ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಹರಿಸಿದ ಪರಿಣಾಮ ವಿಶ್ವವಿಖ್ಯಾತ ಹಂಪಿಯ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತಟದ ಸ್ಮಾರಕಗಳು ಮುಳಗಡೆಯಾಗಿವೆ.
ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಪ್ರಸ್ತುತ 85 ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ನದಿಗೆ ಹರಿಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ವಿರೂಪಾಕ್ಷ ದೇವಾಲಯದ ಹತ್ತಿರ ಹರಿಯುವ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ನದಿ ತೀರದ ವೈದಿಕ ಮಂಟಪ, ಪುರಂದರದಾಸರ ಮಂಟಪ ಸೇರಿದಂತೆ ನದಿ ಅಂಚಿನ ಕೆಲ ಸ್ಮಾರಕಗಳು, ನೀರಿನಲ್ಲಿ ಮುಳುಗಡೆಯಾಗಿವೆ.
ಇದನ್ನೂ ಓದಿ: ನಮ್ಮದು ಕೆರಳಿದ ಸಿಂಹ, ಕಾಂಗ್ರೆಸ್ ನದ್ದು ಮಲಗಿದ ಸಿಂಹ: ಸಿಎಂ ವ್ಯಂಗ್ಯ
ರಾಮಲಕ್ಷ್ಮಣ ಹಾಗೂ ಯಂತ್ರೋದ್ಧಾರಕ ಆಂಜನೇಯ ದೇವಾಲಯಕ್ಕೆ ತೆರಳುವ ಓನಿಕೆ ಕಿಂಡಿ ಮಾರ್ಗ ಸಂಪರ್ಕ ಕಡಿತವಾಗಿದೆ. ನದಿ ತೀರದಲ್ಲಿ ತೀವ್ರ ನಿಗಾವಹಿಸಲಾಗಿದೆ. ನದಿ ನೀರಿಗೆ ಪ್ರವಾಸಿಗರು ಇಳಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ.