ಮುಂಬೈ: ಭಾರತ ಕ್ರಿಕೆಟ್ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್ ಗೆಲುವು ಸಾಧಿಸಿತ್ತು. ಇಂದಿಗೆ ಈ ಗೆಲುವಿಗೆ 11 ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ ವಿಶ್ವಕಪ್ ವಿಜೇತ ತಂಡದ ಹಲವರು ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 2011ರ ವಿಶ್ವಕಪ್ ವಿಜೇತ ತಂಡದಲ್ಲಿದ್ದರು. ಫೈನಲ್ ಪಂದ್ಯದಲ್ಲಿ ವಿರಾಟ್ 35 ರನ್ ಗಳಿಸಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದ ವಿರಾಟ್ ಅಂದು ಗೌತಮ್ ಗಂಭೀರ್ ಜೊತೆಗೆ 83 ರನ್ ಗಳ ಬಹುಮೂಲ್ಯ ಜೊತೆಯಾಟ ನಡೆಸಿದ್ದರು.
ಇಂದು ಆ ಬಗ್ಗೆ ಮಾತನಾಡಿರುವ ವಿರಾಟ್, “ನಾನು ಬ್ಯಾಟಿಂಗ್ ಗೆ ಇಳಿದಾಗ 31 ರನ್ ಗೆ ಎರಡು ವಿಕೆಟ್ ಹೋಗಿತ್ತು. ಸಚಿನ್ ಮತ್ತು ಸೆಹ್ವಾಗ್ ಔಟಾಗಿದ್ದರು. ನಾನು ಬ್ಯಾಟಿಂಗ್ ಗೆ ಬಂದಾಗ “ ಪಾರ್ಟ್ನರ್ ಶಿಪ್ ಮಾಡಿ’ ಎಂದು ಸಚಿನ್ ಹೇಳಿದರು. ಹಾಗೆಯೇ ನಾನು ಮತ್ತು ಗಂಭೀರ್ ಜೊತೆಯಾಟವಾಡಿದೆವು. ಅಂದು ನಾನು 35 ರನ್ ಗಳಿಸಿದ್ದೆ. ಬಹುಶಃ ನನ್ನ ಜೀವನದ ಅತ್ಯಮೂಲ್ಯ 35 ರನ್ ಅಂದು ನಾನು ಗಳಿಸಿದ್ದೆ” ಎಂದು ವಿರಾಟ್ ಕೊಹ್ಲಿ ಆರ್ ಸಿಬಿಯ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಹೊಸ ದಾಖಲೆಯ ಉತ್ಸಾಹದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ
“ವಿಶ್ವಕಪ್ ಗೆದ್ದ ಸಂತಸ ಅದ್ಭುತ. ಕ್ರೀಡಾಂಗಣದ ಜನರು ‘ವಂದೇ ಮಾತರಂ’ ಹಾಡು ಹಾಡುತ್ತಿದ್ದ ನೆನಪು ಇಂದೂ ಹಸಿರಾಗಿದೆ” ಎಂದು ವಿರಾಟ್ ಹೇಳಿದ್ದಾರೆ.