ಮೊದಲು ನಿನ್ನ ಮಗಳಾಗಿ ನಿನ್ನ ಚರಣಗಳಲ್ಲಿ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಕ್ಷೇಮ ವಿಚಾರಣೆ ಮಾಡುತ್ತಿದ್ದೇನೆ. ಪೂರ್ತಿಯಾಗಿ ಅಲ್ಲವಾದರೂ ಒಂದಿಷ್ಟಾದರೂ ನಿನ್ನ ಮನವನ್ನು ಬಲ್ಲೆ. ತಾಯಿಯ ಅಂತರಾಳವನ್ನೇ ಅರಿಯದ ಮೇಲೆ ಯಾವ ಕೋಶ ಓದಿದರೇನು? ನಿನ್ನೊಂದಿಗೆ ಮಾತನಾಡಬೇಕೆನಿಸುತ್ತಿದೆ. ನನ್ನ ಮಾತುಗಳಿಗೆಲ್ಲ ಈ ಪತ್ರದ ಮೂಲಕ ಅಕ್ಷರ ರೂಪ ಕೊಟ್ಟಿದ್ದೇನೆ. ಏನಮ್ಮ? ನನ್ನ ಕ್ಷೇಮದ ಬಗ್ಗೆ ಹೇಳಿಲ್ಲ ಅಂತಾನ? ನನಗೆ ಗೊತ್ತಿದೆ ನಿನ್ನ ಮಾತೃ ಹೃದಯದ ಬಗ್ಗೆ. ನೋಡು, ನೀನಿಟ್ಟಂತಿರುವೆ.
ನಿನ್ನ ಮಕ್ಕಳ ಮೇಲೆ ನಿನಗೆಷ್ಟು ಪ್ರೀತಿಯಮ್ಮ! ದಿನಬೆಳಗಾದರೆ ನಿನ್ನನ್ನು ಅಷ್ಟೊಂದು ಘಾಸಿಗೊಳಿಸುತ್ತೇವೆ. ಆದರೂ ನೀನು ಅದೆಷ್ಟು ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಳ್ಳುತ್ತೀಯ. ನಿನ್ನ ಹುಸಿಮುನಿಸು ಕ್ಷಣಿಕವೆಂದು ನಮಗೆ ತಿಳಿದಿದೆ. ನೀನು ಸೃಷ್ಟಿಸಿದ ನೈಸರ್ಗಿಕ ಸಂಪತ್ತನ್ನು ನಾವು ಸ್ವಾರ್ಥಿಗಳಾಗಿ ಯಥೇತ್ಛವಾಗಿ ಬಳಸಿದ್ದೇವೆ.
ಒಂದು ನಿಮಿಷ ಮನಸ್ಸನ್ನು ಪ್ರಶಾಂತವಾಗಿರಿಸಿ ದೀರ್ಘವಾದ ಉಸಿರೆಳೆದು ನಿನ್ನ ಪರಿಸರದಲ್ಲಿ ಸಂಚರಿಸುವ ಸ್ವಚ್ಛಂದವಾದ ಗಾಳಿಯನ್ನು ಆಸ್ವಾದಿಸುವಷ್ಟು ಸಮಯವೂ ಇಲ್ಲದವರಾಗಿದ್ದೇವೆ, ಮೆದುಳು ಈ ಸ್ಪರ್ಧಾತ್ಮಕ ಜಗತ್ತಿನ ಪೈಪೋಟಿಯಲ್ಲಿ ವ್ಯಸ್ತವಾಗಿದ್ದರೆ ಮನಸ್ಸು ಮೊಬೈಲ್‌ಗಳಿಂದ ರವಾನೆಯಾಗುವ ಸಂದೇಶಗಳಲ್ಲಿ ಬಂಧಿಯಾಗಿದೆ. ಇಷ್ಟರ ಮಧ್ಯಬದುಕಿನ ನೆಮ್ಮದಿ ಎಲ್ಲಿ ಕಳೆದು ಹೋಗಿದೆಯೋ ತಿಳಿದಿಲ್ಲ. ಇನ್ನು ಶುದ್ಧ ಗಾಳಿಯ ಮಾತೆಲ್ಲಿ? ನೀನು ನಮಗಾಗಿ ಕೊಡುಗೆಯಾಗಿ ನೀಡಿದ ಹಸಿರನ್ನು ನಾಶಗೊಳಿಸಿ, ಅನುಕೂಲಕ್ಕೆಂದು ವಾಹನಗಳನ್ನು ಸೃಷ್ಟಿಸಿ ನಿನ್ನದೇ ಗರ್ಭದ ಪೆಟ್ರೋಲ್, ಡೀಸೆಲ್ ಉಣಿಸಿ ಹೊಗೆ ಕಾರಿಸುತ್ತೇವೆ. ನಮ್ಮ ಕೆಲಸಕ್ಕೆ ಹಸಿರೆಲ್ಲಿ ಉಳಿಯಬೇಕು?
ಭೂಮಿ ತಾಯಿಯೇ, ನಿನ್ನ ಒಡಲಾಳದ ಹಸಿವನ್ನು ಅರಿಯುವ ಸಾಮರ್ಥ್ಯ ಮನುಷ್ಯರಾಗಿ ನಮಗಿಲ್ಲ. ನೀನು ಮಾತ್ರ ನಿನ್ನ ಮಣ್ಣ ಕಣ ಕಣದ ಪೋಷಕಾಂಶಗಳನ್ನೆಲ್ಲ ಉಣಿಸಿ, ಎಳೆಯ ಹಸಿರ ಭ್ರೂಣ ವನ್ನು ಗರ್ಭದಲ್ಲಿಯೇ ರಕ್ಷಣೆಗೈದು ಮೊಳಕೆಯೊಡೆಯಿಸಿ, ಬೇರನ್ನು ಬಿಗಿಯಾಗಿ ಹಿಡಿದು, ಬೆಳೆಸಿ, ಹಸಿರಿನ ಪರಿಸರವನ್ನು ಸೃಷ್ಟಿ ಮಾಡಿ ನಮ್ಮ ಉಸಿರನ್ನು ಕಾಯುತ್ತಲೇ ಇರುತ್ತೀಯ. ಆದರೆ, ನಾವು ತಾಂತ್ರಿಕತೆ, ಆಧುನಿಕತೆ, ಬೆಳವಣಿಗೆಯ ಬೆನ್ನು ಹಿಡಿದು ಫಲವತ್ತಾದ ಮಣ್ಣನ್ನು ಅಗೆದರೆ ಪ್ಲಾಸ್ಟಿಕ್ ಸಿಗುವಂತೆ ಮಾಡಿ ರಾಸಾಯನಿಕ ಬೆರೆಸಿ ಆ ಮಣ್ಣಿನ ಫಲವತ್ತತೆ ಕೆಡಿಸಿದೆವು. ಭೂ ವಾತಾವರಣವನ್ನೇ ಮೀರಿ ನೀನು ಕಟ್ಟಿಕೊಂಡ ರಕ್ಷಣಾ ಕವಚ ಆ ಓಜೋನ್ ಪದರವನ್ನೇ ತೂತು ಮಾಡಿಲ್ಲವೇ ಅಮ್ಮಾ? ಇನ್ನು ಆ ತಣ್ಣಗಿನ ಚಂದಿರನ, ಕೆಂಪಗಿನ ಮಂಗಳನ ಅಂಗಳದಲ್ಲಿ ನೆಲೆಯೂರಿ ಅಲ್ಲಿನ ವಾತಾವರಣವನ್ನು ಕೆಡಿಸೋದು ಬಾಕಿ ಇದೆ, ಅಷ್ಟೇ. ಇದು ನಮ್ಮ ಅತಿಯಾದ ಬುದ್ಧಿಶಕ್ತಿಯ ಅರ್ಥವಿಲ್ಲದ ದರ್ಬಳಕೆಯ ಪರಿಣಾಮ. ನಿನ್ನೊಂದಿಗೆ ನಮ್ಮ ಅಮಾನವೀಯ ನಡವಳಿಕೆಗೆ ನಾವೇ ಅನುಭವಿಸಬೇಕು. ಆಗಲೇ ನಮಗೆ ಅರ್ಥವಾಗುವುದು ಹಾಗೆಂದು ನಾವು ಅಂದುಕೊಂಡಿರುವುದಷ್ಟೇ. ಏಕೆಂದರೆ ಮನುಷ್ಯ ಜನ್ಮ ಜಡಗಟ್ಟಿಹೋಗಿದೆ!
ಮಾತೃಭೂಮಿಯೇ, ನೀನು ಆಗಾಗ ಕೋಪಗೊಳ್ಳುತ್ತಿ ಹೌದು! ನಿನ್ನ ಆರೋಗ್ಯ ಕೆಡಿಡಸುವಂತಹ ಚಟುವಟಿಕೆಯಿಂದ ನೀನು ಸಿಟ್ಟೇರಿ ತಾಪಮಾನ ಹೆಚ್ಚಿದರೂ, ಹಿಮ ಕರಗುತ್ತದೆಯೇ ಹೊರತು ಮನುಷ್ಯನಿಗೆ ತಪ್ಪಿನರಿವಾಗುವುದಿಲ್ಲ. ನಿನ್ನ ಕೋಪಾಗ್ನಿ ಜ್ವಾಲಾಮುಖೀಯಾಗಿ ಉಕ್ಕಿ ಹರಿದರೂ ಸರಿಯೇ ಮನುಷ್ಯ ಬೆದರುವುದಿಲ್ಲ. ನೀನು ಕಂಪಿಸಿದರೂ, ಒಡಲು ಬಿರಿದರೂ ಮನುಜನ ನಡುಕ ಆ ಕ್ಷಣಕ್ಕೆ ಮಾತ್ರ. ಒಂದು ವೇಳೆ ನೀನು ದುಃಖೀಸಿ ಧಾರಾಕಾರವಾಗಿ ಕಣ್ಣೀರಿಡುತ್ತ ಗುಡುಗಿದರೂ ನಿನ್ನ ಕಣ್ಣೀರು ನಿನ್ನಲ್ಲಿಯೇ ಇಂಗುವವರೆಗೆ ತಾನೂ ಅತ್ತು ಕಣ್ಣೀರು ಬತ್ತಿದ ಮೇಲೆ ಕಲ್ಲಾಗಿ ಸೆಟೆದು ನಿಂತು ಮತ್ತೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಬಲ್ಲ. ಅದನ್ನು ಮೆಚ್ಚಬೇಕು ನಿಜ! ಆದರೆ, ನಿನ್ನನ್ನು ಅರ್ಥಮಾಡಿಕೊಂಡು ಮತ್ತೆಂದು ಅಂತಹ ತಪ್ಪು ನಡೆಯದಂತೆ ಮುಂಜಾಗ್ರತೆಯನ್ನು ನಾವು ವಹಿಸಬೇಕಲ್ಲವೇ?
ಪಲ್ಲವಿ ಶೇಟ್
ಪೂರ್ವ ವಿದ್ಯಾರ್ಥಿನಿ, ಸಸ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ, ಮಂಗಳಗಂಗೋತ್ರಿ