ಬೆಂಗಳೂರು: ಇತ್ತೀಚೆಗಷ್ಟೇ ದಂತ ವೈದ್ಯೆಯೊಬ್ಬರು ತನ್ನ 5 ವರ್ಷ ವಿಶೇಷ ಚೇತನ ಮಗಳನ್ನು ಮಹಡಿಯಿಂದ ಎಸೆದು ಕೊಂದ ಪ್ರಕರಣ ಮಾಸುವ ಮುನ್ನವೇ ಬನಶಂಕರಿಯಲ್ಲಿ ದಂತ ವೈದ್ಯೆಯೊಬ್ಬರು ತನ್ನ 10 ವರ್ಷದ ಮಗಳನ್ನು ನೇಣುಬಿಗಿದು ಕೊಂದು ಬಳಿಕ ತಾನೂ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬನಶಂಕರಿ 2ನೇ ಹಂತದಲ್ಲಿ ವಾಸವಾಗಿದ್ದ ಶೈಮಾ(36) ತನ್ನ ಮಗಳು ಆರಾಧನಾ(10)ಳನ್ನು ಕೊಂದು, ಬಳಿಕ ತಾನೂ ನೇಣಿಗೆ ಶರಣಾಗಿದ್ದಾರೆ. ಕೊಡಗಿನ ವಿರಾಜಪೇಟೆ ಮೂಲದ ಶೈಮಾ 12 ವರ್ಷಗಳ ಹಿಂದೆ ಕೋಲಾರ ಮೂಲದ ನಾರಾಯಣ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿ ದಂತ ವೈದ್ಯರಾಗಿದ್ದು, ಬನಶಂಕರಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ.
ದಂಪತಿಗೆ ಆರಾಧನಾ ಎಂಬ ಮಗಳಿದ್ದು, ಖಾಸಗಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಳು. ಎರಡು ದಿನಗಳ ಹಿಂದೆ ನಾರಾಯಣ ಎಂದಿನಂತೆ ಬೆಳಗ್ಗೆ 9 ಗಂಟೆ ಕ್ಲಿನಿಕ್ ಗೆ ಹೋಗಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ನಾರಾಯಣ್, ಮನೆಗೆ ಫೋನ್ ಮಾಡಿದ್ದಾರೆ. ಪತ್ನಿ ಶೈಮಾ ಕರೆ ಸ್ವೀಕರಿಸಿಲ್ಲ. ನಂತರ ಮಧ್ಯಾಹ್ನ ಮನೆಗೆ ಬಂದಾಗ ಬಾಗಿಲು ತೆರೆದಿಲ್ಲ. ಹೀಗಾಗಿ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಆರಾಧನಾಳನ್ನು ಕೊಂದು ಫ್ಯಾನ್ ಗೆ ನೇಣು ಬಿಗಿದು, ಬಳಿಕ ಅದೇ ಫ್ಯಾನ್‌ಗೆ ಶೈಮಾ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ತಾಯಿ-ಮಗಳ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಆಸ್ಟ್ರೇಲಿಯಾದಿಂದ ಸೋಮವಾರ ಬಂದಿರುವ ಶೈಮಾ ಸಹೋದರ ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ದೂರು ನೀಡಿದ್ದಾರೆ.
ಕೇಸು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ. ಅಲ್ಲದೆ, ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದರು.
ಬನಶಂಕರಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.