Advertisement

ಗಿಳಿಯಾರು: ಅಂತರಗಂಗೆಯಿಂದ ನೆರೆ ಹಾವಳಿ

06:00 AM Jul 10, 2018 | Team Udayavani |

ಕೋಟ: ಕೋಟ ಗ್ರಾ.ಪಂ. ವ್ಯಾಪ್ತಿಯ ಗಿಳಿಯಾರಿನಲ್ಲಿ ಅಂತರಗಂಗೆ ಸಮಸ್ಯೆಯಿಂದ ಸೇತುವೆಯಲ್ಲಿ ನೀರು ಹರಿಯಲು ಅಡ್ಡಿಯಾಗಿ ಕಳೆದ 12ದಿನಗಳಿಂದ ನೆರೆ ಸಮಸ್ಯೆ ಎದುರಾಗಿದ್ದು   300 ಎಕ್ರೆಗೂ ಅಧಿಕ ಪ್ರದೇಶದಲ್ಲಿ ನಾಟಿ ಮಾಡಿದ ನೇಜಿ ಕೊಳೆಯುವ ಸ್ಥಿತಿಯಲ್ಲಿದೆ.

Advertisement

ಹಲವು ವರ್ಷಗಳ ಹಿಂದೆ  ಗಿಳಿಯಾರು ರಸ್ತೆಯಲ್ಲಿ  ಹಳೆಯ ತಂತ್ರಜ್ಞಾನದ ಮೋರಿ ಅಳವಡಿಸಿ ಸೇತುವೆ ನಿರ್ಮಿಸಿದ್ದು  ಪ್ರತಿವರ್ಷ ಮಳೆಗಾಲದಲ್ಲಿ  ಅಂತರಗಂಗೆ ಮೋರಿಗೆ ಸಿಲುಕಿ ಕೃತಕ ನೆರೆಯಾಗಿ ಬೆಳೆ ನಾಶವಾಗುತ್ತದೆ. ಈ ಬಾರಿ ನೆರೆ ಪ್ರಮಾಣ ಕೂಡ ಜಾಸ್ತಿ ಇದ್ದು  ಎರಡು ಸಮಸ್ಯೆಗಳು ಒಟ್ಟಾಗಿದೆ.

300 ಎಕರೆಗೂ ಅಧಿಕ ಬೆಳೆ ನಾಶ
ಗಿಳಿಯಾರಿನಿಂದ ತೆಕ್ಕಟ್ಟೆ ಮಲ್ಯಾಡಿಯ ತನಕ ಹೊಳೆಯ ಎರಡೂ ಕಡೆಗಳಲ್ಲಿ ಸುಮಾರು 300 ಎಕ್ರೆ ಗದ್ದೆಗೆ ನೀರು ಆವರಿಸಿದ್ದು  ಬೆಳೆ ನಾಶವಾಗುವ ಆತಂಕವಿದೆ ಹಾಗೂ 50ಎಕ್ರೆಗೂ ಹೆಚ್ಚು ಈಗಾಗಲೇ ಹಾನಿಯಾಗಿದೆ.

ರೈತರಿಂದ ಹಿಡಿಶಾಪ
ಮಳೆಗಾಲಕ್ಕೆ ಮೊದಲು ಹೊಳೆಯ ಹೂಳೆತ್ತಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು. ಹಳೆಯ ತಂತ್ರಜ್ಞಾನದ ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಿಸಬೇಕು. ಅಂತರಗಂಗೆ ನಿಯಂತ್ರಣಕ್ಕೆ  ಕೃಷಿ ಇಲಾಖೆಯವರು ಕ್ರಮಕೈಗೊಳ್ಳಬೇಕು ಎಂದು ಇಲ್ಲಿನ ರೈತರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಈ ಕುರಿತು ಯಾರೂ ಕ್ರಮಕೈಗೊಳ್ಳದ ಕುರಿತು ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಸ್ಥಳಕ್ಕೆ  ಜಿ.ಪಂ. ಗ್ರಾ.ಪಂ. ಪ್ರತಿನಿಧಿಗಳ ಭೇಟಿ
ಸ್ಥಳಕ್ಕೆ ಜಿಲ್ಲಾ ಪಂಚಾಯತ್‌ ಸದಸ್ಯ ರಾಘವೇಂದ್ರ ಕಾಂಚನ್‌ ಹಾಗೂ ಕೋಟ ಗ್ರಾಮ ಪಂಚಾಯತ್‌ ಸದಸ್ಯೆ ವನಿತಾ ಶ್ರೀಧರ್‌ ಆಚಾರ್ಯ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಕೃಷಿ ಮತ್ತು ಜಿ.ಪಂ. ಅಧಿಕಾರಿಗಳ ಜತೆ ಚರ್ಚಿಸಿದ ಜಿಲ್ಲಾ ಪಂಚಾಯತ್‌ ಸದಸ್ಯರು ಅಂತರಗಂಗೆ ತೆರವಿಗೆ ಅನುದಾನ ನೀಡು ವುದಾಗಿ ತಿಳಿಸಿದರು ಹಾಗೂ ಗ್ರಾಮ ಪಂಚಾ ಯತ್‌ ಕೂಡ ಅನುದಾನದ ಭರವಸೆ ನೀಡಿದೆ.
 
ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಭರತ್‌ ಕುಮಾರ್‌ ಶೆಟ್ಟಿ, ರಾಘವೇಂದ್ರ ಶೆಟ್ಟಿ ಹಂಡಿಕೆರೆ ಮುಂತಾದವರು ರೈತರ ಸಮಸ್ಯೆ ಕುರಿತು ವಿವರಿಸಿದರು.

Advertisement

ರೈತರಿಂದಲೇ ಕಾರ್ಯಾಚರಣೆ 
ಹತ್ತಾರು ವರ್ಷಗಳಿಂದ ಇಲ್ಲಿನ ಸ್ಥಳೀಯ ಪ್ರಗತಿಪರ ಕೃಷಿಕ ಭೋಜ ಪೂಜಾರಿಯವರ ನೇತೃತ್ವದಲ್ಲಿ ಗಿಳಿಯಾರಿನ ಕೃಷಿಕರು ಹಾಗೂ ಯುವಕರನ್ನು  ಸಂಘಟಿಸಿಕೊಂಡು ಸೇತುವೆಯಲ್ಲಿ ಸಿಲುಕಿದ ಅಂತರಗಂಗೆಯನ್ನು  ಬೇರ್ಪಡಿಸುವ ಕಾರ್ಯ ನಡೆಯುತಿತ್ತು. ಆದರೆ ಪ್ರತಿ ವರ್ಷ ಇದೇ ಸಮಸ್ಯೆ ಮರುಕಳಿಸುತ್ತಿರುವುದರಿಂದ ಹಾಗೂ ಶಾಶ್ವತ ಪರಿಹಾರವಿಲ್ಲದಿರುವುದರಿಂದ ಈ ಬಾರಿ ಬೇಸರಗೊಂಡು ಸ್ವತ್ಛತೆ ನಡೆಸಿರಲಿಲ್ಲ.

ಇದೀಗ ಸಮಸ್ಯೆ ಉಲ್ಬಣಿಸಿರುವುದರಿಂದ ಸೋಮವಾರ ಸ್ಥಳೀಯರು ಮತ್ತೆ ಕಾರ್ಯಾಚರಣೆ ಗಿಳಿದು ಅಂತರಗಂಗೆ ಬೇರ್ಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಉದಯವಾಣಿ ವರದಿ ಮಾಡಿತ್ತು
ಅತರಗಂಗೆ ಸಮಸ್ಯೆಯ ಕುರಿತು ಮಳೆಗಾಲಕ್ಕೆ ಮೊದಲು ಉದಯವಾಣಿ ವಿಸ್ತೃತ ವರದಿ ಪ್ರಕಟಿಸಿ ಬೆಳೆ ನಾಶದ ಅಪಾಯದ ಕುರಿತು ಎಚ್ಚರಿಸಿತ್ತು. ಆದರೆ ಈ ಕುರಿತು ಸಮರ್ಪಕ ಕ್ರಮಕೈಗೊಳ್ಳದ ಕಾರಣ ಇದೀಗ ಸಮಸ್ಯೆ ಉಲ್ಬಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next