Advertisement

10,000ಕ್ಕೂ ಅಧಿಕ ರೋಗಿಗಳಿಗೆ ಮತದಾನ ಭಾಗ್ಯವಿಲ್ಲ!

03:45 AM Mar 29, 2019 | Sriram |

ಮಂಗಳೂರು: ಇವರಲ್ಲಿ ಮತ ದಾರರ ಗುರುತಿನ ಚೀಟಿಯಿದೆ. ಮತದಾರರ ಪಟ್ಟಿಯಲ್ಲಿ ಹೆಸರೂ ಇದೆ. ಆದರೂ ಇವರು ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರೆಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು!

Advertisement

ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ರಾಜ್ಯದಲ್ಲಿ ಪ್ರತಿದಿನ ದಿನಕ್ಕೆ ಕನಿಷ್ಠ 10,000ಕ್ಕೂ ಅಧಿಕ ಮಂದಿ ನಾನಾ ರೀತಿಯ ಚಿಕಿತ್ಸೆಗಳಿಗೆ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ಈ ಲೆಕ್ಕಾಚಾರ ನೋಡಿದರೆ, ಮತದಾನದ ದಿನವೂ ಹೆಚ್ಚುಕಮ್ಮಿ ಅಷ್ಟೇ ಪ್ರಮಾಣದ ರೋಗಿಗಳು ರಾಜ್ಯದೆಲ್ಲೆಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕಾರಣದಿಂದ ಅವರೆಲ್ಲ ಅನಿವಾರ್ಯವಾಗಿ ಮತದಾನದಿಂದ ದೂರ ಉಳಿಯಬೇಕಾಗುತ್ತದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ಮೂಲದ ಪ್ರಕಾರ; ಅದು 1,000 ರೋಗಿಗಳಿಗೆ ಚಿಕಿತ್ಸೆ ನೀಡಲು ಇರುವ ಸುಸಜ್ಜಿತ ಆಸ್ಪತ್ರೆ. ಸದ್ಯ ಇಲ್ಲಿ 650 ಒಳರೋಗಿಗಳಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಇವರ ಸಂಬಂಧಿಕರು ಆರೈಕೆ ನೋಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಹುತೇಕ ರೋಗಿಗಳು ಕೇರಳ, ಉತ್ತರ ಕರ್ನಾಟಕ ಸೇರಿದಂತೆ ಬೇರೆ ಬೇರೆ ಜಿಲ್ಲೆಯವರು. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ 650 ರೋಗಿಗಳ ಪೈಕಿ ಸುಮಾರು 300ರಷ್ಟು ಜನರಿಗೆ ಆಸ್ಪತ್ರೆ ಬಿಟ್ಟು ಹೋಗುವಂತಿಲ್ಲ. ಹೀಗಾಗಿ ನಾಡಿದ್ದು ಚುನಾವಣೆಯ ದಿನ ಇಷ್ಟೂ ಜನರು ಮತದಾನ ದಿಂದ ವಂಚಿತರಾಗುವುದು ಬಹುತೇಕ ನಿಚ್ಚಳ.

ಇದು ಮಂಗಳೂರಿನ ಒಂದು ಆಸ್ಪತ್ರೆಯ ವಿಷಯವಾದರೆ, ಇಂತಹ 1,000 ಬೆಡ್‌ ಸಾಮರ್ಥ್ಯದ ಸುಮಾರು 10 ಆಸ್ಪತ್ರೆಗಳು ಮಂಗಳೂರು ನಗರ ವ್ಯಾಪ್ತಿಯಲ್ಲಿವೆ. ಇಲ್ಲಿಯೂ ಕೂಡ ಇಂತಹುದೇ ಪರಿಸ್ಥಿತಿ ಉಂಟಾಗಿ ಹೆಚ್ಚಾ ಕಡಿಮೆ 3,000 ಜನರು ಮತದಾನದಿಂದ ವಂಚಿತರಾಗಲಿದ್ದಾರೆ. ಜತೆಗೆ 950 ಬೆಡ್‌ಗಳ ಸಾಮರ್ಥ್ಯದ ವೆನಾÉಕ್‌ ಸರಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ/ಆರೈಕೆ ಮಾಡುವವರ ಪೈಕಿ ಎಲ್ಲರಿಗೂ ಮತದಾನ ಮಾಡುವ ದಿನ ಆಸ್ಪತ್ರೆಯಿಂದ ತೆರಳಲು ಆಗದು.

ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ದ.ಕ. ಜಿಲ್ಲೆಯಲ್ಲಿ ನರ್ಸಿಂಗ್‌ ಹೋಮ್‌, ಸಮುದಾಯ ಆರೋಗ್ಯ ಕೇಂದ್ರ, ಆಸ್ಪತ್ರೆ ಸೇರಿದಂತೆ ಸುಮಾರು 118 ಖಾಸಗಿ/ಸರಕಾರಿ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ ಕನಿಷ್ಠ 5-6 ಬೆಡ್‌ಗಳಿಂದ 100-200 ಬೆಡ್‌ಗಳ ಸಾಮರ್ಥ್ಯವಿದೆ. ಹೀಗಾಗಿ ಜಿಲ್ಲೆಯಲ್ಲಿಯೇ ಸುಮಾರು ಕನಿಷ್ಠ 10,000ದಷ್ಟು ರೋಗಿಗಳು ಹಾಗೂ ಆರೈಕೆ ನೋಡಿಕೊಳ್ಳುವವರು ಇದ್ದರೆ ಈ ಪೈಕಿ ಸುಮಾರು ಕನಿಷ್ಠ 5,000 ಮಂದಿಗೆ ಮತದಾನ ಮಾಡಲು ಅವಕಾಶವೇ ಸಿಗದು. ಉಡುಪಿ ಜಿಲ್ಲೆಯಲ್ಲಿಯೂ ಸಾವಿರಾರು ರೋಗಿಗಳಿಗೆ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ.

Advertisement

ಸಾಧ್ಯತೆ ಇದ್ದರೂ ಸವಾಲು ಅಧಿಕ!
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮತದಾನದ ಅವಕಾಶ ಕಲ್ಪಿಸಲು ಯಾವ ವ್ಯವಸ್ಥೆ ಮಾಡಬಹುದು ಎಂಬುದು ಸದ್ಯಕ್ಕೆ ಚುನಾವಣಾ ಆಯೋಗಕ್ಕೂ ಪರಿಹರಿಸಲಾಗದ ವಿಚಾರ. ಸದ್ಯದ ಪ್ರಕಾರ ಅಂಚೆ ಮತಗಳನ್ನು ನೀಡುವಂತಿಲ್ಲ. ಒಂದು ವೇಳೆ ಅಂಚೆ ಮತ ನೀಡಿದರೆ ಅದು ಬೇರೆ ಬೇರೆ ಕಾರಣದಿಂದ ದುರುಪಯೋಗವಾಗುವ ಸಾಧ್ಯತೆಯೂ ಇದೆ. ಬದಲಾಗಿ ಆಯೋಗವೇ ಖುದ್ದಾಗಿ ಆಸ್ಪತ್ರೆಗಳಲ್ಲಿಯೇ ಮತದಾನ ಕೇಂದ್ರ ತೆರೆದರೆ ಸಾಧ್ಯವೇ? ಅಥವಾ ಆಯೋಗದ ಅಧಿಕಾರಿಗಳು ಆಸ್ಪತ್ರೆಗಳಿಗೆ ತೆರಳಿ ಮತದಾನ ಮಾಡಿಸಿಕೊಳ್ಳಲು ಅವಕಾಶವಿದೆಯೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಆಯೋಗ ಚರ್ಚೆ ನಡೆಸುತ್ತಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಯ ಮನಸ್ಸು ಆ ಸಂದರ್ಭದಲ್ಲಿ ಚಂಚಲ/ಗೊಂದಲ/ ಸ್ಥಿಮಿತ ಕಳೆದುಕೊಂಡಿರುವ ಸಾಧ್ಯತೆ ಇರುವುದರಿಂದ ಆ ಮತಗಳನ್ನು ಪರಿಗಣಿಸಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿದೆ.

“ಜತೆಗಾರರು ಮತ ಚಲಾಯಿಸಿ’
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮತದಾನಕ್ಕೆ ಅವಕಾಶ ನೀಡುವ ವಿಶೇಷ ನಿಯಮ ಅಥವಾ ವ್ಯವಸ್ಥೆಯ ಬಗ್ಗೆ ಚುನಾವಣಾ ಆಯೋಗ ತೀರ್ಮಾನ ಕೈಗೊಂಡಿಲ್ಲ. ಮುಂದಿನ ಹಂತದಲ್ಲಿ ಈ ಕುರಿತಂತೆ ಆಯೋಗ ಸೂಕ್ತ ತೀರ್ಮಾನ ಕೈಗೊಳ್ಳಬಹುದು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೈಕೆ ನೋಡುವವರು ದಯವಿಟ್ಟು ಮತದಾನದ ದಿನ ನಿಗದಿತ ಸಮಯ ನೋಡಿಕೊಂಡು ಆಸ್ಪತ್ರೆಯಿಂದ ಬಂದು ಮತದಾನ ಮಾಡಬೇಕು.
– ಶಶಿಕಾಂತ ಸೆಂಥಿಲ್‌, ಜಿಲ್ಲಾಧಿಕಾರಿ ದ.ಕ.

“ರೋಗಿಗಳಿಗೆ ಮತದಾನ;
ಪರಿಶೀಲನೆ ನಡೆಯಲಿ’
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ರೋಗಿಗಳು ಹಾಗೂ ಅವರ ಆರೈಕೆಯಲ್ಲಿ ತೊಡಗಿಸಿಕೊಂಡ ಬಹುತೇಕ ಮಂದಿ ಮತದಾನದಿಂದ ವಂಚಿತರಾಗುತ್ತಲೇ ಇದ್ದಾರೆ. ಇದಕ್ಕಾಗಿ ಮುಂದಿನ ಚುನಾವಣೆ ವೇಳೆಯಲ್ಲಿ ಆಸ್ಪತ್ರೆಯಲ್ಲಿರುವವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಸರ್ವೆ ಮಾಡಿ, ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕಿದೆ.
– ಡಾ| ಸಚ್ಚಿದಾನಂದ ರೈ,
ಅಧ್ಯಕ್ಷರು, ಭಾರತೀಯ ವೈದ್ಯಕೀಯ
ಸಂಘ ಮಂಗಳೂರು

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next