Advertisement

ಕಲ್ಯಾಣ ಕರ್ನಾಟಕದಲ್ಲಿ ಇನ್ನಷ್ಟು ಚುರುಕಿನ ಕೆಲಸಗಳು ಆಗಬೇಕಿತ್ತು: ಶೆಟ್ಟರ್ ಇಂಗಿತ

01:06 PM Mar 05, 2023 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ನಿಗದಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಇನ್ನಷ್ಟು ಚುರುಕಾಗಿ ಆಗಬೇಕಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜನಸಂಕಲ್ಪ ಯಾತ್ರೆಯ ಮೂರನೇ ತಂಡದ ನೇತೃತ್ವ ವಹಿಸಿರುವ ಜಗದೀಶ್ ಶೆಟ್ಟರ್ ಇಂಗಿತ ವ್ಯಕ್ತಪಡಿಸಿದರು.

Advertisement

ನಗರದ ಐವನ್ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಂಜುಂಡಪ್ಪ ವರದಿ ಆಯೋಗ ಜಾರಿಗೆ ತರುವಲ್ಲಿ ಹಾಗೂ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಯಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎನ್ನುವುದು ಈಗಲೂ ನಮಗೆ ಅನ್ನಿಸುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವ ತಾಲೂಕು ಹಿಂದುಳಿದಿದೆ? ಹಿಂದುಳಿದಿವೆ ಎನ್ನುವ ನಿಟ್ಟಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಎಷ್ಟು? ಆ ಕಾರಣಗಳಿಂದ ಎಷ್ಟು ಜನರಿಗೆ ಉಪಯೋಗವಾಗಿದೆ? ಎನ್ನುವ ಕುರಿತು ಆತ್ಮಾಲೋಕನ ಮಾಡಿಕೊಳ್ಳುವ ನಿಟ್ಟಿನಲ್ಲಿ ಶೀಘ್ರವೇ ಸರಕಾರ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಶ್ವೇತ ಪತ್ರ ಮಂಡಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ನಾವು ಗಮನಿಸಬಹುದಾಗಿದೆ. ಓಡಾಡುವ ರಸ್ತೆಯಿಂದ ಹಿಡಿದು, ಕುಡಿಯುವ ನೀರಿನ ವರೆಗೂ ಈ ಭಾಗದಲ್ಲಿ ಸಾಕಷ್ಟು ವಿಕಾಸ ಕಂಡುಬಂದಿದೆ ಎಂದರು.

Advertisement

371ನೇ ವಿಧಿ ಹೆಸರು ಹೇಳಿಕೊಂಡೆ ದಿ. ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಸಾಕಷ್ಟು ಅವಧಿಯವರೆಗೆ ರಾಜಕಾರಣ ಮಾಡಿರುವುದು ಈ ಭಾಗದ ಜನರಿಗೆ ಗೊತ್ತೇ ಇದೆ. ಆದರೆ, ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿ, ತದನಂತರ ಮುಖ್ಯಮಂತ್ರಿಯಾದ ಬಳಿಕ ಕಲ್ಯಾಣ ಕರ್ನಾಟಕದ ವಿಕಾಸಕ್ಕೆ ಅವರು ಕೊಡುಗೆ ಕೊಟ್ಟದ್ದು ಅಪಾರವಾಗಿದೆ ಎಂದರು.

ಭಾರಿ ಜನಬೆಂಬಲ: ಕರ್ನಾಟಕದಲ್ಲಿ ನಮ್ಮ ಸರ್ಕಾರ ಮಾಡಿರುವ ಅನೇಕ ಜನ ಉಪಯೋಗಿ ಕೆಲಸಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಗೆ ಭಾರಿ ಮಟ್ಟದಲ್ಲಿ ಜನಬೆಂಬಲ ವ್ಯಕ್ತವಾಗುತ್ತಿದೆ. ರೋಡ್ ಶೋ, ವೇದಿಕೆ ಕಾರ್ಯಕ್ರಮಗಳು ಮತ್ತು ಪಾದಯಾತ್ರೆಯಲ್ಲಿ ಸರಿಸುಮಾರು 20ರಿಂದ 25 ಸಾವಿರ ಜನಸಂಖ್ಯೆ ಸೇರುತ್ತಿದೆ ಎಂದರು.

ಈಗಾಗಲೇ ಬೀದರ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್, ಭಾಲ್ಕಿಯಲ್ಲಿ ಅಭೂತಪೂರ್ವ ಕಾರ್ಯಕ್ರಮಗಳು ಜರುಗಿವೆ. ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲೂ ಕೂಡ ದೊಡ್ಡಮಟ್ಟದ ಕಾರ್ಯಕ್ರಮವನ್ನು ನಾವು ಯಶಸ್ವಿಗೊಳಿಸಿದ್ದೇವೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸೇಡಂ ಯಾದಗಿರಿ ಸೇರಿದಂತೆ ಹಲವು ಕಡೆಗಳಲ್ಲಿ ನಾವು ಯಾತ್ರೆ ನಡೆಸಲಿದ್ದೇವೆ ಎಂದರು.

ಸರ್ಕಾರ ಯಾರನ್ನು ರಕ್ಷಣೆ ಮಾಡುತ್ತಿಲ್ಲ: ಶಾಸಕ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಲಂಚ ಪಡೆದಿರುವ ಪ್ರಕರಣದಲ್ಲಿ, ನಮ್ಮ ಸರಕಾರ ಯಾರನ್ನು ರಕ್ಷಣೆ ಮಾಡುವ ಹರಕತ್ತು ಇಲ್ಲ. ಈಗಾಗಲೇ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಲಾಗಿದೆ. ಲೋಕಾಯುಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ಮುಖ್ಯಮಂತ್ರಿ ಅವರು ಸೇರಿದಂತೆ ಯಾವ ಸಚಿವರ ಕೈವಾಡವು ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ನಾವು ಈ ಪ್ರಕರಣದಲ್ಲಿ ತುಂಬಾ ನೈತಿಕವಾಗಿ ನಡೆದುಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅರ್ಕಾವತಿ ಲೇಔಟ್ ಹಗರಣದಲ್ಲಿ ಅಂದಿನ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ನೈತಿಕತೆ ಇಲ್ಲದೆ ವರ್ತಿಸಿದ್ದಾರೆ. ಇಡೀ ಪ್ರಕರಣದ ಕುರಿತು ನಾನು ವಿಧಾನಸಭೆಯಲ್ಲಿ ಸಾಕಷ್ಟು ಬಾರಿ ಚರ್ಚೆಗೆ ತಂದು ಆರೋಪ ಮಾಡಿದ್ದೇನೆ. 948 ಎಕರೆ ಭೂಮಿಯನ್ನು ಡಿ ನೋಟಿಫೈ ಮಾಡಿರುವ ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಕೆಂಪಣ್ಣ ಆಯೋಗದ ಸಹಾಯವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಡೆದು ಕ್ಲೀನ್ ಚೀಟ್ ಪಡೆದು ಮುಚ್ಚಿ ಹಾಕುವಲ್ಲಿ ಯಶಸ್ವಿಯಾದರು. ಇದು ನೈತಿಕತೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಐಸಿಯುನಲ್ಲಿದೆ: ರಾಜ್ಯದಲ್ಲಿ ಕಾಂಗ್ರೆಸ್ ಕಥೆ ಮುಗಿದಿದೆ. ಅದು ಸಂಪೂರ್ಣವಾಗಿ ಶಕ್ತಿ ಕಳೆದುಕೊಂಡು ಎದುಸಿರು ಬಿಡುತ್ತ ಐಸಿಯು ಸೇರಿದೆ. ಪಾಪ ಅದನ್ನು ಉಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆಸಿ ಇನ್ನೆಲ್ಲಿದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ದುರಾದೃಷ್ಟವೆಂದರೆ, ಅವರ ಪಕ್ಷದಲ್ಲಿನ ಒಳ ಜಗಳ ಬಗೆಹರಿಸುವುದೇ ಅವರಿಗೆ ತಲೆ ನೋವಾಗಿದೆ. ಇನ್ನು ನಾಯಕತ್ವ ಪಕ್ಷ ಅಧಿಕಾರಕ್ಕೆ ತರುವುದು ಕನಸಿನ ಮಾತೇ ಸರಿ ಎಂದು ಜಗದೀಶ್ ಶೆಟ್ಟರ್ ಟೀಕಿಸಿದರು.

ಕಾಂಗ್ರೆಸ್ನವರು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ತಿರುಕನ ಕನಸು ಕಾಣುತ್ತಿದ್ದಾರೆ ಆದರೆ ಅದು ಸಾಧ್ಯವಿಲ್ಲದ ಪಕ್ಷ ಈಗ ಹಲವಾರು ಟೀಕೆಗಳಿಗೆ ಗುರಿಯಾಗಿದೆ ಆದ್ದರಿಂದ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ,ವಿಧಾನ ಪರಿಷತ್ ಬಿ.ಜಿ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಅಮರ್ನಾಥ್ ಪಾಟೀಲ್, ಬಿಜೆಪಿ ನಗರ ಅಧ್ಯಕ್ಷ ಜಿ ಪಾಟೀಲ್ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next