Advertisement

ಮೋರ್ಟು –ಬೆಳ್ಳಾಲ ಸೇತುವೆ: ಮಾರ್ಚ್‌ನೊಳಗೆ ಪೂರ್ಣ

10:58 PM Dec 25, 2019 | Sriram |

ಆಜ್ರಿ: ಕೆರಾಡಿ ಗ್ರಾಮ ವ್ಯಾಪ್ತಿಯ ಮೋರ್ಟು – ಬೆಳ್ಳಾಲ – ಆಜ್ರಿ ಎನ್ನುವ ಊರುಗಳನ್ನು ಬೆಸೆಯುವ ಸೇತುವೆ ನಿರ್ಮಾಣ ಕಾಮಗಾರಿಗೆ ನೀಡಿದ್ದ ಗಡುವು ಈಗಾಗಲೇ ಮುಗಿದಿದೆ. ಈಗ ಮತ್ತೆ 3 ತಿಂಗಳ ಕಾಲ ಗಡುವು ವಿಸ್ತರಿಸಲಾಗಿದ್ದು, ಮುಂದಿನ ವರ್ಷದ ಮಾರ್ಚ್‌ನೊಳಗೆ ಸೇತುವೆ ವಾಹನ ಸಂಚಾರಕ್ಕೆ ತೆರೆದುಕೊಳ್ಳುವ ಸಾಧ್ಯತೆಗಳಿವೆ.

Advertisement

ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಭಾಗದ ಜನರಿಗೆ ಸಿದ್ದಾಪುರ ಪ್ರಮುಖ ಪೇಟೆಯಾಗಿದ್ದು, ಇಲ್ಲಿಗೆ ತೆರಳಲು ಈ ಚಕ್ರ ನದಿಯನ್ನು ದಾಟಿ ಹೋಗಬೇಕು. ಇದು ಹತ್ತಿರದ ಮಾರ್ಗವಾಗಿದ್ದು, ಸೇತುವೆಯಿಲ್ಲದ ಕಾರಣ ಮಳೆಗಾಲದಲ್ಲಿ ಇಲ್ಲಿನ ಜನ ಸುತ್ತು ಬಳಸಿ ದೂರ ಕ್ರಮಿಸಬೇಕಾದ ಅನಿವಾರ್ಯತೆಯಿದೆ. ಬೇಸಗೆಯಲ್ಲಾದರೆ ಇಲ್ಲಿನ ಜನರಿಗೆ ನದಿ ದಾಟಲು ಮೋರ್ಟು ಬಳಿ ಹಾಕಲಾದ ಕಾಲು ಸಂಕವನ್ನು ಅವಲಂಬಿಸಿದ್ದಾರೆ.

ಸಾವಿರಾರು ಮಂದಿಗೆ ಅನುಕೂಲ
ಈ ಭಾಗದಲ್ಲಿ ಸುಮಾರು 1,000ಕ್ಕೂ ಹೆಚ್ಚು ಮನೆಗಳಿದ್ದು, ಸೇತುವೆಯಾದರೆ ಸಾವಿರಾರು ಮಂದಿಗೆ ಪ್ರಯೋಜನವಾಗಲಿದೆ. ಮೋರ್ಟು – ಬೆಳ್ಳಾಲ ಸೇತುವೆ ನಿರ್ಮಾಣ ಈ ಪ್ರದೇಶದ ಬಹು ದಿನಗಳ ಬೇಡಿಕೆಯಾಗಿದ್ದು, ಮುಂದಿನ ವರ್ಷವಾದರೂ ಕೈಗೂಡುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಈ ಭಾಗದ ಜನರಿಗೆ ಸಿದ್ದಾಪುರ ಹತ್ತಿರದ ಪೇಟೆ. ಸೇತುವೆಯಿಲ್ಲದ ಕಾರಣ ಮಳೆಗಾಲದಲ್ಲಿ ಸಿದ್ದಾಪುರಕ್ಕೆ ತೆರಳಬೇಕಾದರೆ ಸುತ್ತು ಬಳಸಿ 30 ಕಿ. ಮೀ. ಸಂಚರಿಸಬೇಕಾಗಿದೆ. ಸೇತುವೆಯಿದ್ದರೆ ಕೇವಲ 10 ಕಿ.ಮೀ. ಅಷ್ಟೇ ದೂರವಿರುವುದು. ಆದರೆ ಮಳೆಗಾಲ ಆರಂಭವಾದ ಮೇಲೆ ಖರೀದಿ, ಕೆಲಸ ಕಾರ್ಯಗಳಿಗೆ ಸಿದ್ದಾಪುರಕ್ಕಿಂತ 35 ಕಿ.ಮೀ. ದೂರದ ಕುಂದಾಪುರಕ್ಕೆ ಹೆಚ್ಚಾಗಿ ಹೋಗುವ ಪರಿಸ್ಥಿತಿ ಇಲ್ಲಿನ ಜನರದ್ದು.

ಜೂನ್‌ಗೆ ಗಡುವು
ಕಾಮಗಾರಿಗೆ ನೀಡಿದ್ದ ಅಂತಿಮ ಅವ ಧಿ ಈ ವರ್ಷದ ಜೂ.30 ಕ್ಕೆ ಮುಕ್ತಾಯ
ಗೊಂಡಿದೆ. ಆ ಬಳಿಕ ಮಳೆಗಾಲ ಆರಂಭವಾಗಿದ್ದರಿಂದ ಕಾಮಗಾರಿ ಸ್ಥಗಿತ ಗೊಂಡಿತ್ತು. ಈಗ ಮತ್ತೆ ಈ ತಿಂಗಳಿನಿಂದ ಕಾಮಗಾರಿ ಆರಂಭಗೊಂಡಿದೆ.

ಉದಯವಾಣಿ ವರದಿ
ಇಲ್ಲಿನ ಜನರ ಸೇತುವೆ ಸಮಸ್ಯೆ ಕುರಿತಂತೆ, ಸೇತುವೆ ಹಾಗೂ ಸಂಪರ್ಕ ರಸ್ತೆಯಿಲ್ಲದೆ ಜನ ಅನುಭವಿಸುತ್ತಿರುವ ಗೋಳಿನ ಕುರಿತು ಉದಯವಾಣಿಯು ಅನೇಕ ಬಾರಿ ವಿಶೇಷ ವರದಿಗಳನ್ನು ಪ್ರಕಟಿಸಿ, ಗಮನಸೆಳೆದಿತ್ತು.

Advertisement

4.50 ಕೋ.ರೂ. ವೆಚ್ಚ
ಕಳೆದ ವರ್ಷ ಮೋರ್ಟು – ಬೆಳ್ಳಾಲ ಸಂಪರ್ಕಿಸುವ ಸೇತುವೆ ಕಾಮಗಾರಿ ಆರಂಭವಾಗಿದ್ದು, ಸೇತುವೆಗೆ ಸಂಪರ್ಕಿಸುವ ಸುಮಾರು 6.5 ಕಿ.ಮೀ. ಉದ್ದದ ರಸ್ತೆಗೆ ಡಾಮರೀಕರಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇನ್ನು 3.5 ಕಿ.ಮೀ. ಉದ್ದದ ರಸ್ತೆಗೆ ಡಾಮರೀಕರಣ ಕಾಮಗಾರಿ ಬಾಕಿ ಇದೆ. ಸೇತುವೆ ಕಾಮಗಾರಿಗೆ 2.49 ಕೋ. ರೂ. ಮಂಜೂರಾಗಿದ್ದರೆ, ರಸ್ತೆ ಡಾಮರೀಕರಣ ಹಾಗೂ ಕಾಂಕ್ರೀಟೀಕರಣಕ್ಕೆ ಸೇರಿ ಒಟ್ಟು 4.50 ಕೋ.ರೂ. ಅನುದಾನ ಬಿಡುಗಡೆಯಾಗಿದೆ.

3 ತಿಂಗಳು ವಿಸ್ತರಣೆ
ಈಗಾಗಲೇ ಸೇತುವೆ ನಿರ್ಮಾಣ ಕಾಮಗಾರಿಗೆ ನೀಡಿದ್ದ ಗಡುವು ಮುಗಿದಿದೆ. ಆದರೆ ಗುತ್ತಿಗೆದಾರರು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಕ್ಕೆ ಮತ್ತೆ 3 ತಿಂಗಳ ಅವಧಿಯನ್ನು ವಿಸ್ತರಿಸಲಾಗಿದೆ. ಈಗಾಗಲೇ ಕಾಮಗಾರಿ ಕೂಡ ಆರಂಭಗೊಂಡಿದೆ. ಎರಡೂ ಕಡೆಗಳಲ್ಲಿ ಒಟ್ಟು 10 ಕಿ.ಮೀ. ಉದ್ದದ ರಸ್ತೆ ನಿರ್ಮಾಣವಾಗಲಿದ್ದು, ಅದು ಇನ್ನು 15 ದಿನದೊಳಗೆ ಪೂರ್ಣಗೊಳ್ಳಲಿದೆ.
– ದುರ್ಗಾದಾಸ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next