Advertisement

ಬಹುತೇಕ ಅಂಗನವಾಡಿಗೆ ಬಾಡಿಗೆ ಕಟ್ಟಡವೇ ಸೂರು

12:39 PM Dec 15, 2018 | Team Udayavani |

ಭಾಲ್ಕಿ: ಮಕ್ಕಳ ದೈಹಿಕ, ಭಾವನಾತ್ಮಕ ಬೆಳವಣಿಗೆ ಹಾಗೂ ವಿವಿಧ ಪೌಷ್ಠಿಕಾಂಶಗಳನ್ನು ಒದಗಿಸುವ ಉದ್ದೇಶಕ್ಕಾಗಿ ಇರುವ ಅಂಗನವಾಡಿ ಕೇಂದ್ರಗಳು ಪಟ್ಟಣದಲ್ಲಿ ಬಹುತೇಕ ಬಾಡಿಗೆ ಕಟ್ಟದಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಆದರೆ ಯಾವ ಭಾಗದ ಅಂಗನವಾಡಿ ಕೇಂದ್ರ ಎಲ್ಲಿದೆ ಎಂಬುದ ಕುರಿತು ನಾಗರಿಗೆ ಮಾಹಿತಿಯೇ ಇಲ್ಲದಾಗಿದೆ.

Advertisement

ಹೀಗಿರುವಾಗ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಸೇರಿಸಿ ಸರ್ಕಾರಿ ಸೌಲಭ್ಯ ಒದಗಿಸುವುದು ದೂರದ ಮಾತು. ಭಾಲ್ಕಿ ಪಟ್ಟಣದಲ್ಲಿರುವ ಒಟ್ಟು 32 ಅಂಗನವಾಡಿ ಕೇಂದ್ರಗಳಲ್ಲಿ ಮೂರು ಕೇಂದ್ರಗಳು ಮಾತ್ರ ಸರ್ಕಾರಿ ಕಟ್ಟಡದಲ್ಲಿ ನಡೆಯುತ್ತಲಿವೆ. ಉಳಿದ 29 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಪಟ್ಟಣದ ಸಿದ್ಧಾರ್ಥನಗರ ಬಡಾವಣೆ, ಖಾಜಾ ಬಂದೇನವಾಜ ಬಡಾವಣೆ ಮತ್ತು ದಾಡಗಿ ಬೇಸ್‌ ಹತ್ತಿರದ ಸರ್ಕಾರಿ ಶಾಲಾ ಆವರಣದಲ್ಲಿಯ ಮೂರು ಅಂಗನವಾಡಿ ಕೇಂದ್ರಗಳು ಮಾತ್ರ ಸರ್ಕಾರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಲಿವೆ. 

ಬಹುತೇಕ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳ ಮಾಹಿ ಇಲ್ಲದೇ ಇಲ್ಲಿಯ ನಾಗರಿಕರಿಗೆ ಮರಿಚೀಕೆಯಾಗಿವೆ. ಯಾವ ಅಂಗನವಾಡಿ ಕೇಂದ್ರ ಎಲ್ಲಿದೆ. ಅಲ್ಲಿಯ ಮೇಲ್ವಿಚಾರಕರು ಮತ್ತು ಕಾರ್ಯಕರ್ತೆಯರು ಯಾರಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಹರ ಸಾಹಸ ಪಡಬೇಕಾಗುತ್ತಿದೆ. 

ಸಂಬಂಧಪಟ್ಟ ಮೇಲಧಿಕಾರಿಗಳು ತಪಾಸಣೆ ನಡೆಸುವುದೂ ಸರ್ಕಾರಿ ಅಂಗನವಾಡಿ ಕೇಂದ್ರಗಳಲ್ಲಿ ಮಾತ್ರ. ಹೀಗಾಗಿ ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಯಾರ ಭಯವೂ ಇಲ್ಲದಂತಾಗಿದೆ. ಕಾರಣ ಪಟ್ಟಣದ ಚಿಕ್ಕ ಮಕ್ಕಳು ಸರ್ಕಾರದ
ಪೌಷ್ಠಿಕಾಂಶಯುಕ್ತ ಆಹಾರದ ಕೊರತೆ ಅನುಭವಿಸುತ್ತಿದ್ದಾರೆ.
 
ಆದರೆ ಗ್ರಾಮೀಣ ಭಾಗದಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಲಿವೆ. ಪ್ರತಿಯೊಂದು ಗ್ರಾಮಗಳಲ್ಲೂ 3ರಿಂದ 6 ವರ್ಷದ ಮಕ್ಕಳು ಅಂಗನವಾಡಿ ಕೇಂದ್ರದಲ್ಲಿ ಸರ್ಕಾರದ ಪೌಷ್ಟಿಕ ಆಹಾರ ಸೇವಿಸುದರೊಂದಿಗೆ ಶಾಲಾಪೂರ್ವ ಅಕ್ಷರಭ್ಯಾಸದಲ್ಲೂ ತೊಡಗಿದ್ದಾರೆ. 

ಪಟ್ಟಣದ ನಾಗರಿಕರಿಗೆ ಪೂರ್ವ ಪ್ರಾಥಮಿಕ ಶಾಲೆಗಳೇ ಗತಿ. ಪಟ್ಟಣದ ವಿವಿಧ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸಿ, ದುಬಾರಿ ಶುಲ್ಕ ನೀಡಿ ಮನೆಯಿಂದ ಉತ್ತಮ ಆಹಾರ ಕಟ್ಟಿಕೊಡಬೇಕಿದೆ. ಹಾಗಾಗಿ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.
 
ಗರ್ಭಿಣಿಯರು ತಾಯಿ ಕಾರ್ಡ್‌ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಅಂಗನವಾಡಿ ಮೇಲ್ವಿಚಾರಕರ ಅವಶ್ಯಕತೆ ಇದೆ. ಆದರೆ ನಮ್ಮ ವಾರ್ಡ್‌ನ ಅಂಗನವಾಡಿ ಕೇಂದ್ರ ಎಲ್ಲಿದೇ, ಅಲ್ಲಿಯ ಮೇಲ್ವಿಚಾರಕರು ಯಾರು ಎನ್ನುವುದೇ ನಮಗೆ ತಿಳಿದಿಲ್ಲ. ಹೀಗಾಗಿ ಸರ್ಕಾರದ ಸೌಲಭ್ಯ ಪಡೆಯಲು ದಲ್ಲಾಳಿಗಳ ಮೊರೆ ಹೋಗಬೇಕಾಗಿದೆ ಎನ್ನುತ್ತಾರೆ ಪಟ್ಟಣದ ಖಂಡ್ರೆಗಲ್ಲಿ ನಿವಾಸಿ ಶಿಲ್ಪಾ ಶಿವಪುತ್ರ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣದ ನಾಗರಿಕರಿಗೆ ಅಂಗನವಾಡಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿ, ಪಟ್ಟಣದ ಮಕ್ಕಳು ಅಂಗನವಾಡಿ ಕೇಂದ್ರದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವಂತೆ ಸಹಕರಿಸಬೇಕು ಎನ್ನುವುದು ಪಟ್ಟಣದ ನಾಗರಿಕರ ಒತ್ತಾಸೆಯಾಗಿದೆ. 

Advertisement

ಪಟ್ಟಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳಾವಕಾಶದ ಕೊರತೆಯಿಂದ ಸ್ವಂತ ಕಟ್ಟಡ ನಿರ್ಮಿಸಲು ಸಾಧ್ಯವಾಗಿಲ್ಲ. ಕೆಲವು ದಿನಗಳಲ್ಲಿ ಆದಷ್ಟು ಬೇಗ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲಾಗುವುದು.
 ಪ್ರಭಾಕರ, ಸಿಡಿಪಿಒ ಭಾಲಿ

Advertisement

Udayavani is now on Telegram. Click here to join our channel and stay updated with the latest news.

Next