Advertisement

ಅಂಗನವಾಡಿ ಕೇಂದ್ರ ಬಳಿಯಲ್ಲಿಯೇ ಸೊಳ್ಳೆ ಉತ್ಪಾದನಾ ಕೇಂದ್ರ!

06:08 PM Aug 02, 2019 | Team Udayavani |

ಕಟಪಾಡಿ: ಮಣಿಪುರ ಕೋಟೆ ಪ್ರದೇಶದಲ್ಲಿ ಕಂಡು ಬರುವಂತಹ ಸುರಿದ ತ್ಯಾಜ್ಯದ ರಾಶಿಯು ಈ ಮಳೆಗಾಲದಲ್ಲಿ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಪರಿಣಮಿಸುತ್ತಿದ್ದು ಪರಿಸರದಲ್ಲಿ ಸಾಂಕ್ರಾಮಿಕ ರೋಗಕ್ಕೆ ಆಹ್ವಾನವನ್ನು ನೀಡುತ್ತಿದೆ.

Advertisement

ಪ್ರಮುಖವಾಗಿ ಇದೇ ತ್ಯಾಜ್ಯ ರಾಶಿಯ ಕೂಗಳತೆಯ ದೂರದಲ್ಲಿ ಮಣಿಪುರದ ಪ್ರಾಥಮಿಕ ಆರೋಗ್ಯ ಕೇಂದ್ರವು ಕಾರ್ಯಾಚರಿಸುತ್ತಿದೆ. ಪಕ್ಕದಲ್ಲಿಯೇ ಪುಟಾಣಿ ಮಕ್ಕಳ ಅಂಗನವಾಡಿ ಇದೆ. ಮಹಿಳಾ ಮಂಡಳಿಯೂ ಕಚೇರಿಯನ್ನು ಹೊಂದಿದೆ. ರಿಕ್ಷಾ ತಂಗುದಾಣವೂ ಇದೆ. ಬಸ್ಸು ತಂಗುದಾಣವೂ ಇದೆ.

ಧಾರ್ಮಿಕ ಕೇಂದ್ರವೂ ಚಟುವಟಿಕೆಯುಕ್ತವಾಗಿದೆ. ಇಷ್ಟೊಂದು ಕೇಂದ್ರ ಸ್ಥಳ ಹಾಗೂ ಜನನಿಬಿಡ ಸ್ಥಳವಾಗಿದ್ದು , ತ್ಯಾಜ್ಯ ಸಂಗ್ರಹ ಕೇಂದ್ರವಾಗಿ ಬೆಳೆದು ನಿಂತಿದ್ದು ಸ್ಥಳೀಯರಲ್ಲಿ ಭಯ ಮತ್ತು ಬೇಸರ ಮೂಡಿಸುತ್ತಿದೆ.

ಅಂಗನವಾಡಿಯ ಮಕ್ಕಳಿಗೆ ಅಪಾಯಕಾರಿ
ಆದರೂ ಇಲಾಖೆಗಳಿಂದ ಈ ಬಗ್ಗೆ ಯಾವುದೇ ಕ್ರಮ ಕಂಡು ಬರುತ್ತಿಲ್ಲ. ಈ ತ್ಯಾಜ್ಯವು ಮಳೆ ನೀರಿನೊಂದಿಗೆ ಕೊಳೆತು ಸೊಳ್ಳೆ ಉತ್ಪತ್ತಿ, ಗಬ್ಬು ವಾಸನೆಯು ಅಂಗನವಾಡಿಯ ಮಕ್ಕಳಿಗೆ ಬಹಳಷ್ಟು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ.ಯಾವುದೇ ಕ್ರಮ ಇಲ್ಲವಾಗಿದೆ. ಇಲ್ಲಿನ ಪರಿಸರದ ಸ್ವತ್ಛತೆಯ ಬಗ್ಗೆ ಲವಲೇಷವೂ ಕಾಳಜಿ ಕಂಡು ಬರುತ್ತಿಲ್ಲ. ಅನತಿ ದೂರದಲ್ಲಿಯೇ ರಿಕ್ಷಾ ತಂಗುದಾಣವೂ ಇದೆ.

ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿದೆ
ಕಟಪಾಡಿ-ಮಣಿಪುರ-ದೆಂದೂರು ಕಟ್ಟೆ ಸಂಪರ್ಕದ ಪ್ರಮುಖ ರಸ್ತೆಯ ಪಕ್ಕದಲ್ಲಿಯೇ ಕಂಡು ಬರುವ ಈ ತ್ಯಾಜ್ಯವು ಜನನಿಬಿಡ ಪ್ರದೇಶದಲ್ಲಿದೆ. ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲಿದ್ದು, ದಕ್ಷ ವೈದ್ಯಾಧಿಕಾರಿಯಿಂದ ಹೆಚ್ಚಿನ ರೋಗಿಗಳು ಔಷಧಿಗೆ ಬರುತ್ತಿದ್ದಾರೆ. ಆದರೂ ಮಳೆಗೆ ನೆನೆದು ಕೊಳೆತ ತ್ಯಾಜ್ಯದಿಂದ ಸಂಭಾವ್ಯ ಅಪಾಯವನ್ನು ಕಡೆಗಣಿಸುವಂತಿಲ್ಲ. ಹಾಗಾಗಿ ಸುರಕ್ಷತೆಯ ಕ್ರಮವನ್ನು ಕೈಗೊಳ್ಳಬೇಕಾದ ತೀರಾ ಆವಶ್ಯಕತೆ ಕಂಡು ಬರುತ್ತಿದೆ.

Advertisement

ಎಚ್ಚರಿಕೆ ಫಲಕದ ಬುಡದಲ್ಲೇ ಮಾರಕ ತ್ಯಾಜ್ಯರಾಶಿ
ತಮ್ಮ ಪರಿಸರದ ಪ್ರಮುಖ ಸಂಸ್ಥೆಗಳು ಆಸುಪಾಸಿನಲ್ಲಿದ್ದರೂ, ಈ ಬಗ್ಗೆ ಮಣಿಪುರ ಗ್ರಾಮ ಪಂಚಾಯತ್‌ ತ್ಯಾಜ್ಯ ಎಸೆಯದಂತೆ ಎಚ್ಚcರಿಕೆಯ ಫಲಕ ಅಳವಡಿಸಿದರೂ ಕ್ಯಾರೇ ಅನ್ನದ ಸ್ಥಳೀಯರೇ ಇಲ್ಲಿ ತಂದು ತ್ಯಾಜ್ಯ ಎಸೆಯುವ ಮೂಲಕ ಆಸಹ್ಯ ಪರಿಸರ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯಾಡಳಿತವು ಎಚ್ಚೆತ್ತು ಪರಿಸರದ ಸಂರಕ್ಷಣೆಯ, ಸೊಳ್ಳೆಯು ಉತ್ಪತ್ತಿಗೊಂಡು ಸಂಭಾವ್ಯ ಸಾಂಕ್ರಾಮಿಕ ರೋಗವು ಹರಡದಂತೆ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

ಕಾನೂನು ಕ್ರಮ ಅಗತ್ಯ
ಒಣ ಕಸವನ್ನು ಪಂ. ವತಿಯಿಂದ ಸಂಗ್ರಹಿಸಲಾಗುತ್ತಿದೆ. ಹಸಿಕಸವನ್ನು ಸಂಗ್ರಹಿಸುವಂತೆ ಕಾಲನಿ ನಿವಾಸಿಗಳು ಹಠಕ್ಕೆ ಬಿದ್ದಿರುತ್ತಾರೆ. ಆದರೆ ಪ್ರಸ್ತುತ ಪಂ.ನಲ್ಲಿ ಈ ಬಗ್ಗೆ ವ್ಯವಸ್ಥೆ ಕಲ್ಪಿಸಲು ಅಸಾಧ್ಯ. ಈ ಬಗ್ಗೆ ಜನಜಾಗೃತಿಗಾಗಿ ಸಭೆಗಳನ್ನೂ ನಡೆಸಲಾಗಿತ್ತು. ಪ್ರತಿಫಲ ಶೂನ್ಯವಾಗಿದೆ. ತ್ಯಾಜ್ಯ ಎಸೆಯದಂತೆ ಕಠಿನ ಕಾನೂನು ಕ್ರಮಕ್ಕೆ ಮುಂದಾಗಬೇಕಾದ ಪರಿಸ್ಥಿತಿ ಇದೆ.
-ಹಸನ್‌ ಶೇಖ್‌ ಆಹಮ್ಮದ್‌, ಸದಸ್ಯ, ಮಣಿಪುರ ಗ್ರಾ.ಪಂ.

ಪೈಪ್‌ ಕಾಂಪೋಸ್ಟ್‌ ಮಾಹಿತಿ
ಸಾರ್ವಜನಿಕ ಸ್ಥಳದಲ್ಲಿ ಅದೂ ಸೂಕ್ಷ್ಮವಾದ ಪ್ರದೇಶದಲ್ಲಿ ತ್ಯಾಜ್ಯ ಎಸೆಯುವುದು ದಂಡ ನಾರ್ಹ ಅಪರಾಧ. ಇಲ್ಲಿ ತ್ಯಾಜ್ಯ ಎಸೆಯ ದಂತೆ ವಿನಂತಿಸಿ ಶಾಶ್ವತ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಹಸಿಕಸ ವಿಲೇವಾರಿಗೆ ಪೈಪ್‌ ಕಾಂಪೋಸ್ಟ್‌ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಈಗಿರುವ ತ್ಯಾಜ್ಯವನ್ನು ಆಡಳಿತದೊಂದಿಗೆ ಚರ್ಚಿಸಿ ಸೂಕ್ತವಾಗಿ ವಿಲೇವಾರಿ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಪುನರಾವರ್ತನೆಯಾಗದಂತೆ ಈ ಬಗ್ಗೆ ಅನಿವಾರ್ಯವಾಗಿ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ.
-ಯೋಗಿತಾ, ಪಿ.ಡಿ.ಒ., ಮಣಿಪುರ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next