Advertisement

ಬಹುಮುಖೀ ವಿದ್ಯಾಸಂಪನ್ನರಾದರೆ ಉದ್ಯೋಗಾವಕಾಶ

02:09 PM Nov 19, 2018 | Team Udayavani |

ದಾವಣಗೆರೆ: ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಂದು ಬಹುಮುಖೀ ವಿದ್ಯಾಸಂಪನ್ನರಾಗಬೇಕಿದೆ ಎಂದು ಚಿತ್ರದುರ್ಗ ಮುರುಘಾಮಠದ ಶ್ರೀ ಡಾ| ಶಿವಮೂರ್ತಿ
ಮುರುಘಾ ಶರಣರು ಪ್ರತಿಪಾದಿಸಿದರು. ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಲಯನ್ಸ್‌ ಕ್ಲಬ್‌ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ 63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ಜ್ಞಾನ ರತ್ನಸಿರಿ ಪ್ರಶಸ್ತಿ ಹಾಗೂ ವೈದ್ಯರತ್ನ ಬಿರುದು ಪ್ರದಾನ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

Advertisement

ಈ ಹಿಂದೆಲ್ಲಾ ಕೇವಲ ಎಸ್ಸೆಸ್ಸೆಲ್ಸಿ ಓದಿದರೆ ಸಾಕು, ಸಾಕಷ್ಟು ಉದ್ಯೋಗಾವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವಂತಹ ಸ್ಥಿತಿ ಇತ್ತು. ಆದರೆ‌ ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿಗಳನ್ನು ಪಡೆದರೂ ಕೂಡ ಉದ್ಯೋಗ ಸಿಗದಂತಹ ಸ್ಥಿತಿ ಇದೆ. ನಿರುದ್ಯೋಗ ತಾಂಡವವಾಡುತ್ತಿದೆ.  ಆದ್ದರಿಂದ ಬರೀ ಪದವಿ ಪಡೆಯುವುದಕ್ಕೆ ಸೀಮಿತವಾಗದೇ ಬಹುವಿಧದ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಆಗ ತಾವೆಂದುಕೊಂಡ ಗುರಿ ಹಾಗೂ ಉದ್ಯೋಗಗಳನ್ನು ಪಡೆದು
ಸಾಧನೆ ಮಾಡಬಹುದು ಎಂದರು. 

ವಿದ್ಯಾರ್ಥಿಗಳು ಯಾವ ಕೆಲಸಕ್ಕೂ ಕೀಳರಿಮೆ ಪಡಬಾರದು. ತಮ್ಮ ಆಸಕ್ತಿಯ ಕ್ಷೇತ್ರದಲ್ಲೇ ಪರಿಣಿತಿ ಸಾಧಿಸಲು ಮುಂದಾಗಬೇಕು. ಎಲ್ಲಾ ವಿಷಯದ ಬಗ್ಗೆ ಪೂರ್ವ ತಯಾರಿ, ತರಬೇತಿ ಪಡೆದು ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು. ಏಕೆಂದರೆ ಇಂದು ಸಾಮಾನ್ಯ ಜ್ಞಾನ ಹಾಗೂ ಬುದ್ಧಿವಂತಿಕೆ ಇದ್ದವರ ಬಳಿ ಉದ್ಯೋಗಾವಕಾಶ ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಒಂಟಿತನ ಎಂಬುದು ಬುಹುದೊಡ್ಡ ಸಮಸ್ಯೆಯಾಗಿ ಕಂಡುಬರುತ್ತಿದೆ. ಇದರಿಂದ ಹೊರ ಬರಲು ಉತ್ತಮ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು. ಯಾರು ಕಾಯಕದಲ್ಲಿ ತೊಡಗಿರುತ್ತಾರೋ ಅಂತಹವರಿಗೆ ಒತ್ತಡ ಇರುವುದಿಲ್ಲ. ಎಷ್ಟೇ ಕಷ್ಟಗಳಿದ್ದರೂ ಅವುಗಳನ್ನು ತಾಳ್ಮೆಯಿಂದ ಎದುರಿಸಬೇಕು. ಆಗ ಮಾತ್ರ ಬದುಕಿನಲ್ಲಿ ಸಾರ್ಥಕತೆ ಸಿದ್ಧಿಸಲು ಸಾಧ್ಯ ಎಂದರು.
 
ಇದೇ ವೇಳೆ ಎಸ್ಸೆಸ್ಸೆಲ್ಸಿ ಕನ್ನಡ ವಿಷಯ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಜ್ಞಾನ ರತ್ನಸಿರಿ ಪ್ರಶಸ್ತಿ ಹಾಗೂ ಡಾ| ನಾಗಪ್ರಕಾಶ್‌ ದಂಪತಿಗೆ ವೈದ್ಯರತ್ನ ಬಿರುದು ನೀಡಿ ಸನ್ಮಾನಿಸಲಾಯಿತು. ದೊಡ್ಡಪೇಟೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕಂಪ್ಲಿಯ ಪ್ರಭುಸ್ವಾಮಿ, ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿ, ಲಯನ್ಸ್‌ ಅಧ್ಯಕ್ಷ ಎ.ಬಿ. ಪ್ರಕಾಶ್‌, ಹಿರಿಯ ಪತ್ರಕರ್ತ ಎಂ.ಎಸ್‌. ವಿಕಾಸ್‌ ಮತ್ತು ನೀತಾ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಡಾ| ಮಂಜುನಾಥ್‌ ಕುರ್ಕಿ, ಲಯನ್ಸ್‌ ವಲಯಾಧ್ಯಕ್ಷ ಇ.ಎಂ. ಮಂಜುನಾಥ್‌, ಎಚ್‌.ವಿ. ಮಂಜುನಾಥಸ್ವಾಮಿ, ಎನ್‌.ಸಿ. ಬಸವರಾಜ್‌, ಜಿ. ನಾಗನೂರು, ಇತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next