ನವದೆಹಲಿ: ಗುರುವಾರ ರಾತ್ರಿ ರಾಜಸ್ಥಾನದ ಬಾರ್ಮುರ್‌ನಲ್ಲಿ ಸಂಭವಿಸಿದ್ದ ಮಿಗ್ 21 ವಿಮಾನ ಅಪಘಾತದಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳನ್ನು ಭಾರತ ಕಳೆದುಕೊಂಡಿದೆ. ಅವರಲ್ಲೊಬ್ಬರ ಪಾರ್ಥಿವ ಶರೀರವನ್ನು ನೋಡಲೆಂದು ಓಡೋಡಿ ಬಂದ ತಾಯಿಯೊಂದಿಗೆ ವಿಮಾನದ ಪ್ರಯಾಣಿಕರು ಮನುಷ್ಯತ್ವ ಮರೆತು ವರ್ತಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಮಾನ ಅಪಘಾತದಲ್ಲಿ ಹುತಾತ್ಮರಾದ ಫ್ಲೈಟ್ ಲೆಫ್ಟಿನೆಂಟ್ ಅದ್ವಿತೀಯಾ ಬಾಲ್ ಅವರ ತಾಯಿ ದೆಹಲಿಯಿಂದ ಜೋಧ್‌ಪುರಕ್ಕೆ ವಿಮಾನದಲ್ಲಿ ಬಂದಿದ್ದು, ವಿಮಾನ ಭೂ ಸ್ಪರ್ಶ ಮಾಡಿದಾಕ್ಷಣ, ಅದರ ಕ್ಯಾಪ್ಟನ್ ಒಂದು ಘೋಷಣೆ ಮಾಡಿದ್ದಾರೆ.
“ಹುತಾತ್ಮರ ತಾಯಿ ಮತ್ತು ಕುಟುಂಬ ನಮ್ಮ ವಿಮಾನದ ಮೂರನೇ ಸಾಲಿನ ಸೀಟಿನಲ್ಲಿದೆ. ಅವರಿಗೆ ಮೊದಲು ಇಳಿಯುವುದಕ್ಕೆ ಅವಕಾಶ ಮಾಡಿಕೊಟ್ಟು, ನಂತರ ಬೇರೆಯವರು ಇಳಿಯೋಣ’ ಎಂದು ಮನವಿ ಮಾಡಿದ್ದಾರೆ. ಆದರೆ ಅದಕ್ಕೆ ಒಪ್ಪದ ಮೊದಲ ಮತ್ತು 2ನೇ ಸಾಲಿನ ಪ್ರಯಾಣಿಕರು ಮುನ್ನುಗ್ಗಿದ್ದಾರೆ.
ಈ ವಿಚಾರವನ್ನು ವಿಮಾನದಲ್ಲಿದ್ದ ನಿವೃತ್ತ ಲೆ.ಜನರಲ್ ಎಚ್.ಎಸ್.ಪನಾಗ್ ಅವರ ಪುತ್ರ ಶೇರ್‌ಬೀರ್ ಪನಾಗ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ನನ್ನ ಸಾಯೋದಕ್ಕಲ್ಲ ಐಎಎಫ್ ಸೇರಿದ್ದು’
ವಿಮಾನ ತರಬೇತಿ ವೇಳೆ ಅಪಘಾತ ವಿಚಾರದಲ್ಲಿ ಅದ್ವಿತೀಯ ಅವರ ಕುಟುಂಬ ಆಕ್ರೋಶ ಹೊರಹಾಕಿದೆ. “ನಮ್ಮ ಮಗ ಯುದ್ಧಭೂಮಿಯಲ್ಲಿ ಶತ್ರುಗಳೊಂದಿಗೆ ಹೋರಾಡಲು ಹೋಗಿದ್ದ. ಆದರೆ ಈಗ ಅವನ ಕನಸು ಎಂದೆಂದಿಗೂ ನನಸಾಗದು. ವಾಯುಪಡೆಯಲ್ಲಿರುವ ಹಳೆಯ ಮಿಗ್-21 ವಿಮಾನಗಳೆಲ್ಲವನ್ನೂ ತೆಗೆದುಹಾಕಿ’ ಎಂದು ಅವರು ಪ್ರಧಾನಿ ಮೋದಿ ಮತ್ತು ರಕ್ಷಣಾ ಇಲಾಖೆಗೆ ಮನವಿ ಮಾಡಿದ್ದಾರೆ.