ಅಥಣಿ: ಲಿಂ. ಚನ್ನಬಸವ ಶಿವಯೋಗಿಗಳ 95ನೇ ಸ್ಮರಣೋತ್ಸವ ಅಂಗವಾಗಿ ಮೋಟಗಿ ಮಠದಿಂದ ಶರಣ ಸಂಸ್ಕೃತಿ ಉತ್ಸವ ಜ.8ರಿಂದ 10ರ ವರೆಗೆ ಆಚರಿಸಲಾಗುವುದು ಎಂದು ಮೋಟಗಿ ಮಠದ ಪೀಠಾಧ್ಯಕ್ಷ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ಅಥಣಿ ಪಟ್ಟಣದಲ್ಲಿರುವ ಮೋಟಗಿ ಮಠದ ಆವರಣದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಬಸವಭೂಷಣ ಪ್ರಶಸ್ತಿಯನ್ನು ಕೊಡಲಿದ್ದು, ಕಳೆದ ವರ್ಷ ಕೊಡಬೇಕಾಗಿದ್ದ ಪ್ರಶಸ್ತಿಯನ್ನು ಸಿದ್ಧಗಂಗಾ ಸ್ವಾಮೀಜಿ ನಿಧನದ ಹಿನ್ನೆಲೆ ಕೊಡಲಾಗಿರಲಿಲ್ಲ. ಅದಕ್ಕಾಗಿ 2019ರ ಬಸವಭೂಷಣ ಪ್ರಶಸ್ತಿಯನ್ನು ಶಿವಾನಂದ ಜಮಾದಾರ ಅವರಿಗೆ ಹಾಗೂ ಈ ಸಾಲಿನ ಬಸವಭೂಷಣ ಪ್ರಶಸ್ತಿಯನ್ನು ಭಾಲ್ಕಿಯ ಡಾ| ಬಸವಲಿಂಗ ಪಟ್ಟದೇವರಿಗೆ ನೀಡಲಿದ್ದೇವೆ ಎಂದರು.
8ರಂದು ಮುಕ್ತಾಯಿ ಮಹಿಳಾ ಸಮಾವೇಶ ಬೆಳಗ್ಗೆ 11ಗಂಟೆಗೆ ಜರುಗುವುದು. ಈ ಸಮಾವೇಶವನ್ನು ಶಾಸಕರಾದ ಮಹೇಶ ಕುಮಟಳ್ಳಿ ಉದ್ಘಾಟಿಸುವರು. ಸಭೆಯ ನೇತೃತ್ವನ್ನು ಮಾಜಿ ಸಚಿವೆ ಲೀಲಾದೇವಿಪ್ರಸಾದ, ಡಾ| ಅಕ್ಕಗಂಗಾಂಬಿಕಾ ತಾಯಿ ಬಸವ ಕಲ್ಯಾಣ ವಹಿಸುವರು. ಮಹಿಳೆಯರನ್ನು ಕುರಿತು ಡಾ| ಮೈತ್ರೇಯಿಣಿ ಗದ್ದಿಗೆಪ್ಪಗೌಡರ ಮಾತನಾಡಲಿದ್ದಾರೆ. ಸಮಾರಂಭದ ಸಾನ್ನಿಧ್ಯವನ್ನು ಶಿವಾನಂದ ಸ್ವಾಮೀಜಿ, ಡಾ| ಅಲ್ಲಮ್ಮಪ್ರಭು ಸ್ವಾಮೀಜಿ ಅಧ್ಯಕ್ಷತೆ ವಹಿಸುವರು ಎಂದರು.
9ರಂದು ಬೆಳಗ್ಗೆ 11ಗಂಟೆಗೆ ಗುರುಬಸವೇಶ್ವರ ವಿದ್ಯಾ ವಿಕಾಸ ಸಂಸ್ಥೆಯ ಪ್ರೌಢಶಾಲೆಗೆ ಮಾತ್ರೋಶ್ರೀ ಶಿವಗಂಗಮ್ಮ ಗುರಮೂರ್ತಯ್ಯ ಹಿರೇಮಠ ಇವರ ನಾಮಕರಣ ಮಾಡಲಾಗುವುದು. ಡಿಸಿಎಂ ಲಕ್ಷ್ಮಣ ಸಂಗಪ್ಪ ಸವದಿ ಉದ್ಘಾಟಿಸುವರು. ನಾಮಫಲಕ ಅನಾವರಣವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
10ರಂದು ಬೆಳಗ್ಗೆ ವಚನ ಪಲ್ಲಕ್ಕಿ ಉತ್ಸವ. ಸಂಜೆ 6 ಗಂಟೆಗೆ ಗುರುಗಳ ಸಂಸ್ಮರಣೆ, ಮತ್ತು ಭಾವೈಕ್ಯ ಬೆಳದಿಂಗಳೂ, ಕಾರ್ಯಕ್ರಮ ಕಾರ್ಯಕ್ರಮ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಸೋಮಲಿಂಗಗೌಡಾ ಪಾಟೀಲ, ಪ್ರಕಾಶ ಮಹಾಜನ, ರಮೇಶಗೌಡಾ ಪಾಟೀಲ, ಪ್ರಕಾಶ ಪಾಟೀಲ (ಹುಲಗಬಾಳಿ), ಎಲ್.ವಿ. ಕುಲಕರ್ಣಿ , ಅನಿಲ ಸುಣದೋಳಿ ಉಪಸ್ಥಿತಿರಿದ್ದರು.