ಬಂಗಾರಪೇಟೆ: ಕೆಜಿಎಫ್ ಹಾಗೂ ಬಂಗಾರಪೇಟೆ ಭಾಗದಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲ. ಅಲ್ಲದೆ, ಚಿನ್ನದಗಣಿ ಮುಚ್ಚಿರುವುದರಿಂದ ಜನ ಪ್ರತಿನಿತ್ಯ ಕೆಲಸಕ್ಕೆ ಬೆಂಗಳೂರಿಗೆ ಹೋಗುತ್ತಾರೆ. ಅವರ ಅನುಕೂಲಕ್ಕಾಗಿ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸಂಸದ ಎಸ್. ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಬಂಗಾರಪೇಟೆ-ಮಾರಿಕುಪ್ಪಂ ನಡುವಿನ ನೂತನ ಮೆಮು ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಜಿಎಫ್ ತಾಲೂಕಿನಿಂದ ಬೆಳಗ್ಗೆ 11ರಿಂದ 12 ಗಂಟೆಯ ಮಧ್ಯದಲ್ಲಿ ಬೆಂಗಳೂರಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾರಿಕುಪ್ಪ-ಬಂಗಾರಪೇಟೆ ಮಾರ್ಗದ ಮಧ್ಯೆ ನೂತನ ಮೆಮು ರೈಲು ಓಡಿಸಲಾಗುತ್ತಿದೆ ಎಂದು ಹೇಳಿದರು.
ನೂತನ ರೈಲು ಮಾರ್ಗ: ಬೆಂಗಳೂರಿನ ವೈಟ್‌ಪೀಲ್ಡ್, ಕೋಲಾರ, ಮುಳಬಾಗಿಲು, ವಿ.ಕೋಟೆ ಮಾರ್ಗವಾಗಿ ಕುಪ್ಪಂಗೆ ನೂತನ ರೈಲು ಮಾರ್ಗ, ಮಾರಿಕುಪ್ಪಂ- ಬಂಗಾರಪೇಟೆ ಮಾರ್ಗ ಮಧ್ಯೆ ಡಬಲ್ ಟ್ರ್ಯಾಕ್ ನಿರ್ಮಾಣ ಹಾಗೂ ಬಂಗಾರಪೇಟೆ ಜಂಕ್ಷನ್ ಆಧುನೀಕರಣಕ್ಕೆ ವಿಶೇಷ ಯೋಜನೆ ರೂಪಿಸಿ, ಕೂಡಲೇ ಕೆಲಸ ಪ್ರಾರಂಭಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ರೈಲು ಖಾತೆ ಸಚಿವರ ಮೂಲಕ ಮನವಿ ಮಾಡಿದ್ದು, ಮುಂದಿನ ತಿಂಗಳು ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.
ಟ್ರ್ಯಾಕ್ ಸಮಸ್ಯೆ ಬಗೆಹರಿಸಲು ಯತ್ನ: ಪ್ರತಿ ದಿನ ಬೆಳಗ್ಗೆ 8.30 ರಿಂದ 11 ಗಂಟೆಯವರೆಗೂ ಬಂಗಾರಪೇಟೆ- ಬೆಂಗಳೂರು ಮಾರ್ಗದಲ್ಲಿ ಯಾವುದೇ ರೈಲುಗಾಡಿಗಳು ಇಲ್ಲ. ಇದರಿಂದ ಈ ಸಮಯದಲ್ಲಿ ಬೆಂಗಳೂರಿಗೆ ಪ್ರಯಾಣಿಸುವವರಿಗೆ ತೊಂದರೆ ಆಗಿದೆ. ಈ ಅವಧಿಯಲ್ಲಿ ಹೊಸ ರೈಲು ಓಡಿಸಲು ಟ್ರ್ಯಾಕ್ ಸಮಸ್ಯೆ ಇದೆ. ಅದನ್ನು ಬಗೆಹರಿ ಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಸಿಗ್ನಲ್ ಸಮಸ್ಯೆ ನಿವಾರಣೆಗೆ ಸೂಚನೆ: ಬಂಗಾರಪೇಟೆ ಪಟ್ಟಣದ ಬೂದಿಕೋಟೆ ವೃತ್ತದಲ್ಲಿ ಯೂಟರ್ನ್ಮಾ ರ್ಗದಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಕಷ್ಟಕರವಾಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಇದರ ಬಗ್ಗೆ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಬಂಗಾರಪೇಟೆ-ಬೆಂಗಳೂರು ಮಾರ್ಗದಲ್ಲಿ ಹೆಚ್ಚು ರೈಲುಗಾಡಿಗಳು ಓಡಾಡುತ್ತಿರುವುದರಿಂದ ಸಿಗ್ನಲ್‌ಗಳ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ. ಜಿಪಂ ಸದಸ್ಯ ಬಿ.ವಿ.ಮಹೇಶ್, ಎಂ.ಪಿ.ಶ್ರೀನಿವಾಸಗೌಡ, ರೈಲ್ವೆ ಡಿಸಿಎಂ ಶಿವ್ನಾಕರ್ ವಿಶ್ವಾಸ್, ವಾಣಿಜ್ಯಾಧಿಕಾರಿ ಆರ್. ಮುರಳಿ, ರೈಲ್ವೆ ಪಿಆರ್‌ಒ ನರೇಂದ್ರ, ಮುಖಂಡರಾದ ಬಿ.ಹೊಸರಾಯಪ್ಪ, ಎಂ.ಸಂಪಂಗಿರೆಡ್ಡಿ, ಸೀತಾರಾಮಪ್ಪ, ಕೀಲುಕೊಪ್ಪ ಶ್ರೀನಿವಾಸಮೂರ್ತಿ, ತ್ಯಾಗರಾಜ್, ಮುನಿಸ್ವಾಮಿರೆಡ್ಡಿ, ಭಜರಂಗದಳ ಮಹೇಶ್, ಶಾಂತಿನಗರ ಮಂಜುನಾಥ್, ಕೆಸರನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.