Advertisement

ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

10:40 AM Feb 14, 2019 | |

ಚಿಂತಾಮಣಿ: ಮಧ್ಯಾಹ್ನದ ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಆಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಲಕ್ಷ್ಮೀದೇವಿಕೋಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದಿದ್ದು, ಅಸ್ವಸ್ಥರಾಗಿರುವ ಮಕ್ಕಳಿಗೆ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನ ಅಂಬಾಜಿದುರ್ಗಾ ಹೋಬಳಿಯ ಕತ್ತಿರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀದೇವಿನಕೋಟೆಯ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಎಂದಿನಂತೆ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದು, ಬಿಸಿಯೂಟ ಸೇವಿಸಿದ ಅರ್ಧಗಂಟೆಯ ನಂತರ 20ಕ್ಕೂ ಹೆಚ್ಚು ಮಕ್ಕಳಿಗೆ ಹೊಟ್ಟೆ ನೋವು, ವಾಂತಿ ಭೇದಿಯಾಗಿ ಅಸ್ವಸ್ಥರಾಗಿದ್ದಾರೆ.

Advertisement

 ವಿದ್ಯಾರ್ಥಿಗಳು ಅಸ್ವಸ್ಥರಾದ ತಿಳಿಯುತ್ತಿ ದ್ದಂತೆ ಎಚ್ಚೆತ್ತುಕೊಂಡ ಶಾಲೆಯ ಶಿಕ್ಷಕರು ಎಲ್ಲಾ ಮಕ್ಕಳನ್ನು ಆ್ಯಂಬುಲೆನ್ಸ್‌ ಮೂಲಕ ಚಿಂತಾ ಮಣಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ತುರ್ತುಗನುಗುಣವಾಗಿ ಆಸ್ಪತ್ರೆ ಯಲ್ಲಿನ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಿದ್ದು, ಮಕ್ಕಳು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.

ಅಸ್ತವ್ಯಸ್ಥಗೊಂಡ ವಿದ್ಯಾರ್ಥಿಗಳನ್ನು 8, 9 ಮತ್ತು 10 ನೇ ತರಗತಿಯ ಅಶೋಕ್‌, ಆಕಾಶ್‌, ನಂದೀಶ್‌, ನವೀನ್‌, ಸುದೀಪ, ಶೋಭಾ, ಗಗನ್‌, ನಿತೀನ್‌, ತೇಜಸ್ವಿನಿ, ಉಮೇಶ್‌, ಶಿವದರ್ಶಿನಿ, ಪುನೀತ್‌ ಕುಮಾರ್‌, ಉಮೇಶ್‌, ಸಾಗರ್‌, ಆಕಾಶ್‌, ಶಿವಮಣಿ, ಸೋಮಶೇಖರ್‌, ನರಸಿಂಹ ಮೂರ್ತಿ, ನವೀನ್‌ ಮತ್ತು ಆದರ್ಶ ಎಂದು ಗುರುಸಲಾಗಿದೆ. 

ಗುತ್ತಿಗೆದಾರರಿಂದ ಬಿಸಿಯೂಟ ಸರಬ ರಾಜು: ತಾಲೂಕಿನ ಲಕ್ಷ್ಮೀದೇವಿ ಕೋಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಫ‌ುಡ್‌ ಶ್ರೀರಾಮರೆಡ್ಡಿ ಎಂಬುವರ ಮಾಲೀಕತ್ವದ ನಗರದ ಅಂಬೇಡ್ಕರ್‌ ರೂರಲ್‌ ಎಜುಕೇಷನ್‌ ಸೊಸೈಟಿ ಎನ್‌ಜಿಒ ಸಂಸ್ಥೆಯೊಂದು ಶಾಲೆಗೆ ಬಿಸಿಯೂಟ ಸರಬರಾಜು ಮಾಡುತ್ತಿದ್ದು, ಗುತ್ತಿಗೆದಾರನ ನಿರ್ಲಕ್ಷ್ಯವೇ ಘಟನೆಗೆ ಕಾರಣ ವೆಂದು ಆರೋಪಿಸಲಾಗಿದೆ.

ಊಟದಲ್ಲಿ ಹಲ್ಲಿ ?: ಮಧ್ಯಾಹ್ನ ಗುತ್ತಿಗೆದಾರರು ಸರಬರಾಜು ಮಾಡಿದ್ದ ಅನ್ನ ಸಾಂಬರ್‌ನಲ್ಲಿ ಹಲ್ಲಿ ಇತ್ತು. ಕೆಲವರು ಅಷ್ಟೊತ್ತಿಗೆ ಊಟ ಮಾಡಿದ್ದರು. ಇನ್ನೂ ಕೆಲವರು ಬಿಸಿಯೂಟ ಸೇವಿಸಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ಹೇಳಿದರೆ, ಇನ್ನು ಕೆಲವರು ಅನ್ನ ಸರಿಯಾಗಿ ಬೆಂದಿರಲಿಲ್ಲ ಎಂದು ತಿಳಿಸಿದ್ದಾರೆ. ಮುಖ್ಯ ಶಿಕ್ಷಕರ ನಿರ್ಲಕ್ಷ್ಯ: ಸರ್ಕಾರ ಕಡ್ಡಾಯ ಶಿಕ್ಷಣ ಪಡೆಯಲೆಂದು ಬಿಸಿಯೂಟ ಕಾರ್ಯಕ್ರಮ ಜಾರಿಗೆ ತಂದಿದೆ. ಸರ್ಕಾರಿ ಶಾಲೆಗಳಲ್ಲೇ ಅಡುಗೆ ತಯಾರಕ ರನ್ನು ನೇಮಕ ಮಾಡಿಕೊಂಡು ಶಾಲೆಯಲ್ಲೇ ಬಿಸಿಯೂಟ ತಯಾರು ಮಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು ಎಂಬುದು ಎಂಬುದು ಸರ್ಕಾ ರದ ಉದ್ದೇಶ. ಆದರೆ ಸ್ಥಳೀಯ ಕೆಲ ಶಾಲೆಗಳ ಮುಖ್ಯೋ ಪಾಧ್ಯಾಯರು ಗುತ್ತಿಗೆದಾರ ರೊಂದಿಗೆ ಶಾಮೀಲಾಗಿ ಅಡುಗೆ ತಯಾರಕ ರನ್ನು ನೇಮಕ ಮಾಡಿಕೊಳ್ಳದ ಪರಿಣಾಮ ಅಂತಹ ಶಾಲೆಗಳಿಗೆ ಎನ್‌ಜಿಒ ಸಂಸ್ಥೆ ಯೊಂದು ಬಿಸಿಯೂಟ ಸರಬರಾಜು ಮಾಡುತ್ತಿರು
ವುದೇ ಈ ಘಟನೆಗೆ ಕಾರಣ ವಾಗಿದೆ ಎಂದು ಸಾರ್ವಜನಿಕರ ಆರೋಪ ವಾಗಿದೆ.

Advertisement

 5.78 ರೂ. ಎನ್‌ಜಿಒಗಳ ಪಾಲಿಗೆ: ಶಾಲೆಗಳಿಗೆ ಬಿಸಿಯೂಟ ಸರಬರಾಜು ಮಾಡುವ ಎನ್‌ಜಿಒ ಸಂಸ್ಥೆಗಳಿಗೆ ಅಕ್ಷರ ದಾಸೋಹ ಇಲಾಖೆ ವತಿಯಿಂದ ಪ್ರತಿ ಮಗುವಿಗೆ 5.78 ರೂ.ಗಳಂತೆ ಪ್ರತಿ ದಿನಕ್ಕೆ ನೀಡುತ್ತಿದೆ. ಜತೆಗೆ ಆಹಾರಕ್ಕೆ ಬೇಕಾದ ಅಕ್ಕಿ ಮತ್ತು ಗೋಧಿಯನ್ನು ಸಹ ನೀಡಲಾಗುತ್ತಿದೆ. ಸರ್ಕಾರ ನೀಡುವ ಅನುದಾನವನ್ನು ಗುತ್ತಿಗೆದಾರರು ಲೂಟಿ ಮಾಡಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಸರಬರಾಜು ಮಾಡಿರುವುದೆ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. 

ಪಿಡಿಒ ನಿರ್ಲಕ್ಷ್ಯ: ತಾಲೂಕಿನ ಲಕ್ಷ್ಮೀದೇವಿ ಕೋಟೆ ಸರ್ಕಾರಿ ಪ್ರೌಢ ಶಾಲೆಗೆ ಅಡುಗೆ ತಯಾರಕರನ್ನು ನೇಮಕ ಮಾಡಿಕೊಡುವಂತೆ ಶಾಲೆ ಮುಖ್ಯ ಶಿಕ್ಷಕರು ಕತ್ತರಿಗುಪ್ಪೆ ಗ್ರಾಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಶಾಲೆಯ ಶಿಕ್ಷಕರು ದೂರಿದ್ದಾರೆ.

ಪೋಷಕರ ಆಕ್ರೋಶ: ಶಾಲೆಯಲ್ಲಿ ಬಿಸಿ ಯೂಟ ಸೇವಿಸಿ 20 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ವಿದ್ಯಾರ್ಥಿಗಳ ಪೋಷಕರು ಶಾಲೆಯ ಶಿಕ್ಷಕರು ಹಾಗೂ ಬಿಸಿಯೂಟ ಸರಬರಾಜು ಮಾಡಿದ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಸರಕಾರಿ ಶಾಲೆಯ 20ಕ್ಕೂ ಹೆಚ್ಚು ಮಕ್ಕಳು ಆಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಕಾಡ್ಗಿಚಿನಂತೆ ಹರಿಡದ ಪರಿಣಾಮ ಮಕ್ಕಳು ಪೋಷಕರು ಹೆಚ್ಚಿನ ಸಂಖೆಯಲ್ಲಿ ಆಸ್ಪತ್ರೆಗೆ ಆಗಮಿಸಿದ ಕಾರಣ ಆಸ್ಪತ್ರೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿ ಯಾಗಿತ್ತು. ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕ ನಾಗರಾಜ್‌ ಹಾಗೂ ಸಿಬ್ಬಂದಿ, ಅಕ್ಷರ ದಾಸೋಹ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ಕ್ಷೇಮ ವಿಚಾರಿಸಿದರು.

ಇನ್ನೂ ಆಸ್ಪತ್ರೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಮಂಜುನಾಥ್‌ ಉಪಾಧ್ಯಕ್ಷ ನಾರಾಯಣಸ್ವಾಮಿ, ಗ್ರಾಮಾಂತರ ಠಾಣೆ ಪೊಲಿಸರು ಮತಿತ್ತರರು ಭೇಟಿ ನೀಡಿ ಮಕ್ಕಳ ಯೋಗ ಕ್ಷೇಮ ವಿಚಾರಿಸಿದರು.

ಎನ್‌ಜಿಒಗೆ ಹಲವು ಬಾರಿ ನೋಟಿಸ್‌ ಶಾಲೆಗಳಿಗೆ ಬಿಸಿಯೂಟ ಸರಬರಾಜು ಮಾಡುತ್ತಿರುವ ಅಂಬೇಡ್ಕರ್‌ ರೂರಲ್‌ ಎಜುಕೇಷನ್‌ ಸೊಸೈಟಿ ವಿರುದ್ಧ ಈಗಾಗಲೇ ಅಕ್ಷರ ದಾಸೋಹ ಇಲಾಖೆ ಸೇರಿದಂತೆ ಶಿಕ್ಷಣ ಇಲಾಖೆ ಹಲವು ಬಾರಿ ನೋಟಿಸ್‌ ನೀಡಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿತ್ತು. ಆದರೂ ಗುತ್ತಿಗೆದಾರರು ಕಳಪೆ ಗುಣ ಮಟ್ಟದ ಆಹಾರ ಸರಬರಾಜು ಮಾಡುತ್ತಿರುವುದು ಕಂಡರೆ ಇಲಾಖೆ ಅಧಿಕಾರಿಗಳು ಮತ್ತ ಮುಖ್ಯೋಪಾಧ್ಯಾಯರು ಗುತ್ತಿಗೆದಾರೊಂದಿಗೆ ಶಾಮೀಲಾಗಿ ರುವ ಬಗ್ಗೆ ಸಂಶಯ ಮೂಡುತ್ತದೆ.

ಶಾಲೆಯಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ 20ಕ್ಕೂ ಹೆಚ್ಚು ಮಕ್ಕಳಿಗೆ ಹೊಟ್ಟೆ ನೋವು, ವಾಂತಿ, ಭೇದಿ ಶುರುವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿದ್ಯಾರ್ಥಿಗಳು ಸೇವಿಸಿರುವ ಆಹಾರವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಆಹಾರದಲ್ಲಿ ಬ್ಯಾಕ್ಟೀರಿಯ ಇರಬಹುದು ಎಂಬ ಅನುಮಾನವಿದೆ. 
● ಡಾ. ರಘುನಾಥ, ವೈದ್ಯಾಧಿಕಾರಿ, ಚಿಂತಾಮಣಿ ನಗರ ಸಾರ್ವಜನಿಕ ಆಸ್ಪತ್ರೆ 

 ಚಿಂತಾಮಣಿ ತಾಲೂಕಿನ ಲಕ್ಷ್ಮೀದೇವಿಕೋಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಘಟನೆ

„ ಫ‌ುಡ್‌ ಶ್ರೀರಾಮರೆಡ್ಡಿ ಮಾಲೀಕತ್ವದ ನಗರದ ಅಂಬೇಡ್ಕರ್‌ ರೂರಲ್‌ ಎಜುಕೇಷನ್‌ ಸೊಸೈಟಿ ಎನ್‌ಜಿಒ ಸಂಸ್ಥೆಯಿಂದ
ಶಾಲೆಗೆ ಬಿಸಿಯೂಟ ಸರಬರಾಜು

ಲಕ್ಷ್ಮೀದೇವಿಕೋಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಡುಗೆ ತಯಾರಕರನ್ನು ನೇಮಕ ಮಾಡುವಂತೆ ಕತ್ತರಿಗುಪ್ಪ ಗ್ರಾಪಂ ಅಧಿಕಾರಿ ಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
● ಶಾಮಸುಂದರ್‌, ಶಾಲೆಯ ಮುಖ್ಯ ಶಿಕ್ಷಕ

ಈ ಹಿಂದೆಯೂ ಹಲವು ಬಾರಿ ಶಾಲೆಯಲ್ಲಿ ನೀಡುವ ಬಿಸಿಯೂಟ ಬೆಂದಿಲ್ಲ ಎಂದು ಮಕ್ಕಳು ನಮಗೆ ತಿಳಿಸಿದ ವೇಳೆ ಶಾಲೆಯ ಶಿಕ್ಷಕರಿಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದೆವು. ಆದರೆ ಶಾಲೆಯ ಶಿಕ್ಷಕರು ಯಾವುದೇ ಕ್ರಮ ಕೈಗೊಳ್ಳದಿರುವುದೇ ಈ ಘಟನೆಗೆ ಕಾರಣ.
● ಆಂಜಪ್ಪ, ಕತ್ತರಿಗುಪ್ಪ ಗ್ರಾಮಸ್ಥ

ಕೆಲವು ತಿಂಗಳ ಹಿಂದೆಯೇ ಗುತ್ತಿಗೆದಾರರಿಗೆ ಬಿಸಿಯೂಟ ಸರಬರಾಜು ಮಾಡಂದತೆ ನೋಟಿಸ್‌ ನೀಡಿ ಸರಬರಾಜು ನಿಲ್ಲಿಸಿ ಬಿಸಿಯೂಟಕ್ಕೆ ಬೇಕಾದ ಎಲ್ಲಾ ರೀತಿಯ ಸಾಮಗ್ರಿಗಳನ್ನು ನೀಡಿ ಶಾಲೆಯಲ್ಲೇ ಅಡುಗೆ ಮಾಡುವಂತೆ ಶಾಲೆಯ ಶಿಕ್ಷಕರಿಗೆ ತಿಳಿಸಲಾಗಿತ್ತು. ಆದರೆ ಗುತ್ತಿಗೆದಾರರು ಜಿಲ್ಲಾ ಪಂಚಾಯಿತಿಯಿಂದ ನಮ್ಮ ಸೂಚನೆಗೆ ತಡೆಯಾಜ್ಞೆ ತಂದು ಮತ್ತೆ ಸರಬರಾಜು ಮಾಡುತ್ತಿದ್ದಾರೆ.
● ರಾಘವೇಂದ್ರ, ಅಕ್ಷರ ದಾಸೋಹ ಪ್ರಭಾರ ಅಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next