Advertisement

ಸರಕಾರಿ ಕಚೇರಿ ಆವರಣ ಸುತ್ತಮುತ್ತ ಸೊಳ್ಳೆ ಉತ್ಪತ್ತಿ ಭೀತಿ!

12:12 AM Jul 31, 2019 | mahesh |

ಮಹಾನಗರ: ಜಿಲ್ಲೆಯಲ್ಲಿ ಡೆಂಗ್ಯೂ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಸರಕಾರಿ ಕಚೇರಿಗಳ ಆವರಣದಲ್ಲಿಯೂ ಸ್ವಚ್ಛತೆ ಕಾಪಾಡುವ ಜತೆಗೆ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸುವಂತೆ ಈಗಾಗಲೇ ಆರೋಗ್ಯ ಇಲಾಖೆಯು ಸುತ್ತೋಲೆ ಹೊರಡಿಸಿದೆ.

Advertisement

ನಗರದಲ್ಲಿ ಡೆಂಗ್ಯೂ ಕಾಯಿಲೆ ವ್ಯಾಪಕವಾಗಿದ್ದರೂ ಕೂಡ ಕೆಲವೊಂದು ಸರಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಅಥವಾ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ಲಾರ್ವಾ ನಿರ್ಮೂಲನೆ ಕಡೆಗೆ ಅಷ್ಟೊಂದು ಗಮನಹರಿಸಿದಂತೆ ಕಾಣಿಸುತ್ತಿಲ್ಲ. ಇನ್ನೊಂದೆಡೆ ಮನೆಗಳಲ್ಲಿ ಡೆಂಗ್ಯೂ ಉತ್ಪತ್ತಿಗೆ ಕಾರಣವಾಗುವ ತಾಣಗಳು ಕಂಡುಬಂದರೆ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ. ಇತ್ತ ಸರಕಾರಿ ಕಚೇರಿಗಳಿರುವ ಕಟ್ಟಡದ ಸುತ್ತಮುತ್ತ ಸ್ವಚ್ಛತೆ ಕಾಪಾಡುವಲ್ಲಿ ಆರೋಗ್ಯ ಇಲಾಖೆ ಅಥವಾ ಜಿಲ್ಲಾಡಳಿತದ ಕಟ್ಟುನಿಟ್ಟಿನ ನಿರ್ದೇಶನ ನಿಯಮ ಪಾಲನೆಯಾಗುತ್ತಿಲ್ಲ ಎನ್ನುವುದು ವಾಸ್ತವ. ಆ ಮೂಲಕ ಸರಕಾರಿ ಕಚೇರಿಗಳ ಆವರಣದಲ್ಲಿನ ನೈರ್ಮಲ್ಯದ ಬಗ್ಗೆ ಸುದಿನ ನಡೆಸಿರುವ ರಿಯಾಲಿಟಿ ಚೆಕ್‌ ಇಲ್ಲಿದೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಡೆಂಗ್ಯೂ ರೋಗ ನಿರ್ಮೂಲನೆ ಮಾಡುವ ಸಲುವಾಗಿ ಈಗಾಗಲೇ ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತ ಲಾಲ್ಬಾಗ್‌ನಲ್ಲಿರುವ ಮಹಾನಗಗರ ಪಾಲಿಕೆ ಕಚೇರಿಯಲ್ಲಿಯೇ ಡೆಂಗ್ಯೂ ರೋಗದ ಭೀತಿ ಇದೆ.

ಪಾಲಿಕೆ ಕಚೇರಿಯ ಹಿಂಭಾಗದಲ್ಲಿಯೇ ಡೆಂಗ್ಯೂ ಉತ್ಪತ್ತಿ ಮಾಡುವ ಸೊಳ್ಳೆಗಳ ತಾಣವಾಗುತ್ತಿರುವುದು ವಿಪರ್ಯಾಸ. ಪಾಲಿಕೆ ಹಿಂಭಾಗ ಕೆಲವು ವರ್ಷಗಳಿಂದ ಹಳೆಯ ಕಾಲದ ಗುಜರಿ ವಾಹನಗಳಿವೆ. ವಾಹನಗಳ ಟಯರ್‌ಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆಗಳಿದ್ದರೂ ಅವುಗಳನ್ನು ತೆರವು ಮಾಡಿಲ್ಲ. ಪಾಲಿಕೆ ಹಿಂಭಾಗದಲ್ಲಿ ನಿರುಪಯುಕ್ತ ಟಯರ್‌ಗಳನ್ನು ಹಾಗೇ ಇಡಲಾಗಿದೆ.

ಉಪಯೋಗವಿಲ್ಲದ ದೊಡ್ಡದಾದ ಸಿಂಟೆಕ್‌ ಟ್ಯಾಂಕ್‌ ಒಂದನ್ನು ಪಾಲಿಕೆ ಹಿಂಭಾಗದಲ್ಲಿ ಇರಿಸಲಾಗಿದ್ದು, ಇವುಗಳಿಗೆ ಮುಚ್ಚಳ ಕೂಡ ಅಳವಡಿಸಲಿಲ್ಲ. ಇದೇ ಕಾರಣಕ್ಕೆ ಇವುಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುವ ಸಂಭವವಿದೆ. ಅಲ್ಲೇ ಪಕ್ಕದಲ್ಲಿ ಕಾಗದ ರಾಶಿ, ಪ್ಲಾಸ್ಟಿಕ್‌ಗಳು, ಸಿಮೆಂಟ್‌ಗಳನ್ನು ಹಾಗೇ ಬಿಡಲಾಗಿದೆ. ಇವುಗಳಲ್ಲಿ ನೀರು ನಿಲ್ಲುವ ಸಂಭವವಿದ್ದು ಪಾಲಿಕೆ ಕೂಡಲೇ ಇತ್ತ ಗಮನಹರಿಸಬೇಕಿದೆ. ದಿನಂಪ್ರತಿ ನೂರಾರು ಮಂದಿ ಸರಕಾರಿ ಕೆಲಸಗಳಿಗೆಂದು ಬರುವ ಮಿನಿ ವಿಧಾನಸೌಧ ಆವರಣದಲ್ಲಿ ನೀರು ನಿಂತಿದೆ. ಅಲ್ಲಿನ ಪಾರ್ಕಿಂಗ್‌ ಜಾಗದಲ್ಲಿ ಸಣ್ಣ ಕಾಂಕ್ರೀಟ್ ಕಣಿ ಇದ್ದು ಇದರಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಆವರಣದ ಹಿಂಬದಿ ಉಪಯೋಗವಿಲ್ಲದ ಸಿಮೆಂಟ್ ಶೀಟ್‌ಗಳನ್ನು ಇಡಲಾಗಿದ್ದು, ಅವುಗಳಲ್ಲಿ ನೀರು ನಿಲ್ಲುತ್ತಿದೆ. ಗೋಣಿ ಚೀಲಗಳು, ರಟ್ಟುಗಳು, ಬಾಟಲಿಗಳು ಬಿದ್ದಿದ್ದು, ಅವುಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿ ಕಚೇರಿ ಆವರಣದ ಕೆಲವು ಕಡೆಗಳಲ್ಲಿ ಮಾತ್ರ ನಿಲ್ಲುತ್ತಿದೆ. ಉಳಿದಂತೆ ಆವರಣವನ್ನು ಸ್ವಚ್ಛಗೊಳಿಸಲಾಗಿದೆ. ನಗರದ ಪ್ರಮುಖ ಭಾಗಗಳಲ್ಲಿ ಹಳೆಯ ಉಪಯೋಗ ಶೂನ್ಯವಾದ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗಿದೆ. ಇವುಗಳ ಟಯರ್‌ಗಳಲ್ಲಿ, ವಾಹನಗಳ ಬಿಡಿ ಭಾಗಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಿದೆ. ನಗರದ ಬಹುತೇಕ ಗ್ಯಾರೇಜ್‌ ಆವರಣಗಳಲ್ಲಿ ತುಕ್ಕು ಹಿಡಿದ ಉಪಯೋಗ ಶೂನ್ಯ ವಾಹನಗಳನ್ನು ನಿಲುಗಡೆ ಮಾಡಲಾಗಿದ್ದು, ಬಹುತೇಕ ಸರಕಾರಿ ಕಚೇರಿಗಳ ಆವರಣದಲ್ಲೇ ಉಪಯೋಗ ಶೂನ್ಯ ವಾಹನಗಳನ್ನು ಪಾರ್ಕ್‌ ಮಾಡಲಾಗುತ್ತಿದೆ.

Advertisement

ಮಹಾನಗರ ಪಾಲಿಕೆ ಆವರಣ, ಅರಣ್ಯ ಇಲಾಖೆ ಕಟ್ಟಡ ಸಹಿತ ಸರಕಾರಿ ಕಚೇರಿಗಳ ಆವರಣಗಳಲ್ಲೇ ತುಕ್ಕು ಹಿಡಿದ ವಾಹನಗಳು ನಿಲುಗಡೆಯಾಗಿವೆ. ಪೊಲೀಸ್‌ ಠಾಣೆ ಆವರಣಗಳಲ್ಲೇ ಹಳೆ ವಾಹನಗಳ ಸಾಲೇ ಇದೆ. ನಗರದ ಬಹುತೇಕ ಪೊಲೀಸ್‌ ಠಾಣೆ ಆವರಣ ಸೀಸ್‌ ಮಾಡಿದ ವಾಹನಗಳನ್ನು ನಿಲ್ಲಿಸಲು ಸ್ಥಳವಕಾಶದ ಕೊರತೆಯಿಂದ ಠಾಣೆಯ ಆಸುಪಾಸಲ್ಲಿ ವಾಹನಗಳನ್ನು ಪಾರ್ಕ್‌ ಮಾಡುತ್ತಿದ್ದಾರೆ.

ಕದ್ರಿ ಪಾರ್ಕ್‌ ಕಾರಂಜಿಗೆ ಕೊಳಕ್ಕೆ ಗಪ್ಪಿ ಮೀನು
ಕದ್ರಿಪಾರ್ಕ್‌ನಲ್ಲಿ ಕೆಲವೊಂದು ಕಡೆಗಳಲ್ಲಿ ಮಳೆ ನೀರು ನಿಲ್ಲುತ್ತಿದೆ. ಕದ್ರಿ ಪಾರ್ಕ್‌ ಒಳಗಡೆ ಇರುವ ಹಳೆಯ ಸಂಗೀತ ಕಾರಂಜಿ ಮತ್ತು ಕದ್ರಿ ಜಿಂಕೆ ಉದ್ಯಾನವನದ ಒಳಗೆ ಇರುವ ಸಂಗೀತ ಕಾರಂಜಿ ಕೊಳ ಟ್ಯಾಂಕ್‌, ನೀರಿನ ಕುಂಡಗಳಿಗೆ ಗಪ್ಪಿ ಮೀನು ಬಿಡಲಾಗಿದೆ.

‘ಉದಯವಾಣಿ ಸುದಿನ’ ತಂಡವು ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನಸೌಧ, ನೂತನ ತಾಲೂಕು ಪಂಚಾಯತ್‌ ಕಚೇರಿ, ಕದ್ರಿ ಪಾರ್ಕ್‌, ನಗರದ ಕೆಲವೊಂದು ಪೊಲೀಸ್‌ ಠಾಣೆ ಆವರಣಗಳಲ್ಲಿ ರಿಯಾಲಿಟಿ ಚೆಕ್‌ ನಡೆಸಿದೆ.

ಸುತ್ತೋಲೆ ನೀಡಲಾಗಿದೆ
ಸರಕಾರಿ ಕಚೇರಿಗಳನ್ನು ಶುಚಿಯಾಗಿಡಬೇಕು ಎಂದು ಆರೋಗ್ಯ ಇಲಾಖೆಯಿಂದ ಈಗಾಗಲೇ ಎಲ್ಲ ಕಚೇರಿಗಳಿಗೆ ಸುತ್ತೋಲೆಯನ್ನು ಕಳುಹಿಸಿದ್ದೇನೆ. ಉಪಯೋಗವಿಲ್ಲದ ಟಯರ್‌ಗಳಿಂದಲೂ ಡೆಂಗ್ಯೂ ರೋಗಕ್ಕೆ ಕಾರಣವಾಗುವ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.

– ಡಾ| ರಾಮಕೃಷ್ಣ ರಾವ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಗಪ್ಪಿ ಮೀನುಗಳನ್ನು ಬಿಡಲಾಗಿದೆ
ಕದ್ರಿ ಪಾರ್ಕ್‌ ಒಳಗಡೆ ಯಾವೆಲ್ಲ ಪ್ರದೇಶಗಳಲ್ಲಿ ನೀರು ನಿಲ್ಲುತ್ತದೆ ಎಂಬುವುದನ್ನು ಪತ್ತೆ ಹಚ್ಚಿ ಗಪ್ಪಿ ಈಗಾಗಲೇ ಮೀನುಗಳನ್ನು ಬಿಡಲಾಗಿದೆ. ಇನ್ನು, ರೈಲ್ವೇ ಟ್ರ್ಯಾಕ್‌ ಸಿಮೆಂಟ್ ಆದ್ದರಿಂದ ಕೆಲವು ಕಾಲ ಮಳೆ ಬಂದಾಗ ನೀರು ನಿಲ್ಲುತ್ತದೆ. ಆ ಜಾಗಗಳಿಗೆ ಮರಳು ಹಾಕಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.

– ಎಚ್.ಆರ್‌. ನಾಯಕ್‌, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

ಎಲ್ಲೆಲ್ಲಿ ರಿಯಾಲಿಟಿ ಚೆಕ್‌?
‘ಉದಯವಾಣಿ ಸುದಿನ’ ತಂಡವು ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನಸೌಧ, ನೂತನ ತಾಲೂಕು ಪಂಚಾಯತ್‌ ಕಚೇರಿ, ಕದ್ರಿ ಪಾರ್ಕ್‌, ನಗರದ ಕೆಲವೊಂದು ಪೊಲೀಸ್‌ ಠಾಣೆ ಆವರಣಗಳಲ್ಲಿ ರಿಯಾಲಿಟಿ ಚೆಕ್‌ ನಡೆಸಿದೆ.
Advertisement

Udayavani is now on Telegram. Click here to join our channel and stay updated with the latest news.

Next