ಎಲ್ಲರ ಆರೋಗ್ಯ ವರ್ಧನೆಗೆ ಕೇಂದ್ರ ಸರಕಾರ 2022-23ರ ಅಂತ್ಯಕ್ಕೆ ಅಪೌಷ್ಟಿಕತೆ ಮುಕ್ತ ಭಾರತವೆಂದು ಘೋಷಿಸಲು ಪೂರಕವಾಗಿ ರಾಷ್ಟ್ರೀಯ ಪೋಷಣ್ ಅಭಿಯಾನ ಜಾರಿಗೊಳಿಸಿದೆ. ಇದರಡಿಯಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಕುಟುಂಬದ ಪೌಷ್ಟಿಕ ಹೊರೆಯನ್ನು ಪೂರ್ತಿಗೊಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ಸಂಜೀವಿನಿ ಸ್ವ-ಸಹಾಯ ಮಹಿಳಾ ಗುಂಪುಗಳ ಮೂಲಕ ಜಿ.ಪಂ., ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಮನೆಗೊಂದು ಪೌಷ್ಟಿಕ ತೋಟದ ಅಡಿಯಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Advertisement
ಜಿಲ್ಲೆಯ ಗುರಿಜಿಲ್ಲೆಯ 155 ಗ್ರಾ.ಪಂ.ಗಳಲ್ಲಿ ತಲಾ 101 ಪೌಷ್ಟಿಕ ತೋಟದಂತೆ ಒಟ್ಟು 15,500ಕ್ಕೂ ಮನೆಯಂಗಳದಲ್ಲಿ ಪೌಷ್ಟಿಕ ತೋಟ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದೆ. ಪೌಷ್ಟಿಕ ತೋಟ ನಿರ್ಮಾಣಕ್ಕೆ ನರೇಗಾದಡಿಯಲ್ಲಿ ವೈಯಕ್ತಿಕ ಕಾಮಗಾರಿ ಹೆಸರಿನಡಿ ಕೂಲಿ ಹಾಗೂ ಸಾಮಗ್ರಿ ವೆಚ್ಚ ಸೇರಿ ಒಟ್ಟು 4,503 ರೂ. ಸಿಗಲಿದೆ. ಆರಂಭದಲ್ಲಿ ಪೌಷ್ಟಿಕ ತೋಟ ನಿರ್ಮಾಣ ಮಾಡುವವರೇ ತಮ್ಮ ಖರ್ಚಿನಲ್ಲಿ ಇದನ್ನು ಮಾಡಿಕೊಳ್ಳಬೇಕು. ಅನಂತರದಲ್ಲಿ ನರೇಗಾ ಯೋಜನೆಯಡಿ ಅವರ ಖಾತೆಗೆ ಹಣ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯ ಭೌಗೋಳಿಕ ಪರಿಸರಕ್ಕೆ ಪೂರಕವಾಗುವಂತೆ ಯಾವೆಲ್ಲ ಗಿಡಗಳನ್ನು ನಡೆಬಹುದು ಎಂಬುದನ್ನು ತೋಟಗಾರಿಕೆ ಇಲಾಖೆ ಹಾಗೂ ಜಿ.ಪಂ. ಒಟ್ಟಾಗಿ ತಜ್ಞರ ಮೂಲಕ ಚರ್ಚಿಸಿ ತೀರ್ಮಾನಿಸಲಾಗಿದೆ. ಪೌಷ್ಟಿಕ ತೋಟದಲ್ಲಿ ತಲಾ ಎರಡೆರೆಡು ತೆಂಗು, ಸೀಬೆ, ನೆಲ್ಲಿ, ಕರಿಬೇವು, ನಿಂಬೆ, ನುಗ್ಗೆ ಹಾಗೂ ಪಪಾಯ ಗಿಡ ಇರಲಿದೆ. ಕನಿಷ್ಠ ತಲಾ ಒಂದರಂತೆ ಎಂಟು ಗಿಡಗಳು ಇರಬೇಕು. ಗರಿಷ್ಠ 14 ಗಿಡ ಹೊಂದಲು ಅವಕಾಶವಿದೆ. ಇದನ್ನೂ ಓದಿ : ಚಿಂಚೋಳಿ ಪುರಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಬಿಜೆಪಿಗೆ ಮುಖಬಂಗ
Related Articles
ಒಂದು ತೆಂಗಿನ ಗಿಡಕ್ಕೆ 70 ರೂ., ಸೀಬೆ 85 ರೂ., ನೆಲ್ಲಿ 40 ರೂ., ಕರಿಬೇವು 12 ರೂ., ನಿಂಬೆ 15 ರೂ., ನುಗ್ಗೆ 10 ರೂ. ಹಾಗೂ ಪಪಾಯಕ್ಕೆ 10 ರೂ. ನಿಗದಿ ಮಾಡಲಾಗಿದೆ. ಒಬ್ಬರಿಗೆ ಗರಿಷ್ಠ ಎಲ್ಲ ಬಗೆಯ ಎರಡೆರೆಡು ಗಿಡಗಳನ್ನು ನೀಡಲಾಗುತ್ತದೆ. ತೋಟಗಾರಿಕೆ ಇಲಾಖೆಯ ಅಧಿಕೃತ ನರ್ಸರಿ, ಜಿ.ಪಂ.ಗಳಿಂದ ರಚಿಸಲ್ಪಟ್ಟಿರುವ ಸಂಜೀವಿನಿ ಸಂಘಗಳ ನರ್ಸರಿಗಳಲ್ಲಿ ನಿರ್ದಿಷ್ಟ ದರ ನೀಡಿ ಗಿಡ ಖರೀದಿ ಮಾಡಬಹುದಾಗಿದೆ. ನರೇಗಾದಡಿ ಈಗಾಗಲೇ 10 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದರು.
Advertisement
ಪೌಷ್ಟಿಕ ತೋಟಕ್ಕೆ ಪೂರಕವಾದ ಗಿಡಗಳು ತೋಟಗಾರಿಕೆ ಇಲಾಖೆಯ ಅಧಿಕೃತ ನರ್ಸರಿ ಹಾಗೂ ಗ್ರಾ.ಪಂ. ಸಂಜೀವಿನಿ ಸಂಘಗಳ ನರ್ಸರಿಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲಿದ್ದೇವೆ. ಪ್ರತೀ ಗ್ರಾ.ಪಂ.ನಲ್ಲಿ 101 ಪೌಷ್ಟಿಕ ತೋಟ ನಿರ್ಮಾಣದ ಗುರಿಯಿದೆ.– ಭುವನೇಶ್ವರಿ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ ಪೌಷ್ಟಿಕ ತೋಟ ನಿರ್ಮಾಣ ಸಂಬಂಧ ನರೇಗಾದಡಿ ಕಾರ್ಯಕ್ರಮ ಅನುಷ್ಠಾನಕ್ಕೆ ಈಗಾಗಲೇ ಪಿಡಿಒಗಳಿಗೆ ನಿರ್ದೇಶನ ನೀಡಿದ್ದೇವೆ. ಎಲ್ಲ ಗ್ರಾ.ಪಂ.ಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ. ಸಂಜೀವಿನಿ ಸಂಘಗಳನ್ನು ಇದರಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು.
-ಪ್ರಸನ್ನ ಎಚ್., ಜಿ.ಪಂ. ಸಿಇಒ ಉಡುಪಿ