Advertisement

100 ಎಕ್ರೆಗೂ ಮಿಕ್ಕಿ ಕೃಷಿ, 177 ಮನೆಗಳಿಗೆ ಹಾನಿ

11:11 PM Aug 14, 2019 | mahesh |

ಪುತ್ತೂರು: ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಸುರಿದ ಭಾರೀ ಗಾಳಿ, ಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಸುಮಾರು 100 ಎಕ್ರೆಗೂ ಮಿಕ್ಕಿದ ವ್ಯಾಪ್ತಿಯ ಕೃಷಿ ಹಾನಿಯಾಗಿದೆ ಎಂದು ಪ್ರಥಮ ಹಂತದ ಅಂದಾಜಿನಲ್ಲಿ ಕಂಡುಬಂದಿದ್ದು, 177 ಮನೆಗಳಿಗೆ ಹಾನಿ, 1 ಜೀವಹಾನಿ ಜತೆಗೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ.

Advertisement

ಕಡಬ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 6 ಮನೆಗಳು ಸಂಪೂರ್ಣ ಹಾನಿಯಾಗಿವೆ. 83 ಮನೆಗಳಿಗೆ ಹಾನಿಯುಂಟಾಗಿದೆ. ಕಡಬ ಭಾಗದಲ್ಲಿ ಒಂದು ಜೀವಹಾನಿಯಾಗಿದೆ. ಒಟ್ಟು 94 ವಿದ್ಯುತ್‌ ಕಂಬಗಳು, 3 ಟ್ರಾನ್ಸ್‌ ಫಾರ್ಮರ್‌ಗಳು ನಾಶವಾಗಿವೆ. ಎರಡು ಸೇತುವೆಗಳು ನೆರೆಯಲ್ಲಿ ಕೊಚ್ಚಿ ಹೋಗಿವೆ. 95 ಮಂದಿಯನ್ನು ಸ್ಥಳಾಂತರ ಮಾಡುವ ಅನಿವಾರ್ಯತೆ ಕಂಡುಬಂದಿತ್ತು. 24 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಶಿರಾಡಿ ಅಡ್ಡೊಳೆಯಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ 9 ಮಂದಿಯ ಕುಟುಂಬವನ್ನು ಈಗಲೂ ಉಳಿಸಿಕೊಳ್ಳಲಾಗಿದೆ. ಒಟ್ಟು 102 ಕಿ. ಮೀ. ರಸ್ತೆ ಹಾನಿಯಾಗಿದೆ. ಕಡಬದಲ್ಲಿ ಒಟ್ಟು 16 ಕೃಷಿ ಹಾನಿ ಪ್ರಕರಣಗಳಲ್ಲಿ 13 ಎಕ್ರೆ ಕೃಷಿ ಹಾನಿಯನ್ನು ಪ್ರಥಮ ಹಂತದಲ್ಲಿ ಗುರುತಿಸಲಾಗಿದೆ.

ಪುತ್ತೂರು ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 5 ಮನೆಗಳಿಗೆ ಪೂರ್ಣ ಹಾನಿ, 31 ಮನೆಗಳಿಗೆ ಭಾಗಶಃ ಹಾನಿ, 52 ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಪ್ರಕರಣಗಳು ನಡೆದಿವೆ. ಸುಮಾರು 75 ಎಕ್ರೆ ಪ್ರದೇಶದಲ್ಲಿ ಕೃಷಿ ಹಾನಿ ಸಂಭವಿಸಿದ ಮಾಹಿತಿ ಪ್ರಥಮ ಹಂತದಲ್ಲಿ ಲಭ್ಯವಾಗಿದೆ. ಬಜತ್ತೂರು ಗ್ರಾಮದಲ್ಲಿ ತೂಗು ಸೇತುವೆಯೊಂದು ಕೊಚ್ಚಿ ಹೋಗಿದೆ. 122 ಬೆಳೆ ಹಾನಿ ಪ್ರಕರಣಗಳು ದಾಖಲಾಗಿವೆ.

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇನ್ನೂ ಸರ್ವೇ ಕಾರ್ಯ ನಡೆಯುತ್ತಿದ್ದು, ಹಾನಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪುತ್ತೂರು ಸಹಾಯಕ ಕಮಿಷನರ್‌ ಎಚ್. ಕೆ. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಬಾಡಿಗೆ ಹಣದ ವ್ಯವಸ್ಥೆ
ತೆಂಕಿಲಗುಡ್ಡ ಪ್ರದೇಶದಲ್ಲಿದ್ದ 12 ಮನೆಯ ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಈ ಕುಟುಂಬಗಳಿಗೆ ಆಶ್ರಯದ ಜತೆ ಬಾಡಿಗೆ ಹಣದ ವ್ಯವಸ್ಥೆಯನ್ನೂ ತತ್‌ಕ್ಷಣ ಮಾಡಲಾಗುವುದು. ಭವಿಷ್ಯದಲ್ಲಿ ಇಲ್ಲಿನ ನಿವಾಸಿಗಳಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುವುದು ಎಂದವರು ತಿಳಿಸಿದ್ದಾರೆ.

Advertisement

ವಿಭಾಗ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪ ಗಳನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಮಳೆ ವ್ಯಾಪಕ ಹಾನಿಯನ್ನೂ ಉಂಟುಮಾಡಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ನಿರಂತರ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂದವರು ಹೇಳಿದರು.

ಮುಖ್ಯಮಂತ್ರಿಯವರು ಭೇಟಿ ನೀಡಿ ಪರಿಹಾರದ ಭರವಸೆ ನೀಡಿದಂತೆ ಜಿಲ್ಲಾಧಿಕಾರಿಯವರ ನಿರ್ದೇಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ನೀರು ನುಗ್ಗಿ ಹಾನಿ ಉಂಟಾದವರಿಗೆ ತತ್‌ಕ್ಷಣ 3,800 ರೂ. ಪರಿಹಾರ ನೀಡಲಾಗುತ್ತದೆ. ಪೂರ್ಣ ಹಾನಿಯಾದ ಮನೆಗಳಿಗೆ 90 ಸಾವಿರ ರೂ., ಭಾಗಶಃ ಹಾನಿಯಾದ ಮನೆಗಳಿಗೆ 42 ಸಾವಿರ ರೂ. ಪರಿಹಾರ ಕೂಡಲೇ ನೀಡಲಾಗುತ್ತಿದೆ ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.

ಪ್ರಾಕೃತಿಕ ವಿಕೋಪ ಉಂಟಾದ ಸಂದರ್ಭ ಸೇವಾ ಕಾರ್ಯ ನಡೆಸಿದ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಸಹಾಯಕ ಕಮಿಷನರ್‌, ನೆರೆ ಬಂದಾಗ ತಮ್ಮ ತಮ್ಮ ಹಂತದಲ್ಲೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆ. 10ರ ತನಕ ಪ್ರಾಕೃತಿಕ ವಿಕೋಪದಿಂದ ಸುಮಾರು 75 ಕೋಟಿ ರೂ. ನಷ್ಟ ಸಂಭವಿಸಿರುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವರದಿ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಗೆ ವರದಿ ಸಲ್ಲಿಕೆ

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆ. 10ರ ತನಕ ಪ್ರಾಕೃತಿಕ ವಿಕೋಪದಿಂದ ಸುಮಾರು 75 ಕೋಟಿ ರೂ. ನಷ್ಟ ಸಂಭವಿಸಿರುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವರದಿ ಸಲ್ಲಿಸಿದ್ದಾರೆ.

ಮತ್ತೆ 2ನೇ ಹಂತದ ವರದಿ

ಬೆಳೆ, ಮನೆಗಳು, ರಸ್ತೆ, ಸೇತುವೆ, ಕಟ್ಟಡಗಳು, ಸಾರ್ವಜನಿಕ ಆಸ್ತಿ-ಪಾಸ್ತಿ, ಜೀವಹಾನಿ, ಜಾನುವಾರು ಹಾನಿಗಳ ಕುರಿತು ಪ್ರಥಮ ಹಂತದ ವರದಿ ಸಲ್ಲಿಸಲಾಗಿದೆ. 2ನೇ ಹಂತದಲ್ಲಿ ಮತ್ತೆ ವರದಿ ಮಾಡಲಾಗುವುದು.ಎಲ್ಲ ರೀತಿಯ ನಷ್ಟಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳಲಾಗುತ್ತಿದ್ದು, ಶೀಘ್ರ ಪರಿಹಾರ ವಿತರಿಸಲಾಗುತ್ತದೆ.
– ಸಂಜೀವ ಮಠಂದೂರು, ಶಾಸಕರು
Advertisement

Udayavani is now on Telegram. Click here to join our channel and stay updated with the latest news.

Next