ಕಲಬುರಗಿ: ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವಂತೆ ತಾವಂತೂ ಸರ್ಕಾರಕ್ಕೆ ಕೇಳ್ಳೋದಿಲ್ಲ ಎಂದು ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿರುವ ಕಾಯ್ದೆ-ಕಾನೂನಿನವ್ಯವಸ್ಥೆಯೊಳಗೆ ಭ್ರಷ್ಟಾಚಾರ ಮುಕ್ತ ಆಡಳಿತ ತರುವ ನಿಟ್ಟಿನಲ್ಲಿ ಶ್ರಮಿಸಲಾಗುವುದು.
ಅದರಂಗವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಲೋಕಾಯುಕ್ತದ ಕಾಯ್ದೆ, ಕಾನೂನು ಬಗ್ಗೆ ಮನಮುಟ್ಟುವ ಹಾಗೆ ತಿಳಿ ಹೇಳಲಾಗುತ್ತಿದೆ ಎಂದು ಹೇಳಿದರು. ಹಿಂದಿನ ಲೋಕಾಯುಕ್ತರು ತಮ್ಮದೇ ಆದ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿರಬಹುದು.
ಆದರೆ ತಾವಂತೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವಲ್ಲಿ ಹಾಗೂ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಅಧಿಕಾರಿ ವರ್ಗದವರಲ್ಲಿ ತಿಳಿ ಹೇಳುತ್ತೇವೆ. ತದನಂತರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.
ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ ಎಂದು ಅಭಿಪ್ರಾಯಪಟ್ಟ ಲೋಕಾಯುಕ್ತ ಶೆಟ್ಟಿ ಅವರು, ಭೃಷ್ಟಾಚಾರ ಸಂಪೂರ್ಣ ಕಿತ್ತೂಗೆಲಿಕ್ಕಾಗುವುದಿಲ್ಲ ಎಂಬುದು ತಮಗೆ ಗೊತ್ತಿದೆ. ಆದರೆ ಇಡೀ ದೇಶದಲ್ಲಿಯೇ ಭ್ರಷ್ಟಾಚಾರ ಕಡಿಮೆ ಇರುವ ರಾಜ್ಯ ಕರ್ನಾಟಕವನ್ನಾಗಿಸುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಉಳಿದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು. ಎಸಿಬಿ ಲೋಕಾಯುಕ್ತದೊಳಗೆ ಸೇರಿಸುವ ಪ್ರಸ್ತಾವನೆ ವಿಷಯ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದು ತಿಳಿಸಿದರು.