ಬೆಂಗಳೂರು: “ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಇಬ್ಬರು ನಟರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಿಸಿರುವ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಚಿತ್ರದ ನಿರ್ಮಾಪಕ ಸುಂದರ್.ಪಿ ಗೌಡ ಸೇರಿದಂತೆ ಐದು ಮಂದಿ ಆರೋಪಿಗಳು ಹೈಕೋರ್ಟ್ ಮೊರೆಹೋಗಿದ್ದಾರೆ.
ಈ ಅರ್ಜಿ ವಿಚಾರಣೆಯನ್ನು ಮಂಗಳವಾರ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರ ಪರ ವಕೀಲರ ವಾದ ಪ್ರತಿವಾದ ಆಲಿಸಿ, ಪ್ರತಿವಾದಿಯಾದ ರಾಜ್ಯಸರ್ಕಾರ ( ತಾವರೆಕೆರೆ ಪೊಲೀಸ್ ಇನ್ಸಪೆಕ್ಟರ್) ತಿಪ್ಪಗೊಂಡನಹಳ್ಳಿ ಜಲಾಶಯದ ಉಸ್ತುವಾರಿ ಸೂಪರಿಂಟಂಡೆಂಟ್, ಪ್ರಕರಣದ ತನಿಖಾಧಿಕಾರಿ ವಿ. ಅನಿಲ್‌ಕುಮಾರ್‌ಗೆ ನೋಟಿಸ್ ಜಾರಿಗೊಳಿಸಿ ಸೆಪ್ಟೆಂಬರ್ 11ಕ್ಕೆ ವಿಚಾರಣೆ ಮುಂದೂಡಿತು.
ಮಾಸ್ತಿಗುಡಿ ಚಿತ್ರೀಕರಣದ ವೇಳೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ದುರಾದೃಷ್ಟವಶಾತ್ ಆಕಸ್ಮಿಕವಾಗಿ ಸಂಭವಿಸಿದ ದುರ್ಘಟನೆಯಲ್ಲಿ ನಟರಿಬ್ಬರು ಜಲಾಶಯಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇದರಲ್ಲಿ ತಮ್ಮ ಪಾತ್ರವಿಲ್ಲ. ಇದು ಪೂರ್ವನಿರ್ಧಾರಿತ ಕೊಲೆಯಲ್ಲ. ಆದರೆ ಪೊಲೀಸರು, ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಇದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಚಿತ್ರದ ನಿರ್ಮಾಪಕ ಸುಂದರ್.ಪಿ ಗೌಡ, ಚಿತ್ರದ ನಿರ್ದೇಶಕ ಪಿ. ನಾಗಶೇಖರ್, ಸಾಹಸ ನಿರ್ದೇಶಕ ರವಿಮರ್ಮ, ಸಹಾಯಕ ನಿರ್ದೇಶಕರಾದ ಮರದಪ್ಪ, ಎಸ್ ಭರತ್‌ರಾವ್ ಅರ್ಜಿಯಲ್ಲಿ ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಎಚ್. ಪವನ್ ಚಂದ್ರಶೆಟ್ಟಿ ವಾದಿಸಿದರು.
ಏನಿದು ಪ್ರಕರಣ?: ಕಳೆದ ವರ್ಷ ನವೆಂಬರ್ 8ರಂದು ತಿಪ್ಪಗೊಂಡನಳ್ಳಿ ಜಲಾಶಯದಲ್ಲಿ ನಡೆಯುತ್ತಿದ್ದ ಮಾಸ್ತಿಗುಡಿ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ, ಹೆಲಿಕಾಪ್ಟರ್‌ನಿಂದ ಹಾರಿದ್ದ ಖಳನಟರಾದ ಉದಯ್ ಹಾಗೂ ಅನಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಚಿತ್ರೀಕರಣದ ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣದಿಂದಲೇ ನಟರಿಬ್ಬರ ಸಾವಿಗೆ ಕಾರಣ ಎಂದು ತಿಳಿದು ಬಂದಿತ್ತು.
ಈ ನಿಟ್ಟಿನಲ್ಲಿ ಚಿತ್ರದ ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ನಾಗಶೇಖರ್ ಹಾಗೂ ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ತಾವರೆಕೆರೆ ಠಾಣೆ ಪೊಲೀಸರು, ರಾಮನಗರ ಜೆಎಂಎಫ್ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.