ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ ದೊಡ್ಡ ಅನಾಹುತ ಸಂಭವಿಸಿದೆ.ಮಳೆ, ಪ್ರವಾಹದಿಂದ 7 ಮಂದಿ ಸಾವನ್ನಪ್ಪಿದ್ದಾರೆ. 845 ಮನೆಗಳು ಸಂಪೂರ್ಣ ನಾಶವಾಗಿದ್ದು, 58 ಸೇತುವೆಗಳು ಕೊಚ್ಚಿ ಹೋಗಿದ್ದು, 123 ಕಿಲೋ ಮೀಟರ್ ರಸ್ತೆ ಹಾಳಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಕ್ಕಾಗಿ ರಾಜ್ಯ ಸರ್ಕಾರ ನೂರು ಕೋಟಿ ಬಿಡುಗಡೆ ಮಾಡಿದೆ. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ನಂತರ 2 ದಿನ ಭೇಟಿ ನೀಡಿದ್ದೆ ಎಂದರು.
ಕೊಡಗಿನ ಪ್ರವಾಹ, ಮಳೆ ಪರಿಸ್ಥಿತಿಗೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. 24 ಗಂಟೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಯಾವುದಕ್ಕೂ ಜನರು ಆತಂಕ ಪಡುವುದು ಬೇಡ, ನಿಮ್ಮೊಂದಿಗೆ ಸರ್ಕಾರವಿದೆ ಎಂದು ಭರವಸೆ ನೀಡಿದರು.
773 ಮನೆಗಳು ಭಾಗಶವಾಗಿ ಹಾನಿಗೊಂಡಿದೆ. 128 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. 3,800 ವಿದ್ಯುತ್ ಕಂಬಗಳು ಹಾನಿಯಾಗಿ ಮುರಿದು ಹೋಗಿದೆ ಎಂದು ವಿವರ ನೀಡಿದರು.
ವಾಯುಪಡೆಯಿಂದ ವಿಶೇಷ ವಿಮಾನ ಕೂಡಾ ಬೀಡುಬಿಟ್ಟಿದೆ. ಸಂತ್ರಸ್ತರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡಿಸಲಾಗುವುದು ಎಂದರು. ನೆರೆ ಸಂತ್ರಸ್ತರು ಪಾತ್ರೆ ಖರೀದಿಸಲು ಸರ್ಕಾರದಿಂದಲೇ ಹಣ ನೀಡಲಾಗುವುದು ಎಂದು ತಿಳಿಸಿದರು.