ನವದೆಹಲಿ: ಬೇರೆ ಬೇರೆ ದೇಶಗಳಲ್ಲಿರುವ ಒಟ್ಟು 3,336 ಭಾರತೀಯರಿಗೆ ಕೋವಿಡ್ ಮಹಾಮಾರಿ ತಗಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಸರಕಾರ ಗುರುವಾರ ಬಹಿರಂಗಪಡಿಸಿದೆ.
ಒಟ್ಟಾರೆ 53 ದೇಶಗಳಲ್ಲಿರುವ 3,336 ಭಾರತೀಯರಿಗೆ ಸೋಂಕು ದೃಢಪಟ್ಟಿದ್ದು, 25 ಮಂದಿ ಈಗಾಗಲೇ ಈ ಮಹಾಮಾರಿಗೆ ಬಲಿಯಾಗಿದ್ದಾರೆ.
ದೇಶದಲ್ಲಿ ಕೋವಿಡ್ ವೈರಸ್ ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ಸಲುವಾಗಿ, ಸರಕಾರವು ಇಂಥ ಭಾರತೀಯರನ್ನು ಆಯಾ ದೇಶಗಳಿಂದ ಸ್ವದೇಶಕ್ಕೆ ಕರೆತರುವ ಪ್ರಯತ್ನ ಮಾಡುವುದಿಲ್ಲ. ಭಾರತೀಯರೆಲ್ಲರೂ ಸಹನೆಯಿಂದ ಕಾಯಬೇಕಾಗುತ್ತದೆ ಎಂದು ಸರಕಾರದ ಮೂಲಗಳು ಹೇಳಿವೆ.
ಪ್ರತಿ 10 ಲಕ್ಷ ಜನರಲ್ಲಿ ಸಾವಿನ ಸಂಖ್ಯೆ
ಪ್ರತಿ 10 ಲಕ್ಷ ಮಂದಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಸೋಂಕಿನಿಂದ ಸಾವಿಗೀಡಾದವರ ಸರಾಸರಿ ಸಂಖ್ಯೆ 0.3ರಷ್ಟಿದೆ. ಅಮೆರಿಕದಲ್ಲಿ 86, ಸ್ಪೇನ್‌ನಲ್ಲಿ 402, ಇಟಲಿಯಲ್ಲಿ 358, ಫ್ರಾನ್ಸ್‌ನಲ್ಲಿ 263, ಯು.ಕೆಯಲ್ಲಿ 190 ಇದೆ. ಸಾವಿನ ಸಂಖ್ಯೆ ಕಡಿಮೆ ಇರುವ ಆಸ್ಟ್ರೇಲಿಯಾ (2), ಜಪಾನ್ (1) ಹಾಗೂ ದಕ್ಷಿಣ ಕೊರಿಯಾ (4) ದೇಶಗಳೂ ಕೂಡ ಭಾರತಕ್ಕಿಂತ ಹಿಂದಿವೆ.