Advertisement

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಹುಪಾಲು ಹುದ್ದೆ ಖಾಲಿ

01:09 AM Mar 07, 2023 | Team Udayavani |

ಉಡುಪಿ: ನಗರ ಸ್ಥಳೀಯ ಸಂಸ್ಥೆಗಳ ಸೇವೆ ಜನರಿಗೆ ಹೆಚ್ಚು ಆವಶ್ಯಕತೆಯಿರುತ್ತದೆ. ನಿರ್ದಿಷ್ಟ ಪ್ರಮಾಣದಲ್ಲಿ ಸಿಬಂದಿ ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ಸೇವೆಯಲ್ಲಿ ತೊಡಕಾಗುತ್ತಿದೆ.
ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 516 ಹಾಗೂ ದ.ಕ. ನಗರ ಸ್ಥಳೀಯ ಸಂಸ್ಥೆಗಳಲ್ಲಿ 961 ಹುದ್ದೆಗಳು ಖಾಲಿಯಿವೆ. ಇದರಲ್ಲಿ ಬಿ ಮತ್ತು ಸಿ ದರ್ಜೆಯ ಹುದ್ದೆಗಳೇ ಅಧಿಕ.

Advertisement

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳು ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಇರುತ್ತವೆ. ಬಹುತೇಕ ಕಡೆಗಳಲ್ಲಿ ಸಿಬಂದಿ ಕೊರತೆ ಇರುವುದರಿಂದ ಸಾರ್ವಜನಿಕರು ಕೆಲವು ಸೇವೆಗಳನ್ನು ಪಡೆಯಬೇಕಾದರೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಹೊರಗುತ್ತಿಗೆ ನೌಕರರ ಮೂಲಕ ಸೇವೆ ಒದಗಿಸಲಾಗುತ್ತಿದೆ.

ಟೆಕ್ನಿಕಲ್‌ ಅಸಿಸ್ಟೆಂಟ್‌, ಅಡ್ಮಿನಿಸ್ಟ್ರೇಟಿವ್‌, ಅಕೌಂಟ್‌ ಅಧಿಕಾರಿ, ಅಸಿಸ್ಟೆಂಟ್‌ ಹಾಗೂ ಜೂನಿಯರ್‌ ಎಂಜಿನಿಯರ್‌, ಹಿರಿಯ, ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆ, ಕಂದಾಯ ನಿರೀಕ್ಷಕರು, ಉದ್ಯಾನ ನಿರ್ವಹಣೆಗೆ ಕೆಲಸಗಾರರ ಕೊರತೆ ಸೇರಿದಂತೆ ಪ್ರಮುಖವಾಗಿ ಬೇಕಿರುವ ಹಲವು ಹುದ್ದೆಗಳು ಖಾಲಿ ಇರುವುದರಿಂದ ಎಲ್ಲ ವಿಭಾಗಗಳಲ್ಲೂ ನಿರ್ವಹಣೆಯ ಮೇಲೆ ಹೊಡೆತ ಬೀಳುತ್ತಿದೆ. ಇದರಿಂದಾಗಿ ಈಗಾಗಲೇ ವಿವಿಧ ಇಲಾಖೆಗಳಲ್ಲಿ ಕರ್ತವ್ಯದಲ್ಲಿ ಇರುವ ಸಲ್ಲಿಸುತ್ತಿರುವ ಹಿರಿಯ, ಕಿರಿಯ ಅಧಿಕಾರಿಗಳ ಮೇಲೆ ಒತ್ತಡವೂ ಹೆಚ್ಚಾಗುತ್ತಿದೆ.

ಚುನಾವಣೆ ಘೋಷಣೆಯಾದರೆ ನೇಮಕಾತಿ ಆಗದು
ಸರಕಾರದಿಂದ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ ನಿರೀಕ್ಷಿತ ವೇಗದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಲೋಕಸೇವಾ ಆಯೋಗದಿಂದ ನಡೆದಿರುವ ನೇಮಕಾತಿಯೇ ಇನ್ನು ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಬೇಸಗೆ ಸಮೀಪಿಸುತ್ತಿರುವುದರಿಂದ ನೀರಿನ ಸಮಸ್ಯೆ ಸಹಿತ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಇವೆಲ್ಲವನ್ನು ಸಮರ್ಥವಾಗಿ ನಿಭಾಯಿಸಲು ಸಿಬಂದಿ ಭರ್ತಿಯನ್ನು ಶೀಘ್ರ ನಡೆಸಬೇಕಾಗುತ್ತದೆ. ಇನ್ನು ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಅನಂತರ ಚುನಾವಣೆ ಮುಗಿದು ಹೊಸ ಸರಕಾರ ರಚನೆಯಾಗುವವರೆಗೂ ನೇಮಕಾತಿ ನಡೆಯುವುದು ಕಷ್ಟಸಾಧ್ಯ. ಹೀಗಾಗಿ ಸರಕಾರ ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೂ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next