ನವದೆಹಲಿ:ಗಾಲ್ವಾನ್ ಕಣಿವೆ ಪ್ರದೇಶದಲ್ಲಿನ ಉದ್ವಿಗ್ನ ಸ್ಥಿತಿ ತಣ್ಣಗಾಗುವ ಮುನ್ನ ಇದೀಗ ಭಾರತ 3,488 ಕಿಲೋ ಮೀಟರ್ ನಷ್ಟು ಉದ್ದವಿರುವ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್(ವಾಸ್ತವ ನಿಯಂತ್ರಣ ರೇಖೆ-ಎಲ್ ಎಸಿ) ಬಳಿ ಮತ್ತಷ್ಟು ಸೇನಾ ಬಲವನ್ನು ಹೆಚ್ಚಿಸಲು ನಿರ್ಧರಿಸಿದೆ. ಇದಕ್ಕೆ ಕಾರಣ ಚೀನಾ ಮತ್ತೊಂದು ಭಾಗದಲ್ಲಿ ಬಿರುಸಿನ ಚಟುವಟಿಕೆ ನಡೆಸುತ್ತಿರುವುದು, ಕೇವಲ ಸೇನೆ ಜಮಾವಣೆ ಮಾತ್ರವಲ್ಲ, ಇಂಡೋ-ಟಿಬೆಟ್ ಗಡಿ ಕಾವಲು ಪೊಲೀಸ್ ಪಡೆ ಕೂಡಾ ವಿವಿಧ ಸೇನಾ ಶಿಬಿರ ಹಾಗೂ ಶಸ್ತ್ರಾಸ್ತ್ರ ಜಮಾವಣೆ ಮಾಡತೊಡಗಿರುವುದಾಗಿ ವರದಿ ವಿವರಿಸಿದೆ.
ಲೇಹ್ ಗೆ ಐಟಿಬಿಪಿ ವರಿಷ್ಠ ಎಸ್ ಎಸ್ ದೆಸ್ವಾಲ್, ಲೆಫ್ಟಿನೆಂಟ್ ಜನರಲ್ ಪರಮಜಿತ್ ಸಿಂಗ್ ಭೇಟಿ ನೀಡಿದ ನಂತರ ಸೇನೆಗೆ ಐಟಿಬಿಪಿ ಇನ್ನಷ್ಟು ಬಲತುಂಬುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವರದಿ ತಿಳಿಸಿದೆ.
ಗಾಲ್ವಾನ್ ಗಡಿ ಸಂಘರ್ಷಕ್ಕೂ ಮುನ್ನವೇ ನಾವು ಲಡಾಖ್ ಗೆ ಸೇನೆಯನ್ನು ಕಳುಹಿಸಿದ್ದೇವು. ಆದರೆ ನಾವು ಇದೀಗ ಆ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಮಾಹಿತಿ ಪ್ರಕಾರ, ಎಲ್ಲಾ ಪಹರೆ ನಡೆಸುವ ಸ್ಥಳಗಳಳ್ಲಿ ಆರ್ಮಿಗೆ ಪ್ಲ್ಯಾಟೂನ್ ಸಹಕಾರ ನೀಡಲಿದೆ. ಸಾಮಾನ್ಯವಾಗಿ ಒಂದು ಪ್ಲ್ಯಾಟೂನ್ ನಲ್ಲಿ 30 ಯೋಧರು ಇರುತ್ತಾರೆ. ಒಂದು ಕಂಪನಿಯಲ್ಲಿ ನೂರು ಮಂದಿ ಸೈನಿಕರ ತಂಡ ಇರುತ್ತದೆ ಎಂದು ವಿವರಿಸಿದ್ದಾರೆ.
ಸೋಮವಾರ ಉಭಯ ದೇಶಗಳ ನಡುವೆ ಮಾತುಕತೆ ನಡೆದಿದ್ದರೂ ಕೂಡಾ ಗಾಲ್ವಾನ್ ಕಣಿವೆ, ಹಾಟ್ ಸ್ಪ್ರಿಂಗ್ಸ್ ಮತ್ತು ಪಾಂಗ್ವಾಂಗ್ ಲೇಕ್ ಪ್ರದೇಶ ಈಗಲೂ ಉದ್ವಿಗ್ನ ಸ್ಥಿತಿಯಲ್ಲಿ ಇರುವುದಾಗಿ ವರದಿ ತಿಳಿಸಿದೆ.