Advertisement

ಉಳ್ಳಾಲದಲ್ಲಿ 300ಕ್ಕೂ ಹೆಚ್ಚು ಮನೆಗಳು ಜಲಾವೃತ

06:34 PM Aug 10, 2019 | Team Udayavani |

ಉಳ್ಳಾಲ: ನೇತ್ರಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ನದಿ ತಟದ ಪ್ರದೇಶಗಳು ಸೇರಿದಂತೆ ನಡುಗಡ್ಡೆಗಳು(ಕುದ್ರು)ಗಳ 300ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಗಿದೆ.

Advertisement

ಉಳ್ಳಾಲ ಭಾಗಶ: ಜಲಾವೃತ
ಉಳ್ಳಾಲ ನಗರಸಭಾ ವ್ಯಾಪ್ತಿಯ ನೇತ್ರಾವತಿ ನದಿ ತಟದ ಭಾಗಶ: ಪ್ರದೇಶಗಳು ಜಲಾವೃತಗೊಂಡಿದೆ. ಉಳ್ಳಾಲ ಉಳಿಯ ವ್ಯಾಪ್ತಿಯಲ್ಲಿ ಸುಮಾರು 25 ಮನೆಗಳು ಜಲಾವೃಗೊಂಡಿದ್ದು ಇದರಲ್ಲಿ 10 ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ.

ಉಳ್ಳಾಲ ಹೊಗೆ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು ಇಲ್ಲಿಯೂ ಭಾಗಶ: ಮನೆಗಳ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚಿನವರು ಸ್ವಂತ ದೋಣಿಗಳನ್ನು ಹೊಂದಿದ್ದು ಮನೆಯ ಹಿರಿಯರನ್ನು ಮತ್ತು ಮಕ್ಕಳನ್ನು ಸ್ಥಳಾಂತರಗೊಳಿಸಿದರೆ ದೊಡ್ಡವರು ಮನೆಗಳಲ್ಲೇ ಉಳಿದುಕೊಂಡಿದ್ದಾರೆ. ಉಳ್ಳಾಲ ಪಾಂಡೇಲ್‌ ಪಕ್ಕಾ 30 ಮನೆಗಳು ಜಲಾವೃತಗೊಂಡಿದ್ದು, 12 ಮನೆಗಳ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ. ಕಕ್ಕೆತೋಟ, ಬಂಡಿಕೊಟ್ಯದಲ್ಲಿ 20 ಮನೆಗಳು, ಉಳ್ಳಾಲ ಕೋಡಿಯಲ್ಲಿ 20 ಮನೆಗಳು ಜಲಾವೃತಗೊಂಡಿದೆ.

ಪೆರ್ಮನ್ನೂವ್ಯಾಪ್ತಿಯ ಕಲ್ಲಾಪು ಬಳಿ 40 ಮನೆಗಳು, ಕಲ್ಲಾಪುಪಟ್ಲ ಬಳಿ 100 ಮನೆಗಳು ಮಾರ್ಗತಲೆ ಮಂಚಿಲದಲ್ಲಿ 40 ಮನೆಗಳು ಜಲಾವೃತಗೊಂಡಿದೆ. ಈ ಸ್ಥಳಗಳಲ್ಲಿ ಸಂತ್ರಸ್ತರ ರಕ್ಷಣೆಗೆ ಜನಪ್ರತಿನಿಧಿಗಳು, ರಕ್ಷಣಾ ತಂಡಗಳು, ಸ್ಥಳೀಯ ಸಂಘಸಂಸ್ಥೆಗಳು ಅವಿರತ ಕೆಲಸ ಮಾಡಿವೆ.

Advertisement

ಉಳ್ಳಾಲ ವ್ಯಾಪ್ತಿಯಲ್ಲಿ ಉಳ್ಳಾಲ ದರ್ಗಾ, ಧರ್ಮನಗರ ಸರಕಾರಿ ಶಾಲೆ, ಶಾರದನಿಕೇತನ ಉಳ್ಳಾಲ, ಉಳ್ಳಾಲ ನಗರಸಭೆ, ಸಂತ ಸೆಬಾಸ್ತಿಯನ್ನರ ಶಾಲೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರೂ ಹೆಚ್ಚಿನವರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

ಸೋಮನಾಥ ಉಳಿಯದಲ್ಲೂ ನೀರು:
ಮುನ್ನೂರು ಗ್ರಾಮದ ಸೋಮನಾಥ ಉಳಿಯದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಅಪಾಯದಲ್ಲಿರುವ 15ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಯಿತು.

ಅಂಬ್ಲಿಮೊಗರು ಗ್ರಾಮದ ಗಟ್ಟಿಕುದ್ರು 30 ಮನೆಗಳು ಜಲಾವೃತಗೊಂಡಿದ್ದು ಪೆಡ್ಡಿ ಡಿ.ಸೋಜ ಎಂಬವರ ಮನೆ ಸಂಪೂರ್ಣಕುಸಿದಿದೆ. ಹರೇಕಳ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಂಪಿಗೆದಡಿ, ಬೈತಾರ್‌ ಬಳಿ 4ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ಅಂಬ್ಲಿಮೊಗರುವಿನ ಮದಕ ಸರಕಾರಿ ಶಾಲೆಯಲ್ಲಿ ಮತ್ತು ಎಲಿಯಾರ್‌ಪದವು ಚರ್ಚ್‌ನಲ್ಲಿ ನಿರಾಶ್ರಿತರ ಕೇಂದ್ರ ಶುರು ಮಾಡಲಾಗಿದೆ. ಇನ್ನು, ಉಳಿಯ ಸೋಮನಾಥೇಶ್ವರೀ ದೇವಸ್ಥಾನ, ಕೋಟ್ರಗುತ್ತು ಲಕ್ಷ್ಮೀನರಸಿಂಹ ದೇವಸ್ಥಾನ ಜಲಾವೃತಗೊಂಡಿದೆ.

ಪಾವೂರು ಉಳಿಯದಲ್ಲಿ 32 ಮನೆಗಳು ಜಲಾವೃತಗೊಂಡಿದ್ದು, ಎಲ್ಲಾ ಮನೆಗಳ ಕುಟುಂಬ ಸದಸ್ಯರನ್ನು ಸ್ಥಳಾಂತರಿಸಲಾಗಿದೆ. ಪಾವೂರು ಗ್ರಾಮದ ಇನೋಳಿ ಕೆಳಗಿನ ಕರೆಪ್ರದೇಶದಲ್ಲಿ 26 ಮನೆಗಳು ಜಲಾವೃತಗೊಂಡಿದ್ದು, 16 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಪಾವೂರು ತೋಡಾ ಬಳಿ
ನಾಲ್ಕು ಮನೆಗಳು, ಅಜಿಲ ಉಳಿಯ ನಾಲ್ಕು, ಪಾವೂರು ಗುತ್ತು 2, ಪಾವೂರು ದೋಟ 9ಮನೆ ಗಳು ಜಲಾವೃತಗೊಂಡಿದೆ.

ಬಾಣಂತಿಯರ ರಕ್ಷಣೆ
ಸೋಮನಾಥ ಉಳಿಯದಲ್ಲಿ ಜಲಾವೃತಗೊಂಡಿದ್ದ ಪ್ರದೇಶದಿಂದ ಇಬ್ಬರು ಬಾಣಂತಿಯರನ್ನು ಜಿಲ್ಲಾ ಪಂಚಾಯತ್‌ ಸದಸ್ಯೆ ಧನಲಕ್ಷ್ಮಿ ಗಟ್ಟಿ ನೇತೃತ್ವದಲ್ಲಿ ಇಬ್ಬರು ಬಾಣಂತಿಯರನ್ನು ಹಸುಗೂಸುಗಳೊಂದಿಗೆ ರಕ್ಷಿಸಲಾಯಿತು. ಸೋಮನಾಥ ಉಳಿಯ ನಿವಾಸಿ ಮಮತಾ ಅವರ 12 ದಿನದ ಮಗು ಮತ್ತು ರಚನಾ ಅವರ 10 ದಿನದ ಮಗುವಿನೊಂದಿಗೆ ರಕ್ಷಣೆ ಮಾಡಲಾಯಿತು. ಸ್ಥಳೀಯರು ಇವರ ರಕ್ಷಣೆಯಲ್ಲಿ ತೊಡಗಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next