Advertisement
ರಾಜ್ಯದಲ್ಲಿ ಜನವರಿ 1ರಿಂದ ಜು. 1ರ ವರೆಗೆ ಒಟ್ಟು 4,624 ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 1,563 ಡೆಂಗ್ಯೂ ಪ್ರಕರಣಗಳು ಸೇರಿ ಒಟ್ಟು 6 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಹಾಸನದಲ್ಲಿ ಇಬ್ಬರು, ಬಿಬಿಎಂಪಿ ವ್ಯಾಪ್ತಿ, ಶಿವಮೊಗ್ಗ, ಧಾರವಾಡ ಹಾಗೂ ಹಾವೇರಿ ಜಿಲ್ಲೆಯಲ್ಲಿ ತಲಾ ಒಬ್ಬರಂತೆ ಒಟ್ಟು ಆರು ಮಂದಿ ಮೃತರಾಗಿದ್ದಾರೆ. ಮೃತಪಟ್ಟ ಕೆಲ ವ್ಯಕ್ತಿಗಳಲ್ಲಿ ಡೆಂಗ್ಯೂ ದೃಢವಾಗಿದೆ. ಆದರೆ ಅವರು ಇತರ ತೀವ್ರ ತರಹದ ಕಾಯಿಲೆಯಿಂದ ಬಳಲುತ್ತಿದ್ದು ಅವರ ಸಾವಿಗೆ ಡೆಂಗ್ಯೂ ಕಾರಣವಲ್ಲ ಎನ್ನುವ ವರದಿಯ ಜಿಲ್ಲಾ ಮಟ್ಟದಿಂದ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದೆ.
ಸಂಖ್ಯೆಯಲ್ಲಿ ಡೆಂಗ್ಯೂ ಪ್ರಕರಣ ವರದಿಯಾದ ಜಿಲ್ಲಾವಾರು ಪಟ್ಟಿಯಲ್ಲಿ ಮೊದಲ ಸ್ಥಾನ ಚಿಕ್ಕಮಗಳೂರು ಪಡೆದುಕೊಂಡಿದೆ. 491 ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ. ಉಳಿದಂತೆ ಮೈಸೂರು 479, ಹಾವೇರಿ 451, ಶಿವಮೊಗ್ಗ 283 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಎರಡಂಕಿ ಪ್ರಕರಣಗಳು ವರದಿಯಾಗಿವೆ. ಹಾವೇರಿಯಲ್ಲಿ ಇದುವರೆಗೆ 2 ಶಂಕಿತ ಮರಣ ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ. ಡೆತ್ ಆಡಿಟ್‌ನಲ್ಲಿ 10 ವರ್ಷದ ಬಾಲಕ ಡೆಂಗ್ಯೂನಿಂದ ಮೃತಪಟ್ಟಿರುವುದು ದೃಢವಾಗಿದೆ. ಪ್ರಸ್ತುತ ಹಾವೇರಿಯಲ್ಲಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಡೆಂಗ್ಯೂ ಪ್ರಕರಣಗಳ ಸೀರಂ ಮಾದರಿ ಪರೀಕ್ಷೆಯಲ್ಲಿ ಕ್ರಮವಾಗಿ ಶೇ. 79 ಹಾಗೂ 80ರಷ್ಟು ಏರಿಕೆಯಾಗಿದೆ.
Related Articles
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವಾರ ಮೃತಪಟ್ಟ 27 ವರ್ಷದ ಯುವಕನಲ್ಲಿ ಡೆಂಗ್ಯೂ ದೃಢವಾಗಿದ್ದು ಇದನ್ನು ಡೆತ್ ಆಡಿಟ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಯುವಕನಲ್ಲಿ ತೀವ್ರ ತರಹದ ಮಧುಮೇಹ, ಲಿವರ್ ಸಂಬಂಧಿಸಿದ ಸೋಂಕಿನ ಜತೆಗೆ ಡೆಂಗ್ಯೂ ಲಕ್ಷಣಗಳಿದ್ದವು. ಇನ್ನೂ ಡೆಂಗ್ಯೂ ಪಾಸಿಟಿವ್ ಬಂದಿದ್ದ 80 ವರ್ಷದ ವೃದ್ಧೆ ಸಾವಿಗೆ ಡೆಂಗ್ಯೂ ನೇರವಾದ ಕಾರಣವಲ್ಲ, ಅವರು ಇತರ ಕಾಯಿಲೆಯಿಂದ ಬಳಲುತ್ತಿದ್ದು, ಡೆಂಗ್ಯೂ ಲಕ್ಷಣಗಳಿರಲಿಲ್ಲ ಎನ್ನುವುದಾಗಿ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
Advertisement
ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ಡೆಂಗ್ಯೂ ಹೆಚ್ಚಿರುವ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಕಾದಿರಿಸಲಾಗಿದೆ. ರಾಜ್ಯಾದ್ಯಂತ ಆರೋಗ್ಯ ಇಲಾಖೆಯು ಆರೋಗ್ಯ ಸಿಬಂದಿ ಮತ್ತು ಆಶಾ ಕಾರ್ಯಕರ್ತೆಯರು ಒಳಾಂಗಣ ಮತ್ತು ಹೊರಾಂಗಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ನಿಯಮಿತ ತಪಾಸಣೆ ನಡೆಸಿ, ಲಾರ್ವಾ ನಾಶಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.