ಹೊಸದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ನಲ್ಲಿ ನಡೆಯುತ್ತಿದ್ದ ಉಗ್ರ ಶಿಬಿರ ಮೇಲೆ ಮಂಗಳವಾರ ಭಾರತದ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ನಲ್ಲಿ ಕುಖ್ಯಾತ ಉಗ್ರ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್
ಮೌಲಾನಾ ಮಸೂದ್ ಅಜರ್ ಬಲಿಯಾಗಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ
ಪಠಾಣ್ ಕೋಟ್, ಉರಿ, ಪುಲ್ವಾಮದಲ್ಲಿ ಮಾರಣಹೋಮ ನಡೆಸಿದ್ದ ಜೈಶ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಬಾಲಾಕೋಟ್ ನಲ್ಲಿ ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಸತ್ತು ಹೋಗಿದ್ದಾನೆ ಎಂದು ಹೇಳಲಾಗುತ್ತಿದೆಯಾದರೂ ಇನ್ನೂ ಖಚಿತವಾಗಿಲ್ಲ.
ಕೆಲ ಮೂಲಗಳ ಮಾಹಿತಿಯ ಪ್ರಕಾರ, ದಾಳಿ ನಡೆದಾಗ ಅಜರ್ ಮಸೂದ್ ಮತ್ತು ಐಎಸ್ ಐ ನ ಉನ್ನತ ಶ್ರೇಣಿಯ ಅಧಿಕಾರಿ ಕರ್ನಲ್ ಸಲೀಂ ಇಬ್ಬರೂ ಬಾಲಾಕೋಟ್ ಉಗ್ರ ನೆಲೆಯಲ್ಲಿ ಇದ್ದರು ಎನ್ನಲಾಗಿದೆ. ಭಾರತೀಯ ವಾಯುಪಡೆ ದಾಳಿಯಿಂದಾಗಿ ಅಜರ್ ಮಸೂದ್ ಮತ್ತು ಕರ್ನಲ್ ಸಲೀಂ ತೀವ್ರ ಗಾಯಗೊಂಡಿದ್ದು, ಶೀಘ್ರವೇ ಅವರಿಬ್ಬರನ್ನೂ ಸೇನಾ ಆಸ್ಪತ್ರೆಗೆ ಸೇರಿಸಲಾಗಿತ್ತು.
ಅವರಲ್ಲಿ ಕರ್ನಲ್ ಸಲೀಂ ಆಗಲೇ ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಜೈಶ್ ಮುಖ್ಯಸ್ಥ ಮಸೂದ್ ಅಜರ್ ಶನಿವಾರ ಅಂದರೆ ಮಾರ್ಚ್ ಎರಡರಂದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.
‘ಬಾಲಾಕೋಟ್ ದಾಳಿಯ ಸ್ಥಳವನ್ನು ಪಾಕಿಸ್ಥಾನ ಸೇನೆ ತಕ್ಷಣವೇ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಸ್ಥಳೀಯ ಪೊಲೀಸರಿಗೆ ಕೂಡಾ ದಾಳಿ ನಡೆದ ಸ್ಥಳಕ್ಕೆ ಹೋಗಲು ಅವಕಾಶ ನೀಡಿರಲಿಲ್ಲ. ಆ ಸ್ಥಳದಿಂದ ಸುಮಾರು 35 ಹೆಣಗಳನ್ನು ಸಾಗಿಸುವುದನ್ನು ನಾನು ನೋಡಿದ್ದೇನೆ’ ಎಂದು ಪ್ರತ್ಯಕ್ಷದರ್ಶಿಯೋರ್ವ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾನೆ.
ಆದರೆ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಎರಡು ದಿನಗಳ ನಂತರ ಮಸೂದ್ ಅಜರ್ ಮೂತ್ರ ಪಿಂಡದ ವೈಫಲ್ಯದಿಂದ ರಾವಲ್ಪಿಂಡಿ ಸೇನಾ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿಕೆ ನೀಡಿದ್ದರು. ಏರ್ ಸ್ಟ್ರೈಕ್ ನಲ್ಲಿ ಮಸೂದ್ ಅಜರ್ ಹತನಾಗಿರುವ ವಿಚಾರವನ್ನು ಮರೆಮಾಚಲು ಪಾಕಿಸ್ಥಾನ ಈ ರೀತಿ ಹೇಳಿಕೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.