ಅಷ್ಟರಲ್ಲಿ ಕೊರೊನಾ ಸಮಸ್ಯೆ ತಲೆದೋರಿದ ಕಾರಣ 2020ರಲ್ಲಿ ಮೈಸೂರಿಗೆ ಹಿಂದಿರಿಗಿದ್ದು, ಬಳಿಕ ಸ್ಥಳೀಯವಾಗಿಯೇ ಸುತ್ತಾಡುತ್ತಿದ್ದಾರೆ. ಧರ್ಮಸ್ಥಳ, ಪುತ್ತೂರಿಗೆ ತೆರಳಿ ಬಳಿಕ ವಿಟ್ಲದಲ್ಲಿರುವ ತಾಯಿಯ ಸ್ನೇಹಿತೆಯ ಮನೆಗೆ ತೆರಳುತ್ತೇವೆ ಎಂದು ತಿಳಿಸಿದ್ದಾರೆ.