ಉಡುಪಿ: ಚುನಾವಣ ಸಂದರ್ಭದಲ್ಲಿ ಡ್ಯೂಟಿ ಬಂದಿದೆ ಎಂದರೆ ಸಾಕು, ನೌಕರರಲ್ಲಿ ನಡುಕ ಪ್ರಾರಂಭವಾಗುತ್ತದೆ. ಆದೇಶ ಬಂದ ಕೂಡಲೇ ವಿವಿಧ ಕಾರಣಗಳನ್ನು ಮುಂದಿಟ್ಟು ಕರ್ತವ್ಯದಿಂದ ಬಿಡುಗಡೆಗೊಳ್ಳಲು ಹವಣಿಸುವುದು ಸಾಮಾನ್ಯ.
ಇದಕ್ಕೆಲ್ಲ ಅಪವಾದವೆಂಬಂತೆ ಜೀವನವಿಡೀ ಚುನಾವಣೆಗಳಲ್ಲಿ ಕಳೆದ ಶ್ರಮಜೀವಿಯೊಬ್ಬರಿದ್ದಾರೆ. ಇವರು ಜಿಲ್ಲಾಧಿಕಾರಿ ಕಚೇರಿಯ ಚುನಾವಣ ಶಾಖೆಯ ಡಿ ಗ್ರೂಪ್ ಸಿಬಂದಿ ವಿಶ್ವನಾಥ ಶೆಟ್ಟಿ. ಚುನಾವಣೆ ಬಂತೆಂದರೆ ಇವರಿಗೆ ಬಿಡುವಿಲ್ಲದ ಕೆಲಸ. ಇವರದು ಬರೋಬ್ಬರಿ 80ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಕೆಲಸ ಮಾಡಿದ ಅನುಭವ. ಯಾವುದೇ ಬೇಸರವಿಲ್ಲದೆ, ಚುನಾವಣೆಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾರೆ.
ಚುನಾವಣ ಕಾರ್ಯಕ್ಕೆ ನಿಯೋಜನೆಯಾಗುವ ಸಿಬಂದಿ ಇಡೀ ಸೇವಾವಧಿಯಲ್ಲಿ ಸುಮಾರು 10ರಿಂದ 15 ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಬಹುದು. ಅದೂ ಪ್ರತಿ ಚುನಾವಣೆಯಲ್ಲಿ ಹೆಚ್ಚೆಂದರೆ ಕೇವಲ 2 ದಿನಗಳ ಕರ್ತವ್ಯ. ಇದನ್ನೇ ಬಹುತೇಕರು ತಪ್ಪಿಸಿಕೊಳ್ಳಲು ಯತ್ನಿಸುವುದು. ಆದರೆ ಶೆಟ್ಟಿಯವರ ಕೆಲಸ ಚುನಾವಣ ಪ್ರಕ್ರಿಯೆಗೂ ಹಿಂದಿನಿಂದ ಆರಂಭಗೊಳ್ಳುತ್ತದೆ. ಮತದಾನ ಮುಗಿದು, ಫಲಿತಾಂಶ ಘೋಷಣೆಯಾಗಿ, ಚುನಾವಣ ಪ್ರಕಿಯೆ ಸಂಪೂರ್ಣವಾಗುವ ವರೆಗೂ ಇವರದು ಮುಗಿಯದ ದುಡಿಮೆ.
ಚುನಾವಣ ಸಂದರ್ಭದಲ್ಲಿ ಸದಾ ಬ್ಯುಸಿಯಾಗಿರುವ ಇವರಿಗೆ ಸಮಯದ ಮಿತಿ ಇರುವುದಿಲ್ಲ. ಕೆಲಸದ ಒತ್ತಡದಲ್ಲಿಯೂ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ವಿವಿಧ ಪತ್ರಗಳನ್ನು ತಲುಪಿಸುವುದು, ಜೆರಾಕ್ಸ್‌ಕಾರ್ಯ, ಕಡತಗಳ ಜೋಡಣೆ, ಸಾಮಗ್ರಿಗಳ ಶೇಖರಣೆ, ವಿತರಣೆ, ಮತ ಎಣಿಕೆ ಕೇಂದ್ರದಲ್ಲಿನ ಅಗತ್ಯ ಕಾರ್ಯಗಳನ್ನು ಇವರು ನಿರ್ವಹಿಸುತ್ತಾರೆ. ಹಿಂದೆ ಮತಪತ್ರ ಎಣಿಕೆ ಸಮಯ
ದಲ್ಲಿ ಬೆಳಗ್ಗಿನ ಜಾವದ ವರೆಗೆ ಕರ್ತವ್ಯ ನಿರ್ವಹಿಸಿದ್ದೂ ಇದೆ.
2001ರಲ್ಲಿ 900 ರೂ. ವೇತನಕ್ಕೆ ಗ್ರಾಮ ಸಹಾಯಕರಾಗಿ ಸೇರಿದ ಇವರು, ಇದುವರೆಗೆ ಗ್ರಾ.ಪಂ., ತಾ.ಪಂ., ನಗರಸಭೆ, ಪುರಸಭೆ, ವಿಧಾನಸಭೆ, ವಿಧಾನ ಪರಿಷತ್, ಎಪಿಎಂಸಿ, ಲೋಕಸಭೆ ಇತ್ಯಾದಿ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಮತದಾನ ಪವಿತ್ರ ಕರ್ತವ್ಯ. ಮತದಾನವು ಪ್ರಜಾಪ್ರಭುತ್ವದ ಯಶಸ್ಸು. ನಾವು ಚುನಾವಣೆಗಾಗಿ ಕಷ್ಟಪಡುವುದರ ಉದ್ದೇಶ ಒಂದೇ ಯಾವುದೇ ಹಂತದಲ್ಲೂ ಚುನಾವಣ ಕಾರ್ಯದಲ್ಲಿ ತೊಂದರೆಯಾಗಬಾರದು ಎಂಬುದಕ್ಕಾಗಿ. ಪ್ರತಿಯೊಬ್ಬರೂ ಮತದಾನ ಮಾಡಬೇಕು ಎನ್ನುವ ಇವರು, ಸುಗಮ ಚುನಾವಣೆಗೆ ನನ್ನಿಂದ ಕೈಲಾದಷ್ಟು ಸೇವೆ ಸಲ್ಲಿಸುವ ಭಾಗ್ಯ ದೊರೆತಿರುವುದೇ ನನಗೆ ಹೆಮ್ಮೆ ಎನ್ನುತ್ತಾರೆ.