Advertisement

ತಾಯಿ ಮತ್ತು ಮಗಳ ಸಮ್ಯಕ್‌ ಬಂಧ

05:46 PM Dec 12, 2019 | mahesh |

ನಮ್ಮ ಜೀವನದಲ್ಲಿ ಸಂಬಂಧಗಳಿಗೆ ಬಹಳ ಪ್ರಾಮುಖ್ಯ ಇದೆ. ಸಂಬಂಧಗಳಿಲ್ಲದಿದ್ದರೆ ಬಹುಶಃ ನಮಗೆ ಪ್ರೀತಿ ಎಂದರೆ ಏನು, ಭಾವನೆಗಳೆಂದರೇನು, ನಂಬಿಕೆ ಎಂದರೆ ಏನು ಎನ್ನುವುದು ತಿಳಿಯುತ್ತಿರಲಿಲ್ಲ. ಯಾಕೆಂದರೆ, ಸಂಬಂಧಗಳ ಮೌಲ್ಯ ಅಂಥಾದ್ದು. ಇಂತಹ ಅದ್ಭುತ ಸಂಬಂಧಗಳಲ್ಲಿ ಒಂದು ತಾಯಿ ಮತ್ತು ಮಗಳ ಸಂಬಂಧ. ಒಮ್ಮೆ ಈಕೆ ಮಗಳಿಗೆ ತಾಯಿಯಾದರೆ, ಮುಂದೊಂದು ದಿನ ಮಗಳು ತನ್ನ ತಾಯಿಗೆ ತಾಯಿಯಾಗಿರುತ್ತಾಳೆ !

Advertisement

ಮೊದಲು ತಾಯಿಯೇ ಮಗಳಿಗೆ ಎಲ್ಲಾ ಆಗಿರುತ್ತಾಳೆ. ಈ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ತಾಯಿ ಕಲಿಸಿಕೊಡುತ್ತಾಳೆ. ಮಗಳು ತಾಯಿಯನ್ನು ನೋಡಿ ಎಲ್ಲವನ್ನು ಕಲಿತುಕೊಂಡಿರುತ್ತಾಳೆ. ತಾಯಿಯಂತೆ ಮಗಳು ನೂಲಿನಂತೆ ಸೀರೆ ಎಂಬ ಗಾದೆಯನ್ನು ನಾವು ಕೇಳಿರುತ್ತೇವೆ. ಇದು ತಾಯಿ ಮತ್ತು ಮಗಳ ವಿಚಾರದಲ್ಲಿ ನಿಜವಾಗಿರುತ್ತದೆ. ತಾಯಿ-ಮಗಳ ಬೆಲೆ ಇನ್ನಷ್ಟು ಹೆಚ್ಚಾಗುತ್ತದೆ. ಅದೇನೇ ಆದರೂ ತಾಯಿಮಗಳ ಸಂಬಂಧವನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಅವರ ನಡುವಿನ ಒಗ್ಗಟ್ಟಿಗೆ, ಪ್ರೀತಿಗೆ ನಮ್ಮಿಂದ ಬೆಲೆ ಕಟ್ಟಲು ಸಾಧ್ಯವಿಲ್ಲ.

ಮಗಳು ತನ್ನ ಯೌವನಕ್ಕೆ ಕಾಲಿಟ್ಟಾಗ ತಾಯಿ ಗಂಭೀರವಾಗುತ್ತಾಳೆ. ಅವಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಕಾಳಜಿ ವಹಿಸುತ್ತಾಳೆ, ಅವಳು ಇಡುವ ಒಂದೊಂದು ಹೆಜ್ಜೆಯನ್ನು ತಾಯಿ ಎಚ್ಚರಿಸುತ್ತ ಇರುತ್ತಾಳೆ. ಮಗಳ ಎಲ್ಲಾ ಆರೈಕೆಗಳನ್ನು ತಾಯಿ ನೋಡಿಕೊಳ್ಳುತ್ತಾಳೆ. ಮಗಳು ಸಹ ತನ್ನ ಆಗುಹೋಗುಗಳನ್ನು, ಭಾವನೆಗಳನ್ನು ತಾಯಿಯೊಂದಿಗೆ ಹಂಚಿಕೊಳ್ಳುತ್ತಾಳೆ. ಇದರಿಂದ ಅವರಿಬ್ಬರ ಸಂಬಂಧ ಇನ್ನೂ ಗಟ್ಟಿಯಾಗುತ್ತ ಹೋಗುತ್ತದೆ. ಅದು ಹೇಗೆಂದರೆ, ಮಗಳು ತಾಯಿಯನ್ನು ಬಿಟ್ಟಿರುವುದಿಲ್ಲ. ತಾಯಿ ಮಗಳನ್ನು ಬಿಟ್ಟು ಕೊಡುವುದಿಲ್ಲ. ಇವರ ಅಮೂಲ್ಯವಾದ ಬಾಂಧವ್ಯಕ್ಕೆ ಎಂದೂ ಕೊನೆ ಎಂಬುದು ಇಲ್ಲ. ತಾಯಿಯ ಪ್ರೀತಿ ಮಗಳಿಗೆ ಎಲ್ಲಾ ಪ್ರೀತಿಗಿಂತಲೂ ಭಿನ್ನವಾಗಿರುತ್ತದೆ. ಅದರಿಂದ ತಾಯಿಯನ್ನು ತುಂಬಾ ಪ್ರೀತಿಸುತ್ತಾಳೆ.

ಮಗಳು ಮದುವೆಯ ವಯಸ್ಸಿಗೆ ಬಂದು, ಅವಳ ಮದುವೆಯಾದಾಗ ತಾಯಿ ಮತ್ತು ಮಗಳ ನಡುವಿನ ಅಂತರವನ್ನು ವ್ಯಕ್ತಪಡಿಸುತ್ತದೆ, ಆಗ ಮಗಳು ತನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾಳೆ. ತಾಯ್ತನವನ್ನು ಅನುಭವಿಸುತ್ತಾಳೆ. ಆಗ ತನ್ನ ತಾಯಿಯ ಕಷ್ಟಗಳು ನೆನಪಿಗೆ ಬರುತ್ತವೆ. ಅಷ್ಟರಲ್ಲಿ ಮಗಳು ಇನ್ನೊಂದು ಮಗುವಿಗೆ ತಾಯಿಯಾಗಿರುತ್ತಾಳೆ. ತಾಯಿ ಮಧ್ಯ ವಯಸ್ಸಿಗೆ ಬಂದಾಗ ಮಗಳು ಈ ತಾಯಿಗೆ ತಾಯಿಯಾಗಿದ್ದು ಆರೈಕೆ ಮಾಡುತ್ತಾಳೆ. ಆ ದೇವರ ಸೃಷ್ಟಿಯೇ ಅಂತಹದ್ದು. ಅಳಿದುಹೋಗುವ ಮುನ್ನ ಅರಿತುಕೊಳ್ಳುವುದು ಹೇಗೆ ಎಂಬುದನ್ನು ಸಂಬಂಧಗಳಲ್ಲಿ ಕೊಟ್ಟಿದ್ದಾರೆ.

ಈ ಜೀವನದ ಜಂಜಾಟದಲ್ಲಿ ಸುಂದರವಾದ ಸಂಬಂಧಗಳನ್ನು ಕಂಡಾಗ ಇನ್ನಷ್ಟು ಬದುಕುವ ತವಕ ಹೆಚ್ಚಾಗುತ್ತದೆ. ಅದರಲ್ಲಿಯೂ ತಾಯಿ ಮತ್ತು ಮಗಳ ಸಂಬಂಧವನ್ನು ಮಾತಿನಿಂದ ವರ್ಣಿಸಲು ಸಾಧ್ಯವಾಗುತ್ತಿಲ್ಲ. ಈ ತಾಯಿಯ ಋಣ ತೀರಿಸಬೇಕೆಂದು ಮಗಳು ತನಗೆ ಮರುಜನ್ಮವಿದ್ದರೆ ತನ್ನ ತಾಯಿಯೇ ಮಗುವಾಗಿ ಬರಬೇಕೆಂದು ಆ ದೇವರಲ್ಲಿ ಪ್ರಾರ್ಥಿಸುತ್ತಾಳೆ.

Advertisement

ತನ್ನ ಪ್ರಪಂಚವೇ ತಾಯಿ ಎಂದುಕೊಂಡ ಮಗಳು, ಮಗಳೇ ತನ್ನ ಪ್ರಪಂಚ ಎಂದುಕೊಂಡ ತಾಯಿ… ಎಷ್ಟು ಸುಂದರ ಈ ಸಂಬಂಧ ಅಲ್ಲವೆ!

ರೋಶ್ನಿ
ತೃತೀಯ ಬಿ. ಕಾಂ., ಮಿಲಾಗ್ರಿಸ್‌ ಕಾಲೇಜ್‌, ಕಲ್ಯಾಣಪುರ

Advertisement

Udayavani is now on Telegram. Click here to join our channel and stay updated with the latest news.

Next