Advertisement

ಎಂಆರ್‌ಪಿಗಿಂತ ಹೆಚ್ಚು ಹಣ ಎರಡು ಹೋಟೆಲ್‌ಗೆ ದಂಡ

11:23 AM Aug 02, 2017 | Team Udayavani |

ಬೆಂಗಳೂರು: ಜಿಎಸ್‌ಟಿ ಹೆಸರಿನಲ್ಲಿ ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್‌ಪಿ) ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ನಗರದ ಎರಡು ಹೋಟೆಲ್‌ಗ‌ಳಿಗೆ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.

Advertisement

ಜಿಎಸ್‌ಟಿ ಜಾರಿ ಬಳಿಕ ಪೊಟ್ಟಣ ಸರಕಿನ (ಪ್ಯಾಕೇಜ್‌ ಕಮಾಡಿಟಿ) ಎಂಆರ್‌ಪಿ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯಲ್ಲಿರುವ “ಅಡ್ಯಾರ್‌ ಆನಂದ ಭವನ್‌’ ಹಾಗೂ ಕೋರಮಂಗಲದ “ಕೋವ್‌ ಸಿಜÉರ್‌ ಹೋಟೆಲ್‌’ಗೆ ಕ್ರಮವಾಗಿ 4000 ರೂ. ಹಾಗೂ 2,000 ರೂ. ದಂಡ ವಿಧಿಸಿದೆ.

ಇನ್ನೊಂದೆಡೆ ಜಿಎಸ್‌ಟಿ ಜಾರಿ ಬಳಿಕ ದರ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡದ ರಾಜ್ಯದ ಸುಮಾರು 675 ಉತ್ಪಾದಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲು ಸಿದ್ಧತೆ ನಡೆಸಿರುವ ಇಲಾಖೆಯು, ಅದಕ್ಕೂ ಸ್ಪಂದಿಸದಿದ್ದರೆ ಕಾನೂನು ಕ್ರಮ ಜರುಗಿಸಲು ನಿರ್ಧರಿಸಿದೆ. ಜತೆಗೆ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ತಲುಪುತ್ತಿದೆಯೇ ಎಂಬುದನ್ನು ತಿಳಿಯಲು ತಪಾಸಣೆ ಕಾರ್ಯವನ್ನೂ ಆರಂಭಿಸಿದೆ.

ಜಿಎಸ್‌ಟಿಯಡಿ ಆಯ್ದ ಸರಕು- ಸೇವೆಗಳ ಬೆಲೆ ಇಳಿಕೆಯಾಗಿದ್ದರೂ ಬಹುತೇಕ ಕಡೆ ವಸ್ತುಗಳ ಬೆಲೆ ಇಳಿಕೆಯಾಗಿಲ್ಲ. ಮಾಹಿತಿ ಕೊರತೆಯೋ ಅಥವಾ ಉದ್ದೇಶಪೂರ್ವಕವಾಗಿಯೋ ವರ್ತಕರು ಗ್ರಾಹಕರಿಗೆ ಬೆಲೆ ಇಳಿಕೆಯ ಲಾಭ ನೀಡುತ್ತಿಲ್ಲ. ಇನ್ನೊಂದೆಡೆ ಜಿಎಸ್‌ಟಿ ಹೆಸರಿನಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚು ಹಣ ಸಂಗ್ರಹಿಸಿ ಗ್ರಾಹಕರನ್ನು ಶೋಷಿಸುತ್ತಿರುವುದು ನಡೆದಿದೆ. ಈ ಬಗ್ಗೆ ಗ್ರಾಹಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಇಲಾಖೆಯು ಕ್ರಮ ಜರುಗಿಸಲು ಮುಂದಾಗಿದೆ.

ಒಟ್ಟು ಏಳು ದೂರು ಸಲ್ಲಿಕೆ
ಜಿಎಸ್‌ಟಿ ಜಾರಿ ಬಳಿಕ ಈವರೆಗೆ ರಾಜ್ಯಾದ್ಯಂತ ಏಳು ದೂರುಗಳು ಸಲ್ಲಿಕೆಯಾಗಿವೆ. ಸದ್ಯ ದಂಡ ವಿಧಿಸಿರುವ ಎರಡು ಪ್ರಕರಣ ಸೇರಿದಂತೆ ಒಟ್ಟು ಐದು ದೂರುಗಳು ಬೆಂಗಳೂರಿನಲ್ಲೇ ಸಲ್ಲಿಕೆಯಾಗಿವೆ. ಚನ್ನಪಟ್ಟಣದ ಸುಲಾವೈನ್‌ ರೆಸಾರ್ಟ್‌ನಲ್ಲೂ ಎಂಆರ್‌ಪಿಗಿಂತ ಹೆಚ್ಚು ಹಣ ವಸೂಲಿ ಸೇರಿದಂತೆ ಹುಬ್ಬಳ್ಳಿಯಲ್ಲೂ ಒಂದು ದೂರು ದಾಖಲಾಗಿದೆ. ಇತ್ಯರ್ಥಗೊಂಡ ಎರಡು ದೂರು ಹೊರತುಪಡಿಸಿ ಉಳಿದ ದೂರುಗಳ ಪರಿಶೀಲನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

25 ಉತ್ಪಾದಕರಿಂದಷ್ಟೇ ವಿವರ ಸಲ್ಲಿಕೆ
ಜಿಎಸ್‌ಟಿ ಜಾರಿ ಬಳಿಕ ಪ್ಯಾಕೇಜ್‌ ಕಮಾಡಿಟಿ ಬೆಲೆಯಲ್ಲಿ ಇಳಿಕೆ/ಏರಿಕೆಯಾಗಿದೆಯೇ ಅಥವಾ ಯಥಾಸ್ಥಿತಿ ಇದೆಯೇ ಎಂಬ ಬಗ್ಗೆ ಮೂರು ದಿನದಲ್ಲಿ ಮಾಹಿತಿ ನೀಡುವಂತೆ ಇಲಾಖೆಯು ಜುಲೈ 14ರಂದು ರಾಜ್ಯದ 700ಕ್ಕೂ ಹೆಚ್ಚು ನೋಂದಾಯಿತ ಉತ್ಪಾದಕರಿಗೆ ನಿರ್ದೇಶನ ನೀಡಿತ್ತು. ಆದರೆ 15 ದಿನ ಕಳೆದರೂ ಕೇವಲ 25 ಉತ್ಪಾದಕರಷ್ಟೇ ವಿವರ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯು ತಕ್ಷಣವೇ ಕಾರಣ ಕೇಳಿ ನೋಟಿಸ್‌ ನೀಡಲು ಮುಂದಾಗಿದೆ. ಆನಂತರವೂ 7 ದಿನದೊಳಗೆ ಕಾರಣಸಹಿತ ವಿವರ ಸಲ್ಲಿಸದಿದ್ದರೆ 2011ರ ಪ್ಯಾಕೇಜ್‌ ಕಮಾಡಿಟಿ ಕಾಯ್ದೆ ನಿಯಮ 18 (1)ರಂತೆ ಕಾನೂನು ಕ್ರಮ ಜರುಗಿಸಲಿದೆ.

ಬೆಲೆ ಇಳಿಕೆ ಖಾತರಿಗೆ ತಪಾಸಣೆ ಶುರು
ಜಿಎಸ್‌ಟಿ ಜಾರಿಯಾಗಿ ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ಸಿಗುತ್ತಿದೆಯೇ, ಇಲ್ಲವೇ ಎಂಬುದನ್ನು ತಿಳಿಯಲು ಇಲಾಖೆ ಪರಿಶೀಲನೆ ಆರಂಭಿಸಿದೆ. ಈ ಸಂಬಂಧ ಸೋಮವಾರ ಸಭೆ ನಡೆಸಿರುವ ಹಿರಿಯ ಅಧಿಕಾರಿಗಳು ತಪಾಸಣಾ ದಳಗಳು ರಾಜ್ಯಾದ್ಯಂತ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಜಿಎಸ್‌ಟಿ ಜಾರಿ ನಂತರ ಬೆಲೆ ಇಳಿಕೆಯಾಗಿರುವುದಾಗಿ ಉತ್ಪಾದಕರು ಘೋಷಿಸಿರುವ ವಸ್ತುಗಳ ಬೆಲೆ ವಾಸ್ತವದಲ್ಲಿ ಇಳಿಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ ವಾರದಲ್ಲಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಖಾತರಿಗಾಗಿ ಪರೀಕ್ಷಾರ್ಥ ಖರೀದಿ ನಡೆಸುವಂತೆಯೂ ಸೂಚನೆ ನೀಡಿದ್ದಾರೆ.

ಜಿಎಸ್‌ಟಿ ಜಾರಿಯಾದ ನಂತರ ಪ್ಯಾಕೇಜ್‌ ಕಮಾಡಿಟಿಯಡಿಯ ವಸ್ತುಗಳನ್ನು ಎಂಆರ್‌ಪಿಗಿಂತ ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಆಧರಿಸಿ ಎರಡು ಹೋಟೆಲ್‌ಗ‌ಳಲ್ಲಿ ಪರಿಶೀಲನೆ ನಡೆಸಿ ದಂಡ ವಿಧಿಸಲಾಗಿದೆ. ಉಳಿದ ಐದು ದೂರುಗಳ ಬಗ್ಗೆಯೂ ಪರಿಶೀಲನೆ ನಡೆದಿದೆ. ಜಿಎಸ್‌ಟಿಯಿಂದಾಗಿ ದರ ಇಳಿಕೆಯಾದ ವಸ್ತುಗಳ ಬೆಲೆ ವಾಸ್ತವದಲ್ಲೂ ಇಳಿಕೆಯಾಗಿದೆಯೇ ಎಂಬ ಬಗ್ಗೆ ತಪಾಸಣೆ ಕಾರ್ಯ ಶುರುವಾಗಿದ್ದು, ವಾರದೊಳಗೆ ವರದಿ ಸಲ್ಲಿಸುವಂತೆ 10 ತಪಾಸಣಾ ದಳಗಳಿಗೆ ಸೂಚಿಸಲಾಗಿದೆ. ಪರೀಕ್ಷಾರ್ಥ ಖರೀದಿ ಮೂಲಕವೂ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ.
-ಈ.ಮಂಜುನಾಥ್‌, ಉಪನಿಯಂತ್ರಕರು (ಆಡಳಿತ), ಕಾನೂನು ಮಾಪನಶಾಸ್ತ್ರ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next