Advertisement

ದಶಕಗಳೇ ಕಳೆದರೂ ಇನ್ನೂ ಸಿಕ್ಕಿಲ್ಲ ಹಕ್ಕುಪತ್ರ

09:44 PM Oct 18, 2020 | mahesh |

ಕಾಪು: ಕಾಪು ತಾಲೂಕಿನ ಬೆಳಪು ಗ್ರಾಮ ಅಭಿವೃದ್ಧಿ ಹಾದಿಯಲ್ಲಿ ಗುರುತಿಸಿದೆ. ಆದರೆ ಇಲ್ಲಿ ವಾಸವಿರುವ ನೂರಾರು ಕುಟುಂಬಗಳು ಇನ್ನೂ ಹಕ್ಕುಪತ್ರ ಸಿಗದೆ ವಿವಿಧ ಸೌಲಭ್ಯಗಳಿಂದ ವಂಚಿತವಾಗುತ್ತಿವೆ. ಸರಕಾರವೇ ನೀಡಿರುವ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸಿ, 30-40 ವರ್ಷಗಳಿಂದ ವಾಸಿಸುತ್ತಿದ್ದರೂ ಹಕ್ಕುಪತ್ರ ಪಡೆಯುವ ಕನಸು ಮಾತ್ರ ಈಡೇರಿಲ್ಲ.

Advertisement

ಅತಿ ಸಣ್ಣದಾದ ಈ ಗ್ರಾ.ಪಂ.ನಲ್ಲಿ ಅತಿ ಹೆಚ್ಚು ಸರಕಾರಿ ಭೂಮಿ ಇದೆ. ಇಲ್ಲಿ 1 ಸಾವಿರಕ್ಕೂ ಅಧಿಕ ನಿವೇಶನಗಳನ್ನು ವಿತರಿಸಲಾಗಿದೆ. ಕೆಲವು ಕಡೆ ಮನೆಗಳು ಇನ್ನೂ ನಿರ್ಮಾಣ ಹಂತದಲ್ಲಿವೆ.

220ಕ್ಕೂ ಹೆಚ್ಚಿನ ಕುಟುಂಬಗಳು ಹಕ್ಕುಪತ್ರ ವಂಚಿತ
ಇಲ್ಲಿನ ಗ್ರಾ.ಪಂ. ವ್ಯಾಪ್ತಿಯಲ್ಲಿ 221ಕ್ಕೂ ಹೆಚ್ಚಿನ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಬೆಳಪು ಪ್ರಸಾದ್‌ ನಗರದಲ್ಲಿ 57, ದೇವೇಗೌಡ ಬಡಾವಣೆಯಲ್ಲಿ 40, ವಾಜಪೇಯಿ ಬಡಾವಣೆಯಲ್ಲಿ 27, ಕೆಐಎಡಿಬಿ ಕಾಲನಿಯಲ್ಲಿ 31, ವಿನಯ ನಗರದಲ್ಲಿ 19, ಜನತಾ ಕಾಲನಿಯಲ್ಲಿ 17, ನಜೀರ್‌ಸಾಬ್‌ ಕಾಲನಿಯಲ್ಲಿ 21, ಜವನರಕಟ್ಟೆ ಕಾಲನಿಯಲ್ಲಿ 9 ಕುಟುಂಬಗಳು ಹಕ್ಕುಪತ್ರಕ್ಕಾಗಿ ಅಲೆದಾಟ ನಡೆಸಿವೆ. 3-4 ದಶಕಗಳಿಂದೀಚೆಗೆ ವಾಸಯೋಗ್ಯ ಮನೆಗಳನ್ನು ಹೊಂದಿದ್ದರೂ ಹಕ್ಕುಪತ್ರ ಸಿಗದೇ ಇದ್ದುದರಿಂದ ಕುಟುಂಬಗಳು ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖ್ಯಮಂತ್ರಿವರೆಗೆ ಮನವಿ ಸಲ್ಲಿಸಿವೆ. ಆದರೆ ಪ್ರಯೋಜನವಾಗಿಲ್ಲ.

ಬಡ ಜನರಿಗೊಂದು, ಉದ್ಯಮಿಗಳಿಗೊಂದು
ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಭೂಮಿ ಯನ್ನು ವಿವಿಧ ಉದ್ದಿಮೆಗಳು, ಯೋಜನೆಗಳಿಗೆ ನೀಡಲಾಗಿದೆ. ಆಗೆಲ್ಲ ಹಕ್ಕುಪತ್ರವೂ ಬದಲಾಗಿದೆ. ಆದರೆ ತಲೆಮಾರುಗಳಿಂದ ಇರುವ ಜನರಿಗೆ ಮಾತ್ರ ಹೀಗಾಗಿಲ್ಲ. ಕೈಗಾರಿಕೆ ಪಾರ್ಕ್‌ ನಿರ್ಮಾಣಕ್ಕೆ 68 ಎಕರೆ, ಮಂಗಳೂರು ವಿವಿ ಸಂಶೋಧನ ಕೇಂದ್ರಕ್ಕೆ 20 ಎಕರೆ, ಸರಕಾರಿ ಪಾಲಿಟೆಕ್ನಿಕ್‌ ವಿದ್ಯಾಲಯಕ್ಕೆ 5 ಎಕರೆ, ತ್ಯಾಜ್ಯ ವಿಲೇವಾರಿ ಘಟಕಕ್ಕೆ 3 ಎಕರೆ, ಮೌಲಾನಾ ಆಜಾದ್‌ ವಸತಿ ಶಾಲೆಗೆ 1 ಎಕರೆ ಜಮೀನನ್ನು ನೀಡಲಾಗಿದೆ.ಆಗ ಬೆಳಪು ಕಾಡು ಎನ್ನುವುದು ಅಡ್ಡಿಯಾಗಿಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಜಂಟಿ ಸರ್ವೇಯ ವರದಿಗೂ ಬೆಲೆಯಿಲ್ಲ
ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿದ್ದರು. ಈ ವೇಳೆ ಇದು ಜನವಸತಿ ಪ್ರದೇಶ, ಕೃಷಿ ಇದೆ, ಕಾಡು ಪ್ರದೇಶ ಎಂದು ಉಲ್ಲೇಖೀಸಲು ಯಾವುದೇ ಆಧಾರಗಳಿಲ್ಲ ಎಂಬ ವರದಿಯನ್ನು ಜಿಲ್ಲಾಧಿಕಾರಿ ಮತ್ತು ಸರಕಾರಕ್ಕೆ ನೀಡಲಾಗಿತ್ತು. ಆದರೂ ಹಕ್ಕುಪತ್ರ ನೀಡಿಕೆ ಪ್ರಕ್ರಿಯೆ ನಡೆದಿಲ್ಲ.

Advertisement

ಕೂಡಲೇ ಸ್ಪಂದಿಸಲಿಣ
ಬೆಳಪು ಗ್ರಾಮದಲ್ಲಿ ಕಳೆದ 25 ವರ್ಷಗಳಲ್ಲಿ 800ಕ್ಕೂ ಹೆಚ್ಚಿನ ನಿವೇಶನ ರಹಿತ ಬಡ ಜನರಿಗೆ ನಿವೇಶನ ಒದಗಿಸಲಾಗಿದೆ. ಇಲ್ಲಿನ ವಿವಿಧ ಕಾಲನಿಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಅಲೆದಾಡಿದ್ದರೂ ಫ‌ಲಿತಾಂಶ ಶೂನ್ಯವಾಗಿದೆ. ಗ್ರಾಮದ ಜನರಿಗೆ ಹಕ್ಕುಪತ್ರ ಒದಗಿಸುವವರೆಗೆ ವಿರಮಿಸುವುದಿಲ್ಲ. ಅಧಿಕಾರಿಗಳು ಕೂಡಲೇ ಸ್ಪಂದಿಸಲಿ.
-ಡಾ| ದೇವಿಪ್ರಸಾದ್‌ ಶೆಟ್ಟಿ ಮಾಜಿ ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್‌

ಕಾಡು ಹೇಗಾಗುತ್ತದೆ?
40 ವರ್ಷಗಳಿಂದ ವಾಸವಿದ್ದೇವೆ. ಹಕ್ಕುಪತ್ರಕ್ಕಾಗಿ ಎಲ್ಲೆಡೆ ಅಲೆದಾಡಿದ್ದೇವೆ. ಇಲ್ಲಿ ನಡೆದ ಸರ್ವೇಯಲ್ಲೂ ಕಾಡು ಅಲ್ಲ ಎಂಬ ವರದಿ ನೀಡಿದರೂ ಪ್ರಯೋಜನವಾಗಿಲ್ಲ. ವರ್ಷದೊಳಗೆ ನೀಡುವುದಾಗಿ ಹೇಳಿದ್ದರೂ ಪ್ರಯೋಜನವಾಗಿಲ್ಲ. ಇನ್ನು ಜಿಲ್ಲಾಧಿಕಾರಿಗಳ ಬಳಿ ತೆರಳಿ ಮನವಿ ಮಾಡಲು ನಿರ್ಧರಿಸಿದ್ದೇವೆ.
-ರಾಘು ಪೂಜಾರಿ ಬೆಳಪು,  ಕೈರುನ್ನೀಸಾ ಬೆಳಪು

ಹಕ್ಕುಪತ್ರ ವಿತರಣೆಗೆ ಬೆಳಪು ಕಾಡು ಅಡ್ಡಿ
ಈ ಗ್ರಾಮ ಕೆಲವು ವರ್ಷಗಳ ಹಿಂದಿನವರೆಗೆ ಕಾಡು ಪ್ರದೇಶವಾಗಿ ಪ್ರಸಿದ್ಧವಾಗಿತ್ತು. ವರ್ಷಗಳು ಕಳೆದಂತೆ ಇಲ್ಲಿನ ಜನವಸತಿ ಹೆಚ್ಚಿದೆ. ಅಭಿವೃದ್ಧಿಯನ್ನೂ ಕಂಡಿದೆ. ಎರಡು ಮೂರು ತಲೆಮಾರುಗಳು ಇಲ್ಲೇ ವಾಸಿಸುತ್ತಿವೆ. ಆದರೆ ದಾಖಲೆಗಳಲ್ಲಿ ಇನ್ನೂ ಕಾಡು ಎಂದೇ ನಮೂದಾಗಿರುವುದರಿಂದ ಹಕ್ಕುಪತ್ರ ಲಭ್ಯವಾಗಲು ಅಡ್ಡಿಯಾಗಿದೆ.

ಬೆಳಪು ಗ್ರಾಮದ ಜವನರಕಟ್ಟೆ, ವಿನಯ ನಗರ, ಜನತಾ ಕಾಲನಿಗಳಲ್ಲಿ 75 ಮನೆಗಳಿಗೆ 30 ವರ್ಷಗಳ ಹಿಂದೆ ತಾತ್ಕಾಲಿಕ ಹಕ್ಕುಪತ್ರ ನೀಡಲಾಗಿತ್ತು. ಆದರೆ ಅಲ್ಲಿರುವ ನಿವಾಸಿಗಳು ಮಾಹಿತಿ ಕೊರತೆಯಿಂದಾಗಿ ಪಹಣಿ ಪತ್ರಗಳನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ವಿಫ‌ಲವಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಪಹಣಿಗಳಲ್ಲಿ ಪಂಚಾಯತ್‌ ಕಾಡು ಎಂದು ನಮೂದಾಗಿರುವುದು ಹಕ್ಕುಪತ್ರ ನೀಡಲು ಅಡ್ಡಿಯಾಗಿದೆ. ಈ ಬಗ್ಗೆ ವಸ್ತುಸ್ಥಿತಿ ಬಗ್ಗೆ ಹಿಂದೆ ನಡೆದ ಸರ್ವೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. 10 ವರ್ಷಗಳಿಂದೀಚೆಗೆ ನಿವೇಶನ ನೀಡಿದವರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು.
-ಮಹಮ್ಮದ್‌ ಇಸಾಕ್‌,  ತಹಶೀಲ್ದಾರ್‌ ಕಾಪು

ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next