ಮಾಸ್ಕೋ: ರಷ್ಯಾದ ಸರಕಾರಿ ಅಧೀನದ ಸಂಸ್ಥೆ ಉತ್ಪಾದಿಸಿರುವ ಕೋವಿಡ್ ನಿಗ್ರಹ ಲಸಿಕೆ ವಿಶ್ವಾದ್ಯಂತ ಆಶಾಭಾವನೆ ಮೂಡಿಸಿದ್ದು, ವ್ಯಾಪಾಕವಾಗಿ ಲಸಿಕೆಯ ಪರೀಕ್ಷೆ ನಡೆಯುತ್ತಿದೆ.
ಈ ನಡುವೆಯೇ ಪ್ರಮುಖ ವೈದ್ಯಕೀಯ ಸಂಶೋಧನಾ ನಿಯತಕಾಲಿಕ ದಿ ಲಾನ್ಸೆಟ್‌ನಲ್ಲಿ ಪ್ರಕಟವಾಗಿರುವ ಆರಂಭಿಕ ಹಂತದ ಫಲಿತಾಂಶದಲ್ಲಿ ಲಸಿಕೆಯ ಬಗ್ಗೆ ಉಲ್ಲೇಖೀಸಲಾಗಿದ್ದು, ಸಣ್ಣ ಪ್ರಮಾಣದ ಮಾನವರ ಗುಂಪಿನ ಮೇಲೆ ನಡೆಸಿದ ಪರೀಕ್ಷೆಯಲ್ಲಿ ಲಸಿಕೆ ಸುರಕ್ಷಿತ ಹಾಗೂ ಪ್ರತಿಕಾಯಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.
ಮಾಸ್ಕೋದ ಗಾಮೇಲಿಯಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಇತ್ತೀಚೆಗಷ್ಟೇ ರಷ್ಯಾದಲ್ಲಿ ನೋಂದಣಿ ಮಾಡಲಾಗಿದ್ದು, ಒಟ್ಟು 76 ಜನರ ಮೇಲೆ ನಡೆಸಿದ ಕ್ಲಿನಿಕಲ್ ಟ್ರಯಲ್ ನಲ್ಲಿ ಲಸಿಕೆಯ ಎರಡು ಮಾದರಿಗಳು ಸುರಕ್ಷಿತವೆಂದು ಎಂದು ವರದಿ ಹೇಳಿದೆ.
2ನೇ ಹಂತದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಲಸಿಕೆ 28 ದಿನಗಳ ಒಳಗೆಯೇ ಕೋವಿಡ್ ವೈರಾಣುವಿನ ಕಣಗಳನ್ನು ನಿಷ್ಕ್ರಿಯಿಸುವ ಟಿ-ಸೆಲ್ ಗಳನ್ನು ಉತ್ಪಾದಿಸಿದ್ದು, 42 ದಿನಗಳವರೆಗೆ ನಡೆಸಿದ ಪ್ರಯೋಗದಲ್ಲಿ ಎಲ್ಲ ಪ್ರಯೋಗಾರ್ಥಿಗಳ ದೇಹದಲ್ಲಿ ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿವೆ ಎಂದು ವರದಿ ತಿಳಿಸಿದೆ.
ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾ ಲಸಿಕೆ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದವು. ಜತೆಗೆ, ದೊಡ್ಡ ಪ್ರಮಾಣದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೀಗ ಲಾನ್ಸೆಟ್‌ನಲ್ಲಿ ಸಂಶೋಧನಾ ವರದಿ ಪ್ರಕಟಗೊಳ್ಳುವ ಮೂಲಕ ಸ್ಪುಟ್ನಿಕ್- ವಿಗೆ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ.