Advertisement

15ಕ್ಕೂ ಹೆಚ್ಚು ಮನೆ ಹಾನಿ, ಬೆಳೆಗಳು ಜಲಾವೃತ

09:28 PM Aug 07, 2019 | Team Udayavani |

ಹುಣಸೂರು: ತಾಲೂಕಿನಾದ್ಯಂತ ಜಡಿಮಳೆ ಮುಂದುವರಿದಿದ್ದು, ವರುಣನ ಅವಕೃಪೆಗೊಳಗಾಗಿರುವ ಹನಗೋಡು ಹೋಬಳಿಯಲ್ಲಿ ಹೆಚ್ಚು ನಷ್ಟ ಸಂಭವಿಸಿದ್ದು, 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಲಕ್ಷ್ಮಣತೀರ್ಥ ನದಿಯಲ್ಲಿ ಪ್ರವಾಹ ಹೆಚ್ಚುತ್ತಲೇ ಇದ್ದು, ಸಾಕಷ್ಟು ಬೆಳೆಗಳು ಅಣೆಕಟ್ಟೆ ಹಿನ್ನೀರಿನಲ್ಲಿ ಮುಳುಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ತಾಲೂಕಿನ ಹನಗೋಡು ಹೋಬಳಿಯ ಕಚುವಿನಹಳ್ಳಿಯ ಶಿವಣ್ಣೇಗೌಡ, ನೇರಳಕುಪ್ಪೆ ಎ. ಹಾಡಿಯ ಸಣ್ಣ, ಬಿಲ್ಲೇನಹೊಸಹಳ್ಳಿಯ ರಾಜಯ್ಯ, ಕುರುಬರಹೊಸಹಳ್ಳಿಯ ದೊಡ್ಡಸ್ವಾಮಪ್ಪ, ಚಂದ್ರ, ಮುದಗನೂರಿನಲ್ಲಿ ಒಂದು ಮನೆ ಹಾಗೂ ಬಿಳಿಕೆರೆ ಹೋಬಳಿಯ ಅಸ್ವಾಳಿನ ಕೆಂಪಾಲಮ್ಮ, ದೇವಮ್ಮ, ಬೆಂಕಿಪುರದ ತಗಡನಾಯ್ಕ, ಕಾಡನಚನ್ನನಾಯಕರಿಗೆ ಸೇರಿದ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.

ದವಸ ಧಾನ್ಯ ನೀರುಪಾಲು: ಹಾನಿಗೊಳಗಾಗಿರುವ ಮನೆಗಳಲ್ಲಿದ್ದ ದವಸಧಾನ್ಯಗಳು ಮಳೆ ನೀರಿಗೆ ತೋಯ್ದು ಹೋಗಿವೆ. ಅಸ್ವಾಳಿನ ಕೆಂಪಾಳಮ್ಮರಿಗೆ ಸೇರಿದ ಕುರಿಗೆ ಗಾಯವಾಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ. ನೇರಳಕುಪ್ಪೆಯ ತಮ್ಮಣ್ಣೇಗೌಡರ ತಂಬಾಕು ಹದಗೊಳಿಸುವ ಬ್ಯಾರನ್‌ ಗೋಡೆ ಬಿದ್ದು ಹೋಗಿದೆ.

ಬೆಳೆಗಳು ಜಲಾವೃತ: ಲಕ್ಷ್ಮಣತೀರ್ಥ ನದಿಯಲ್ಲಿ ದಿದೇ ದಿನೆ ಪ್ರವಾಹ ಹೆಚ್ಚುತ್ತಲೇ ಇದ್ದು, ಹನಗೋಡು ಹೋಬಳಿಯ ಹತ್ತಾರು ಹಳ್ಳಿಗಳಲ್ಲಿ ನದಿಯ ಹಿನ್ನೀರಿನಿಂದ ವಿವಿಧೆಡೆ ಬೆಳೆಗಳು ಜಲಾವೃತ್ತವಾಗಿವೆ. ಬಹುತೇಕ ಶುಂಠಿ ಬೆಳೆ ನೀರಿನಲ್ಲಿ ಮುಳುಗಿದ್ದು, ಕೊಳೆಯುವ ಭೀತಿ ಎದುರಾಗಿದೆ. ಮಳೆ ಹೀಗೆ ಮುಂದುವರಿದರೆ ನದಿಯ ಪ್ರವಾಹ ಹೆಚ್ಚಾಗಿ ಹನಗೋಡು ಅಣೆಕಟ್ಟೆ ಹಿನ್ನೀರು ಬೆಳೆಗಳನ್ನು ಆವರಿಸುವ ಸಂಭವವಿದ್ದು, ರೈತರು ಆತಂಕಗೊಂಡಿದ್ದಾರೆ.

ಹನಗೋಡು ಹೋಬಳಿಯ ಬಿಲ್ಲೇನಹೊಸಳ್ಳಿಯ ಟೈಲರ್‌ ರಾಜು ಮನೆಯ ಸುತ್ತ ಮಳೆ ನೀರು ಸಾಕಷ್ಟು ಸಂಗ್ರಹಗೊಂಡಿದೆ. ಲಕ್ಷ್ಮಣತೀರ್ಥ ನದಿಯ ಪ್ರವಾಹದ ನೀರಿನಲ್ಲಿ ಜಾನುವಾರುವೊಂದು ಕೊಚ್ಚಿಕೊಂಡು ಬಂದು ಹನಗೋಡು ಅಣೆಕಟ್ಟೆಯಲ್ಲಿ ಸಿಲುಕಿಕೊಂಡಿದ್ದು, ಜಾನುವಾರಿನ ಮಾಲೀಕರ್ಯಾರೆಂದು ತಿಳಿದು ಬಂದಿಲ್ಲ.

Advertisement

ಮುಂಜಾನೆಯೇ ತಹಶೀಲ್ದಾರ್‌ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಮಳೆಯಿಂದ ಹಾನಿಗೊಳಗಾಗಿರುವ ಬಿಳಿಕೆರೆ ಹೋಬಳಿಯ ಅಸ್ವಾಳು ಹಾಗೂ ಬೆಂಕಿಪುರ, ಹನಗೋಡು ಭಾಗದ ನೇರಳಕುಪ್ಪೆ, ಕಚುವಿನಹಳ್ಳಿ, ಬಿಲ್ಲೇನಹೊಸಹಳ್ಳಿಗಳಿಗೆ ತಹಶೀಲ್ದಾರ್‌ ಬಸವರಾಜು, ಉಪ ತಹಶೀಲ್ದಾರ್‌ಗಳಾದ ವೆಂಕಟಸ್ವಾಮಿ, ಗುರುಸಿದ್ದಯ್ಯ ನೇತೃತ್ವದ ತಂಡವು ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ರಾಜಸ್ವ ನಿರೀಕ್ಷಕ ರಾಜ್‌ಕುಮಾರ್‌, ಗ್ರಾಮ ಲೆಕ್ಕಿಗರಾದ ನರಸಿಂಹಶೆಟ್ಟಿ, ಗಿರೀಶ್‌, ಮಹದೇವ್‌, ತ್ರಿಶೂಲ್‌, ದಯಾನಂದ್‌ ಸಹ ಜೊತೆಗಿದ್ದು, ಹಾನಿ ಬಗ್ಗೆ ವರದಿ ನೀಡಿದ್ದಾರೆ.

ಮಳೆ ಹಾನಿ ಹೆಚ್ಚಾದರೆ ಕರೆ ಮಾಡಿ: ಹಾನಿಗೊಳಗಾದ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಹಾನಿಗೊಳಗಾದವರ ಬಗ್ಗೆ ಇಂದೇ(ಬುಧವಾರ) ವರದಿ ನೀಡಬೇಕೆಂದು ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಷ್ಟ್ರೀಯ-ರಾಜ್ಯ ಪ್ರಕೃತಿ ವಿಕೋಪ ನಿಧಿ ಯೋಜನೆಯಡಿ ತಕ್ಷಣವೇ ಸೂಕ್ತ ಪರಿಹಾರ ನೀಡಲಾಗುವುದು, ಮಳೆ ಹೆಚ್ಚಾಗಿ ಹಾನಿಯಾದಲ್ಲಿ ಸಂತ್ರಸ್ತರು 08222-262040ಗೆ ಮಾಹಿತಿ ನೀಡುವಂತೆ ತಹಸೀಲ್ದಾರ್‌ ಬಸವರಾಜು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next