Advertisement

ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೇ ಕಡಲಾಮೆಯ 70 ಕ್ಕೂ ಹೆಚ್ಚು ಮೊಟ್ಟೆಗಳು ಪತ್ತೆ

10:45 AM Jan 13, 2022 | Team Udayavani |

ಅಂಕೋಲಾ: ಬೃಹದಾಕಾರದ ಕಡಲಾಮೆಗಳ 70 ಕ್ಕೂ ಹೆಚ್ಚು ಮೊಟ್ಟೆಗಳು ಅಂಕೋಲಾ ತಾಲೂಕಿನ ಬಾವಿಕೇರಿ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.

Advertisement

ಅಳಿವಿನಂಚಿನಲ್ಲಿರುವ ಬೃಹದಾಕಾರದ ಕಡಲಾಮೆಯ ಮೊಟ್ಟೆಗಳನ್ನು ಕಡಲತೀರದಲ್ಲಿ ರಕ್ಷಣೆ ಮಾಡಲಾಗಿದ್ದು, ಅರಣ್ಯ ಇಲಾಖೆಯ ಅಂಕೋಲಾ ವಲಯ   ಹಾಗೂ ಕೋಸ್ಟಲ್ ಮತ್ತು ಮರೈನ್ ಇಕೋಸಿಸ್ಟಮ್ ಘಟಕ ಕಾರವಾರ ಇವರ ಸಹಭಾಗಿತ್ವದಲ್ಲಿ ಆಲಿವ್ ರಿಡ್ಲೇ ಕಡಲಾಮೆಯ ಮೊಟ್ಟೆಗಳನ್ನು ರಕ್ಷಿಸಲಾಗಿದೆ.

ಸದ್ಯ ಅವನತಿಯ ಅಂಚಿನಲ್ಲಿರುವ ಆಲಿವ್ ರಿಡ್ಲೇ ಆಮೆಗಳು ಸಮುದ್ರದ ತಡದಲ್ಲಿನ ಯಾಂತ್ರಿಕ ಬದಲಾವಣೆಯಿಂದಾಗಿ ತನ್ನ ವಂಶಗಳನ್ನು ಕಳೆದುಕೊಳ್ಳುತಿದ್ದು ಅಳಿವಿನಂಚಿಗೆ ತಲುಪಿದೆ. ಬುಧವಾರ ಅರಣ್ಯ ಇಲಾಖೆ ಈ ಮೊಟ್ಟೆಗಳನ್ನು ರಕ್ಷಣೆಮಾಡಿದ್ದು, ಭೂಮಿಯ ಶಾಖದ ಮೂಲಕ ಮೊಟ್ಟೆ ಮರಿಯೊಡೆದ ನಂತರ ಸಮುದ್ರಕ್ಕೆ ಬಿಡಲಿದ್ದಾರೆ.

ಕರಾವಳಿ ತೀರಗಳಲ್ಲಿ ಆಲಿವ್ ರಿಡ್ಲೆ ಹಾಗೂ ಗ್ರೀನ್ ಸೀಟರ್ಟಲ್ ಎಂಬ ಎರಡು ಪ್ರಬೇಧದ ಕಡಲಾಮೆಗಳು ಇದ್ದು ಗ್ರೀನ್ ಸೀಟರ್ಟಲಗಳ ಮೊಟ್ಟೆಗಳ ಗಾತ್ರ ಸಣ್ಣದಾಗಿರುತ್ತವೆ. ಈಗ ಪತ್ತೆಯಾಗಿರುವ ಮೊಟ್ಟೆಗಳ ಗಾತ್ರ ದೊಡ್ಡದಾಗಿರುವುದರಿಂದ ಇವು ಆಲಿವ್ ರಿಡ್ಲೇ ಆಮೆಯ ಮೊಟ್ಟಗಳಾಗಿವೆ. ಇವು ಮುಂದೆ 50 ರಿಂದ 60 ದಿನಗಳಲ್ಲಿ ಮರಿಯಾಗಿ ಹೊರಗೆ ಬಂದು ರಾತ್ರಿ ವೇಳೆಯಲ್ಲಿ ಸಮುದ್ರ ಸೇರುತ್ತವೆ. ಅಲ್ಲಿಯವರೆಗೆ ಮೊಟ್ಟೆಗಳನ್ನು ರಕ್ಷಣೆ ಮಾಡಲಾಗುತ್ತದೆ.
ಸ್ಥಳೀಯ ಮೀನುಗಾರರಾದ ಗಟಿಯ ಪೊಕ್ಕ ಹರಿಕಾಂತ ಇವರು ನೀಡಿದ ಮಾಹಿತಿ ಮೇರೆಗೆ ಕಡಲಾಮೆ ಮೊಟ್ಟೆಗಳ ರಕ್ಷಣಾ ಕಾರ್ಯದಲ್ಲಿ ಅರಣ್ಯ ಇಲಾಖೆ ಅಂಕೋಲಾ ವಲಯ ಅರಣ್ಯಾಧಿಕಾರಿ ಪ್ರಮೋದ.ಬಿ. ಹಾಗೂ ರಿಸರ್ಚ ಕೋ-ಆರ್ಡಿನೇಟರ್ ಶಾನ್ ನವಾಜ್ ಕಡಪಾ ಉಪಸ್ಥಿತರಿದ್ದು ಸಿಬ್ಬಂದಿಗಳಾದ ವೆಂಕಟರಮಣ ಸಣ್ಣಪ್ಪ ನಾಯಕ, ಸದಾನಂದ ಪುತ್ತು ಗೌಡ, ಸುಧಾಕರ ಪಿ ಗಾಂವಕರ, ವಿಘ್ನೇಶ್ವರ ನಾಯ್ಕ ಸತೀಶ ಗಣಪತಿ ನಾಯ್ಕಸ್ಥಳೀಯರಾದ ರಾಮಚಂದ್ರ, ನಾರಾಯಣ, ಸಚಿನ ನಾಯ್ಕ ಹಾಜರಿದ್ದರು.

ಅಂಕೋಲಾದ ಈ ಪ್ರದೇಶದಲ್ಲಿ ಪ್ರಥಮ ಬಾರಿಗೆ ಕಂಡುಬಂದಿದೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಅನುಬಂಧ 1 ರಂತೆ ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಕಾವಲು ಕಾಯಲಾಗುವದು. 45 ರಿಂದ 60 ದಿನ ಭೂಮಿಯ ಕಾವಿನಿಂದ ಮರಿ ಹೊರಬರುತ್ತದೆ. ನಾಯಿ ಹಾವುಗಳು ಬರದಂತೆ ಪಂಜರವನ್ನು ನಿರ್ಮಿಸಿದ್ದು ಮರಿ ಹೊರಬಂದ 12 ತಾಸುಗಳಲ್ಲಿ ಸಮುದ್ರಕ್ಕೆ ಬಿಡಬೇಕು. ಕಾವಲು ಕಾಯಲು ಓರ್ವ ವಾಚಮನ್ ನೇಮಿಸಲಾಗಿದೆ. ಸ್ಥಳೀಯರ ನೆರವು ಕೂಡ ಅಗತ್ಯ. ಕಡಲಾಮೆಗಳ ಮೊಟ್ಟೆಗಳ ಮಾಹಿತಿ ನೀಡಿದವರಿಗೆ ಇಲಾಖೆ ವತಿಯಿಂದ 1000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. -ಪ್ರಮೋದ ಬಿ. ಕೋಸ್ಟಲ್ ಮರೈನ್ ಕಾರವಾರದ ವಲಯ ಅರಣ್ಯಾಧಿಕಾರಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next