Advertisement

ಕರಾವಳಿಯ ದೇಗುಲಗಳಲ್ಲಿ ಹೊಸವರ್ಷದ ದಿನ ಭಕ್ತಸಾಗರ

11:40 PM Jan 01, 2023 | Team Udayavani |

ಬೆಳ್ತಂಗಡಿ: ಹೊಸ ವರ್ಷ ಪ್ರಾರಂಭದ ದಿನವಾದ ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಸಹಿತ ಕರಾವಳಿಯ ಹೆಚ್ಚಿನ ದೇಗುಲಗಳಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರುಶನ ಪಡೆದಿದ್ದಾರೆ. ರವಿವಾರವಾಗಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಿತ್ತು. ಸುಬ್ರಹ್ಮಣ್ಯ, ಕೊಲ್ಲೂರು, ಉಡುಪಿ ಶ್ರೀಕೃಷ್ಣ, ಕಟೀಲು ದುರ್ಗಾಪರಮೇಶ್ವರೀ ದೇಗುಲ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಂಡು ಬಂದರು.

Advertisement

ರವಿವಾರ ಸರಕಾರಿ ರಜೆಯಾದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಾರೀ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದು, ವಿಶೇಷ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಹೊಸ ವರ್ಷಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಕ್ರಿಸ್ಮಸ್‌ ರಜೆ, ವರ್ಷಾಂತ್ಯ ರಜೆ ಮುಗಿಸುವ ತವಕ, ಶಾಲಾ ಶೈಕ್ಷಣಿಕ ಪ್ರವಾಸದ ಒತ್ತಡ- ಇತ್ಯಾದಿ ಹತ್ತು-ಹಲವು ಕಾರಣಗಳಿಂದ ಕಳೆದ ವಾರವಿಡಿ ಪ್ರತಿನಿತ್ಯ ಎಂಬಂತೆ ಮೂವತ್ತರಿಂದ ನಲ್ವತ್ತು ಸಾವಿರದ‌ಷ್ಟು ಭಕ್ತರು, ಪ್ರವಾಸಿಗರು ಸಂದರ್ಶಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಡಿ.31ರಂದು ರಾತ್ರಿಯೇ ಹೂ ಹಣ್ಣುಗಳಿಂದ ಸಿಂಗಾರಗೊಳಿಸಿದ್ದರಿಂದ ಭಕ್ತರು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಕಡೆಗಳಿಂದ ಬಂದಿದ್ದರು.

ಡಿ.31ರಾತ್ರಿ 12ರ ವರೆಗೆ ಅನ್ನದಾಸೋಹ
ಡಿ.31ರಂದು ಬೆಳಗ್ಗೆಯಿಂದ ರಾತ್ರಿ 12ರ ವರೆಗೆ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಭಕ್ತರಿಗೆ ಅನ್ನಪ್ರಸಾದ ನೀಡಲಾಗಿತ್ತು. ಜ. 1 ಸುಮಾರು 60 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸೀÌಕರಿಸಿದ್ದಾರೆ ಎಂದು ದೇವಳದ ಅನ್ನಪೂರ್ಣಛತ್ರದ ಮೇಲುಸ್ತುವಾರಿ ಸುಬ್ರಹ್ಮಣ್ಯ ಪ್ರಸಾದ್‌ ತಿಳಿಸಿದ್ದಾರೆ.

ದೇವಸ್ಥಾನ, ಬೀಡು, ಅಣ್ಣಪ್ಪ ಬೆಟ್ಟ, ಪಾರ್ಕಿಂಗ್‌ ಸ್ಥಳ, ಬಾಹುಬಲಿ ಬೆಟ್ಟ, ಮ್ಯೂಸಿಯಂ ಸಹಿತ ಎಲ್ಲೆಡೆ ಜನಸ್ತೋಮವೇ ಕಂಡುಬಂತು. ರಸ್ತೆಯುದ್ದಕ್ಕೂ ವಾಹನಗಳ ಸರತಿ ಸಾಲು ಕಂಡುಬಂತು. ಧನುರ್ಮಾಸವಾದ್ದರಿಂದ ಪ್ರಾತಃಕಾದಲ್ಲಿ ದೇವರಿಗೆ ವಿಶೇಷ ಧನು ಪೂಜೆ ನಡೆಯುತ್ತಿರುವುದರಿಂದಲೂ ಮುಂಜಾನೆಯಿಂದಲೇ ಭಕ್ತರ ಸಂಖ್ಯೆ ಕಂಡುಬರುತ್ತಿದೆ. ಉಳಿದಂತೆ ಕೊಕ್ಕಡ ಬಯಲು ಆಲಯ ಗಣಪನೆಂದೇ ಪ್ರಸಿದ್ಧವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಮಣ್ಣಿ ಹರಕೆಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು.

Advertisement

ಸುಬ್ರಹ್ಮಣ್ಯ ಕ್ಷೇತ್ರ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಾರಾಂತ್ಯದ ಶನಿವಾರ ಮತ್ತು ರವಿವಾರ ಹೆಚ್ಚಿನ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರಲ್ಲದೇ ಅನ್ನಪ್ರಸಾದ ಸ್ವೀಕರಿಸಿದರು.

ಕೊಲ್ಲೂರು: ಭಾರೀ ಸಂಖ್ಯೆಯ ಭಕ್ತರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ರವಿವಾರ ಸಹಸ್ರಾರು ಭಕ್ತರು ಶ್ರೀ ದೇವಿಯ ದರ್ಶನಕ್ಕೆ ಆಗಮಿಸಿದ್ದರು.

ಶಾಲಾ ಶೈಕ್ಷಣಿಕ ಪ್ರವಾಸದ ಮಕ್ಕಳು ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಸುಮಾರು 15,000 ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ನೂಕುನುಗ್ಗಲು ಆಗದಂತೆ ವಿಶೇಷ ಕ್ರಮ ಕೈಗೊಳ್ಳಲಾಗಿತ್ತು. ಕಾರ್ಯನಿರ್ವಹಣಾಧಿಕಾರಿ ಮಹೇಶ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸಮಿತಿ ಸದಸ್ಯರು, ದೇಗುಲದ ಸಿಬಂದಿಗಳು ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದರು.

ಕಟೀಲು: 3,500 ಹೂವಿನ ಪೂಜೆ
ಕಟೀಲು ದುರ್ಗಾಪರಮೇಶ್ವರಿ ದೇಗುಲಕ್ಕೆ ಸುಮಾರು 10 ಸಾವಿರದಷ್ಟು ಭಕ್ತರು ಭೇಟಿ ನೀಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ 30 ಶಾಲೆಗಳ ವಿದ್ಯಾರ್ಥಿಗಳು ಕೂಡ ಶ್ರೀದೇವಿಯ ದರ್ಶನ ಪಡೆದಿದ್ದಾರೆ. 3,500ರಷ್ಟು ಹೂವಿನ ಪೂಜೆ ಸೇವೆ ಮತ್ತು 19 ಮದುವೆ ನಡೆದಿದೆ.

ಉಡುಪಿ ಶ್ರೀಕೃಷ್ಣ ಮಠಕ್ಕೂ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿ ಶ್ರೀಕೃಷ್ಣ ದೇವರ ದರುಶನ ಮಾಡಿದ್ದಾರಲ್ಲದೇ ಅನ್ನಪ್ರಸಾದ ಸ್ವೀಕರಿಸಿದ್ದಾರೆ.

ನಾಡಿನ ಜನತೆಗೆ 2023 ಸಮತೋಲಿತ ವರ್ಷವಾಗಿರಲಿ: ಡಾ| ಹೆಗ್ಗಡೆ
2022ನೇ ವರ್ಷ ಕೊನೆಗೊಂಡಿದೆ. ಹಾಗಾಗಿ 2023 ಸಮತೋಲನ ವರ್ಷವಾಗಿ ಸುಖ ದುಃಖಗಳೆರಡನ್ನೂ ಹೊಂದಿಸಿಕೊಂಡು ಹೋಗುವಂತಾಗಲಿ. ಮಕರ ಸಂಕ್ರಮಣದ ಬಳಿಕ ಎಲ್ಲ ದುಃಖಗಳು ನಿವಾರಣೆಯಾಗಿ ಸಂತೋಷ, ಸುಖ ನೆಮ್ಮದಿ ಶಾಂತಿ ಇರುವಂತಾಗಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ನಾಡಿನ ಜನತೆಗೆ ಶುಭ ಹಾರೈಸಿದ್ದಾರೆ.

ಪ್ರವಾಹದಲ್ಲಿ ನೀರು ಹರಿಯುತ್ತಿರುವಂತೆಯೇ ವರ್ಷ ವರ್ಷವೂ ಕಳೆದು ಹೋಗುತ್ತಿದೆ. ಈ ವರ್ಷದಲ್ಲಿ ಒಳ್ಳೆಯದನ್ನು ನಿರೀಕ್ಷೆ ಮಾಡುತ್ತೇವೆ ಮತ್ತು ಆ ನಿರೀಕ್ಷೆ ಈಡೇರಲಿ. ನಮ್ಮ ದೇಶ ಇಂದು ಬೆಳೆದಿದೆ. ಇತರ ದೇಶಗಳಿಗೆ ಹಿರಿಯಣ್ಣನಂತಾಗಿದೆ. ಈ ಸ್ಥಾನ ಇನ್ನೂ ಏರುತ್ತ ಹೋಗಬೇಕು. ಎಲ್ಲವೂ ಉತ್ತಮವಾಗಿರಲಿ ಎಂದು ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next