Advertisement

ಧಾರಾವಾಹಿಯಲ್ಲೇ ಜನಪ್ರಿಯತೆ ಹೆಚ್ಚು

10:59 AM Apr 18, 2018 | |

ಈಗಾಗಲೇ ಕಿರುತೆರೆಯ ಬಹಳಷ್ಟು ನಟಿಯರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಆ ಪೈಕಿ ಕೆಲವರು ಗೆಲುವು ಕಂಡಿರುವುದುಂಟು. ಇನ್ನು ಕೆಲವರು ಪುನಃ ಕಿರುತೆರೆಯತ್ತ ಮುಖ ಮಾಡಿರುವುದೂ ಉಂಟು. ಬೆರಳೆಣಿಕೆಯಷ್ಟು ನಟಿಯರು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಲೇ ತಮ್ಮ ಕಲಾ ಬದುಕು ಕಟ್ಟಿಕೊಳ್ಳುವ ಯತ್ನದಲ್ಲಿದ್ದಾರೆ. ಈಗ “ಗಾಂಧಾರಿ’ ಧಾರಾವಾಹಿಯ ನಾಯಕಿ ಕಾವ್ಯ ಗೌಡ ಕೂಡ ಸಿನಿಮಾಗೆ ಬಂದಿದ್ದಾರೆ. ಅವರು “ಬಕಾಸುರ’ ಚಿತ್ರದಲ್ಲಿ ನಟಿಸಿದ್ದೂ ಆಗಿದೆ. ಮುಂದಿನ ವಾರ ತೆರೆಗೆ ಬರಲಿರುವ ತಮ್ಮ ಚೊಚ್ಚಲ ಚಿತ್ರ “ಬಕಾಸುರ’ ಕುರಿತು ಕಾವ್ಯ ಗೌಡ, “ಉದಯವಾಣಿ’ಯ “ಚಿಟ್‌ಚಾಟ್‌’ನಲ್ಲಿ ಮಾತನಾಡಿದ್ದಾರೆ.

Advertisement

* ಮೊದಲ ಚಿತ್ರದ ಅನುಭವ ಹೇಗಿತ್ತು?
“ಬಕಾಸುರ’ ನನ್ನ ಅಭಿನಯದ ಮೊದಲ ಚಿತ್ರ. ಅದೊಂದು ಒಳ್ಳೆಯ ಅವಕಾಶ. ನಟನೆ ಅನ್ನುವುದು ನಿತ್ಯದ ಕಾಯಕ. ಅದರ ಕಲಿಕೆ ನಿರಂತರ. ಧಾರಾವಾಹಿ ಮತ್ತು ಸಿನಿಮಾ ನಡುವೆ ನನಗೆ ಅಂತಹ ವ್ಯತ್ಯಾಸವೇನೂ ಕಾಣಲಿಲ್ಲ. ಯಾಕೆಂದರೆ, ಧಾರಾವಾಹಿಯಲ್ಲಿ ದಿನಕ್ಕೆ ಹತ್ತರಿಂದ ಹದಿನೈದು ಸೀನ್‌ಗಳನ್ನು ಚಿತ್ರೀಕರಿಸಲಾಗುತ್ತದೆ. ಆದರೆ, ಸಿನಿಮಾ ಹಾಗಲ್ಲ, ಎರಡು ಅಥವಾ ಮೂರು ಸೀನ್‌ ತೆಗೆದರೆ ಅದೇ ಹೆಚ್ಚು. ಸಿನಿಮಾದಲ್ಲಿ ಸಾಕಷ್ಟು ಅನುಭವ ಆಗಿದೆ. ಫ್ಯಾಮಿಲಿಯೊಂದಿಗೆ ಕೆಲಸ ಮಾಡಿದ ಫೀಲ್‌ ಇತ್ತು. ಒಳ್ಳೆಯ ನಟರ ಜೊತೆಗೆ ಕೆಲಸ ಮಾಡಿದ ಖುಷಿ ಇದೆ. “ಬಕಾಸುರ’ ಮೂಲಕ ಇನ್ನಷ್ಟು ಜನರಿಗೆ ಪರಿಚಿತಳಾಗುತ್ತೇನೆ. ಒಟ್ಟಾರೆ, ಒಳ್ಳೆಯ ತಂಡ, ಒಳ್ಳೆಯ ಕಥೆ, ಪಾತ್ರ “ಬಕಾಸುರ’ ಚಿತ್ರದಲ್ಲಿದೆ.

* ಇಲ್ಲಿ ನೀವು ಲಾಯರ್‌ ಅಂತೆ?
ಹೌದು, ನಾನು “ಬಕಾಸುರ’ ಚಿತ್ರದಲ್ಲಿ ಲಾಯರ್‌ ಪಾತ್ರ ನಿರ್ವಹಿಸಿದ್ದೇನೆ. ಚಿತ್ರದ ಮುಖ್ಯವಾದ ಪಾತ್ರವದು. ಅದು ನನಗೆ ಚಾಲೆಂಜಿಂಗ್‌ ಪಾತ್ರ ಮತ್ತು ಹೊಸ ರೀತಿಯಾಗಿತ್ತು. ಹೈಲೆಟ್‌ ಪಾತ್ರದ ಮೂಲಕವೇ ನಾನು ಸಿನಿಮಾಗೆ ಎಂಟ್ರಿ ಕೊಟ್ಟಿದ್ದೇನೆ ಎನ್ನಬಹುದು. ಚಿತ್ರದಲ್ಲಿ ಲಾಯರ್‌ ಆಗಿ ಏನೆಲ್ಲಾ ಮಾಡ್ತೀನಿ ಅನ್ನೋದು ಸಸ್ಪೆನ್ಸ್‌. ವಾದ ಮಾಡ್ತಾಳಾ, ಇಲ್ಲವೋ ಎಂಬುದನ್ನು ಚಿತ್ರದಲ್ಲೇ ಕಾಣಬೇಕು. ಅಭಿನಯಕ್ಕೆ ಇಲ್ಲಿ ಹೆಚ್ಚು ಸ್ಕೋಪ್‌ ಇದೆ.

* ಹಾಗಾದರೆ, ಚಿತ್ರದ ತುಂಬಾ ವಾದ ಮಾಡ್ತೀರಿ ಅನ್ನಿ?
ಹಾಗಂತ ಅಲ್ಲ, ಲಾಯರ್‌ ಪಾತ್ರಕ್ಕೆ ಏನೆಲ್ಲಾ ತಯಾರಿ ಬೇಕೋ ಅದನ್ನು ಮಾಡಿಕೊಂಡಿದ್ದೆ. ಇಲ್ಲಿ ವಾದ ಮಾಡುವ ದೃಶ್ಯಗಳೇನೂ ಹೆಚ್ಚಿಲ್ಲ. ಆದರೆ, ಆ ಪಾತ್ರಕ್ಕೊಂದು ವಿಶೇಷತೆ ಇದೆ. ಒಂದಂತೂ ನಿಜ, ಕಿರುತೆರೆಯಲ್ಲಿ ಎಲ್ಲರೂ ನನ್ನನ್ನು ದೃಷ್ಟಿ, ದೀಪ್ತಿ ಅಂತಾನೇ ಕರೆಯುತ್ತಾರೆ. ನಾನು ಎಲ್ಲೇ ಹೋಗಲಿ, ಆ ಹೆಸರುಗಳ  ಮೂಲಕವೇ ಗುರುತಿಸುತ್ತಾರೆ. “ಬಕಾಸುರ’ ರಿಲೀಸ್‌ ಆದ ಬಳಿಕ ಎಲ್ಲರೂ, “ಬಕಾಸುರ’ ಕಾವ್ಯಾ ಅನ್ನೋದು ಗ್ಯಾರಂಟಿ. ಅಷ್ಟರಮಟ್ಟಿಗೆ ಪಾತ್ರ ಗಮನಸೆಳೆಯುತ್ತೆ.

* ಕಿರುತೆರೆಯಿಂದ ಹಿರಿತೆರೆಗೆ ಬಂದಿದ್ದು ಕಷ್ಟ ಆಯ್ತಾ?
ಹೇಳಿಕೊಳ್ಳುವಂತಹ ಕಷ್ಟವೇನೂ ಆಗಲಿಲ್ಲ. ಯಾಕೆಂದರೆ, ಕಥೆ ಮತ್ತು ಪಾತ್ರದ ಬಗ್ಗೆ ತಿಳಿದುಕೊಂಡಾಗಲೇ, ಮನಸ್ಸಲ್ಲೊಂದು ಪಾತ್ರದ ಕಲ್ಪನೆ ಓಡುತ್ತಿತ್ತು. ಮೊದಲೇ ಸಂಭಾಷಣೆಯನ್ನು ಅಭ್ಯಾಸ ಮಾಡಿಕೊಂಡಿರುತ್ತಿದ್ದೆ. ಸೆಟ್‌ನಲ್ಲಿ, ರೋಹಿತ್‌ ಜೊತೆಗೆ ಚರ್ಚಿಸಿ, ಸೀನ್‌ ಹೇಗೆಲ್ಲಾ ಮಾಡಬಹುದು, ಡೈಲಾಗ್‌ ಹೇಗೆ ಹೇಳಬೆಕು, ಎಕ್ಸ್‌ಪ್ರೆಷನ್‌ ಹೇಗಿರಬೇಕು ಎಂಬಿತ್ಯಾದಿ ಬಗ್ಗೆ ಚರ್ಚಿಸಿದ ನಂತರವೇ, ನಾವು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೆವು. ಹಾಗಾಗಿ, ಯಾವುದೂ ಕಷ್ಟ ಆಗಲಿಲ್ಲ.

Advertisement

* ಎಲ್ಲಾ ಸರಿ ಬಕಾಸುರ ಯಾರು?
ಹ್ಹಹ್ಹಹ್ಹಾ… ಅದೇ ಚಿತ್ರದ ಸಸ್ಪೆನ್ಸ್‌. ರವಿಚಂದ್ರನ್‌ ಸರ್‌ ಇದ್ದಾರೆ. ರೋಹಿತ್‌ ಕೂಡ ಇದ್ದಾರೆ. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ. ಯಾರು ಹೇಗೆ ಇರುತ್ತಾರೆ ಎಂಬುದನ್ನು ಹೇಳುವುದಕ್ಕಾಗುವುದಿಲ್ಲ. “ಬಕಾಸುರ’ ಯಾರೆಂಬ ಪ್ರಶ್ನೆಗೆ ಸಿನಿಮಾದಲ್ಲೇ ಉತ್ತರ ಸಿಗುತ್ತೆ.

* ರವಿಚಂದ್ರನ್‌ ಜೊತೆಗೆ ನಟಿಸಿದ ಅನುಭವ ಹೇಗಿತ್ತು?
ನನಗೆ ರವಿ ಸರ್‌ ಕಾಂಬಿನೇಷನ್‌ ಇರಲಿಲ್ಲ. ಆದರೆ, ಅವರ ಚಿತ್ರದಲ್ಲಿ ನಾನಿದ್ದೇನೆ ಎಂಬ ಖುಷಿ ಇದೆ. ಉಳಿದಂತೆ ದೊಡ್ಡ ತಾರಾಬಳಗದ ಜತೆ ಕೆಲಸ ಮಾಡಿದ್ದಕ್ಕೆ ತೃಪ್ತಿ ಇದೆ.

* ಸಿನಿಮಾ ದೊಡ್ಡ ಕ್ಯಾನ್ವಾಸ್‌ ಆಗಿರುವುದರಿಂದ ಹೆಚ್ಚು ಜನಪ್ರಿಯತೆ ಸಿಗುತ್ತದೆ ಎಂದನಿಸುತ್ತದಾ?
ಸಿನಿಮಾಗಿಂತ ಸೀರಿಯಲ್ಸ್‌ನಲ್ಲೇ ಪಾಪ್ಯುಲಾರಿಟಿ ಹೆಚ್ಚು. ಸಿನಿಮಾ ಕ್ಲಿಕ್‌ ಆದಲ್ಲಿ ಮಾತ್ರ ಸ್ಟಾರ್‌ ಪಟ್ಟ. ಇಲ್ಲವಾದರೆ ಇಲ್ಲ. ಆದರೆ, ಸೀರಿಯಲ್‌ ಮನೆಮನಕ್ಕೂ ತಲುಪುತ್ತೆ. ಹಾಗಾಗಿ, ಜನರ ಜೊತೆ ನಿತ್ಯವೂ ಒಡನಾಟ ಇರುವುದು ಕಿರುತೆರೆ ಮಾತ್ರ. ಕಿರುತೆರೆಯೇ ನನಗೆ ಹೆಚ್ಚು ಪಾಪ್ಯುಲಾರಿಟಿ ತಂದುಕೊಟ್ಟಿದೆ. ಸಿನಿಮಾ ಮುಂದೆ ಹೇಗೋ ಗೊತ್ತಿಲ್ಲ. 

* ಮುಂದೆ ಯಾವ ಚಿತ್ರ ಒಪ್ಪಿದ್ದೀರಿ?
ಒಂದಷ್ಟು ಅವಕಾಶಗಳು ಬರುತ್ತಿವೆ. ಆದರೆ, ಯಾವುದನ್ನೂ ಒಪ್ಪಿಲ್ಲ. “ಬಕಾಸುರ’ ಬಿಡುಗಡೆ ಬಳಿಕ ಯೋಚಿಸುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next