Advertisement
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ( ಕೆಆರ್‌ಐಡಿಎಲ್) ನಿರ್ವಹಿಸುತ್ತಿದ್ದ ಶುದ್ಧ ನೀರಿನ ಘಟಕಗಳನ್ನು ಈಗ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಗೆ ವಹಿಸಿ ಕೈ ತೊಳೆದುಕೊಂಡಿದೆ. ಈ ಎಲ್ಲಾ ಘಟಕಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆ ಈಗ ಪರದಾಡುತ್ತಿದೆ. ಹಾಸನ ಜಿಲ್ಲೆಯಲ್ಲಿ ಒಟ್ಟು 486 ಶುದ್ಧ ನೀರಿನ ಘಟಕಗಳಿವೆ. ಆ ಪೈಕಿ ನಗರ, ಪಟ್ಟಣ ಪ್ರದೇಶಗಳಲ್ಲಿ 26 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 460 ಘಟಕಗಳಿವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ 59 ಘಟಕ ಸ್ಥಗಿತಗೊಂಡಿವೆ. ಸ್ವಯಂ ಸೇವಾ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ನಿರ್ವಹಿಸುವ ಘಟಕಗಳು ಸಮರ್ಪಕವಾಗಿ ನಡೆಯುತ್ತಿದ್ದು, ಇನ್ನುಳಿದವು ಆಗಿಂದಾಗ್ಗೆ ಕೆಟ್ಟು ನಿಲ್ಲುತ್ತವೆ. ಇನ್ನೂ ಹೊಸದಾಗಿ 65 ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ.
Related Articles
Advertisement
ಗ್ರಾಮೀಣ ಪ್ರದೇಶದ ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ ಹೊಣೆಯನ್ನು ಈಗ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ವಹಿಸಿಕೊಂಡಿದೆ. ಅಂದರೆ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ 460 ಘಟಕ ಮತ್ತು ಹೊಸದಾಗಿ ನಿರ್ಮಾಣವಾಗಲಿರುವ 65 ಘಟಕ ಸೇರಿ ಒಟ್ಟು 525 ಘಟಕಗಳನ್ನೂ ಗ್ರಾಮೀಣ ಕುಡಿಯುವ ನೀರಿನ ಪೂರೈಕೆ ಇಲಾಖೆಯೇ ನಿರ್ವಹಣೆ ಮಾಡಬೇಕಾಗಿದೆ.
ವೆಚ್ಚ ಭರಿಸಿವೆ:ದುರಸ್ತಿಯಾಗಬೇಕಾಗಿರುವ 59 ಶುದ್ಧ ನೀರಿನ ಘಟಕಗಳ ದುರಸ್ತಿ ಹಾಗೂ ನಿರ್ವಹಣೆಗೆ ಟೆಂಡರ್ ಕರೆದಿದೆ. ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳು 5 ವರ್ಷ ಘಟಕಗಳನ್ನು ನಿರ್ವಹಣೆ ಮಾಡಬೇಕೆಂಬ ಷರತ್ತು ವಿಧಿಸಿದ್ದು,1 ಘಟಕದ ನಿರ್ವಹಣೆಗೆ ತಿಂಗಳಿಗೆ 3000 ರೂ.ಗಳನ್ನು ನಿರ್ವಹಣೆಯ ವೆಚ್ಚವನ್ನು ಇಲಾಖೆ ಭರಿಸಲಿದೆ. ಇನ್ನುಳಿದ ಘಟಕಗಳ ನಿರ್ವಹಣೆಯನ್ನೂ ಗುತ್ತಿಗೆ ನೀಡಲು ಇಲಾಖೆ ಟೆಂಡರ್ ಆಹ್ವಾನಿಸಿದ್ದು, ಎರಡು ಕಂಪನಿಗಳು ಮುಂದೆ ಬಂದಿವೆ. ಬೆಂಗಳೂರಿನ ಅಕ್ವಾಶೈನ್ ಕಂಪನಿ 54 ಘಟಕಗಳ ನಿರ್ವಹಣೆಗೆ ಮುಂದೆ ಬಂದಿದ್ದು, ಬೆಂಗಳೂರಿನ ನ್ಯೂಟೆಕ್ ಸೋಲಾರ್ ಸಿಸ್ಟಂ ಕಂಪನಿ 64 ಘಟಕಗಳ ನಿರ್ವಹಣೆ ವಹಿಸಿಕೊಂಡಿದೆ.
ಇನ್ನುಳಿದ ಘಟಕಗಳ ನಿರ್ವಹಣೆ ಹೊಣೆ ಇನ್ನೂ ನಿರ್ಧಾರವಾಗಬೇಕಾಗಿದೆ. ಹೊಸದಾಗಿ ನಿರ್ಮಾಣವಾಗಲಿರುವ 65 ಶುದ್ಧನೀರಿನ ಘಟಕಗಳ ವೆಚ್ಚ ಸುಮಾರು 12 ಲಕ್ಷ ರೂ. ಈ ಘಟಕಗಳನ್ನು ನಿರ್ಮಿಸಿದ ಸಂಸ್ಥೆಯೇ 5 ವರ್ಷ ನಿರ್ವ ಹಣೆ ಮಾಡಬೇಕು. ಬೋರ್‌ವೆಲ್‌ಗಳಿಂದ ನೀರು ಪಡೆದು ಆ ನೀರನ್ನು ಶುದ್ಧೀಕರಿಸಿ 2 ರೂ.ಗೆ 20 ಲೀಟರ್ ನೀರು ಪೂರೈಸುವುದರೊಂದಿಗೆ ಈ ಘಟಕಗಳ ನಿರ್ವ ಹಣೆಗೆ ಗ್ರಾಮೀಣ ನೀರು ಪೂರೈಕೆ ಇಲಾಖೆ ಮಾಸಿಕ 3000 ರೂ. ಪಾವತಿ ಮಾಡುತ್ತದೆ. ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಈ ವೆಚ್ಚವನ್ನು ಪಾವತಿಸುತ್ತವೆ.
ಕೆಲವೇ ದಿನಗಳಲ್ಲಿ ಚಾಲೂ ಆಗಲಿವೆ: ಇಲಾಖೆ ಆಯುಕ್ತರ ಸೂಚನೆಯಂತೆ ಕೆಆರ್‌ಐಡಿಎಲ್ ನಿರ್ವಹಿಸುತ್ತಿದ್ದ ಘಟಕಗಳನ್ನು ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆ ವಹಿಸಿಕೊಂಡಿದೆ. ದುರಸ್ತಿಯಾಗಬೇಕಾದ ಎಲ್ಲಾ ಘಟಕ ಹಾಗೂ ಇಲಾಖೆ ವ್ಯಾಪ್ತಿಗೆ ಬರುವ ಗ್ರಾಮೀಣ ಪ್ರದೇಶದ ಎಲ್ಲಾ ಘಟಕಗಳ ನಿರ್ವಹಣೆಗೆ ಈಗಾಗಲೇ ಟೆಂಡರ್ ಕರೆದಿದ್ದು, ಕೆಲವೇ ದಿನಗಳಲ್ಲಿ ಎಲ್ಲಾ ಘಟಕಗಳಿಗೆ ಚಾಲನೆ ಸಿಗಲಿದೆ. ಇನ್ನು ಮುಂದೆ ಆಯಾ ತಾಲೂಕಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಿರಿಯ ಎಂಜನಿಯರ್‌ಆಗಿಂದಾಗ್ಗೆ ಘಟಕಗಳನ್ನು ಪರಿವೀಕ್ಷಣೆ ಮಾಡುವಂತೆ ಸೂಚನೆ ನೀಡಲಾಗಿದೆ. ತಿಂಗಳಿಗೊಮ್ಮೆ ನೀರನ್ನು ಪರೀಕ್ಷೆ ಮಾಡಲಾಗುತ್ತದೆ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ತಿಳಿಸಿದ್ದಾರೆ.
-ಎನ್.ನಂಜುಂಡೇಗೌಡ