Advertisement

ಇನ್ನಷ್ಟು  ಪೊಲೀಸರ ವರ್ಗಾವಣೆ ಸಚಿವ ರಾಮಲಿಂಗಾ ರೆಡ್ಡಿ

12:49 PM Jan 24, 2018 | Team Udayavani |

ಮಂಗಳೂರು: ಚುನಾವಣೆ ಸಮೀಪಿಸುತ್ತಿರುವುದರಿಂದ ಚುನಾವಣಾ ಆಯೋಗದ ಸೂಚನೆಯ ಹಿನ್ನೆಲೆ ಯಲ್ಲಿ ಆಯಕಟ್ಟಿನ ಜಾಗದಲ್ಲಿರುವ ಇನ್ನಷ್ಟು ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಾಗಲಿದೆ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

Advertisement

ಉದ್ಯಮಿಯೋರ್ವರ ವಿವಾಹ ಸಮಾರಂಭದ ಹಿನ್ನೆಲೆ ಯಲ್ಲಿ ಮಂಗಳವಾರ ಕರ್ನಿರೆಗೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದ.ಕ. ಜಿಲ್ಲಾ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ ಅವರ ವರ್ಗಾವಣೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ವರ್ಗಾವಣೆ ಆಡಳಿತಾತ್ಮಕ ಪ್ರಕ್ರಿಯೆ. ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಇರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಈಗಾಗಲೇ ಚುನಾವಣಾ ಆಯೋಗ ಸೂಚನೆ ನೀಡಿದೆ. ಇದರಂತೆ ಮೂರು ವರ್ಷ ಗಳಿಂದ ಬೆಳಗಾವಿಯಲ್ಲಿ ಎಸ್‌ಪಿಯಾಗಿದ್ದ ರವಿಕಾಂತೇ ಗೌಡ ಅವರನ್ನು ಮಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಸುಧೀರ್‌ ಕುಮಾರ್‌ ರೆಡ್ಡಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ದ.ಕ. ಜಿಲ್ಲೆಗಿಂತ ದೊಡ್ಡದಾಗಿರುವ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ ಎಂದರು.

ದ.ಕ. ಜಿಲ್ಲೆಯಲ್ಲಿ ಕಳೆದ 28 ದಿನಗಳಲ್ಲಿ 5 ಕೊಲೆಗಳಾಗಿದ್ದು ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಲೋಪವಾಗಿದೆಯೇ ಎಂಬುದಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ವ್ಯವಸ್ಥೆ ಸರಿಯಾಗಿಯೇ ಕೆಲಸ ಮಾಡುತ್ತಿದೆ. ಇಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ಸುಮ್ಮನಿದ್ದರೆ ಯಾವುದೇ ಸಮಸ್ಯೆ ತಲೆದೋರದು. ನಾನು ಆ ರಾಜಕೀಯ ಪಕ್ಷ , ಸಂಘಟನೆ, ಈ ರಾಜಕೀಯ ಪಕ್ಷ, ಸಂಘಟನೆಗಳು ಎಂದು ಹೇಳುತ್ತಿಲ್ಲ. ಎಲ್ಲರೂ ಸುಮ್ಮನಿದ್ದರೆ ಕಾನೂನು ಸುವ್ಯವಸ್ಥೆ ಸರಿಯಾಗಿ ಇರುತ್ತೆ. ಜನರಿಗೆ ಯಾವುದೇ ಗಲಾಟೆ ಬೇಕಾಗಿಲ್ಲ. ಚುನಾವಣೆವರೆಗೆ ಇದೆಲ್ಲಾ ಮುಂದುವರಿಯುತ್ತದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂಬುದಾಗಿ ಕೆಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌ ಅವರ ಹೇಳಿಕೆಗೆ ಉತ್ತರಿಸಿದ ಸಚಿವರು ಕರ್ನಾಟಕ ದಲ್ಲಿ ಬಿಜೆಪಿ ಆಡಳಿತ ಸಂದರ್ಭಕ್ಕೆ ಹೋಲಿಸಿದರೆ ಅಪರಾಧ ಪ್ರಮಾಣ ಗಣನೀಯ ಪ್ರಮಾಣ ಇಳಿಕೆಯಾಗಿದೆ. ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇರುವ ಅಪರಾಧ ಪ್ರಮಾಣಗಳತ್ತ ಅವರು ಗಮನ ಹರಿಸಲಿ. ಆ ರಾಜ್ಯಗಳಲ್ಲ ಅಪರಾಧ ಪ್ರಮಾಣಗಳು ಯಾವ ರೀತಿ ಇದೆ ಎಂಬುದಕ್ಕೆ ಉತ್ತರ ಪ್ರದೇಶ ರಾಜ್ಯದ ನಿದರ್ಶನವೊಂದೇ ಸಾಕು ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next