ಪುಣೆ: ಇಲ್ಲಿನ ಶಿಕ್ರಪುರ ಎಂಬಲ್ಲಿ ಭ್ರೂಣ ಪರೀಕ್ಷಕರೊಬ್ಬರಿಗೆ ಕೋವಿಡ್ 19 ವೈರಸ್ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಇವರ ಬಳಿ ಭ್ರೂಣ ತಪಾಸಣೆ ಮಾಡಿಸಿಕೊಂಡಿರುವ ಸುಮಾರು 62 ಜನ ಗರ್ಭಿಣಿಯರಿಗೆ ಗೃಹ ನಿರ್ಬಂಧವನ್ನು ವಿಧಿಸಲಾಗಿದೆ.
ಏಪ್ರಿಲ್ 6 ರಿಂದ 8ನೇ ತಾರೀಖಿನ ನಡುವೆ ಸೋಂಕಿತನ ಭ್ರೂಣ ಪರೀಕ್ಷಕ ಕೇಂದ್ರಕ್ಕೆ ಭೇಟಿ ನೀಡಿರುವ ಎಲ್ಲಾ ಗರ್ಭಿಣಿಯರಿಗೆ ಇದೀಗ ಕ್ವಾರೆಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ ಎಂದು ಇಲ್ಲಿನ ಜಿಲ್ಲಾ ಪಂಚಾಯತ್ ಸಿಇಒ ಮಾಹಿತಿ ನೀಡಿದ್ದಾರೆ.
ಆದರೆ ಒಂದು ಸಮಾಧಾನದ ಸಂಗತಿ ಎಂದರೆ ಈ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಯಾರೊಬ್ಬ ಗರ್ಭಿಣಿಯಲ್ಲಿ ಇದುವರೆಗೂ ಕೋವಿಡ್ ವೈರಸ್ ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲ.
ಇನ್ನೊಂದು ಪ್ರಕರಣದಲ್ಲಿ 45 ವರ್ಷದ ನರ್ಸ್ ಒಬ್ಬರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾದ ಕಾರಣ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಒಟ್ಟು 30 ನರ್ಸ್ ಗಳನ್ನು ಕ್ವಾರೆಂಟೈನ್ ನಲ್ಲಿಡಲಾಗಿದೆ.
ಪುಣೆಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದ್ದು 362 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಈಗಾಗಲೇ 50 ಜನರು ಈ ವೈರಸ್ ಕಾರಣದಿಂದ ಸಾವನ್ನಪ್ಪಿದ್ದಾರೆ. ಇನ್ನು ಪುಣೆಯ ಗ್ರಾಮೀಣ ಭಾಗಗಳಲ್ಲಿ 10 ಪಾಸಿಟಿವ್ ಪ್ರಕರಣಗಳು ಇದುವರೆಗೂ ವರದಿಯಾಗಿದೆ.