Advertisement

ಜಿಲ್ಲೆಯಲ್ಲಿ ಲಾಕ್‌ಡೌನ್‌ ಇನ್ನಷ್ಟು ಸಡಿಲ: ಜಿಲ್ಲಾಧಿಕಾರಿ

10:43 AM Jun 22, 2021 | Team Udayavani |

ಶಿವಮೊಗ್ಗ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಇನ್ನಷ್ಟು ಸಡಿಲಿಕೆ ಮಾಡಲಾಗಿದ್ದು, ಎಲ್ಲಾ ರೀತಿಯ ಅಂಗಡಿಗಳಿಗೆ ಬೆಳಗ್ಗೆ 6ರಿಂದ ಸಂಜೆ 5ರವರೆಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ತಿಳಿಸಿದ್ದಾರೆ.

Advertisement

ಈ ಆದೇಶ ಜು. 5ರ ಬೆಳಗ್ಗೆ 5ಗಂಟೆವರೆಗೆ ಜಾರಿಯಲ್ಲಿರಲಿದೆ. ಕಂಟೈನ್‌ಮೆಂಟ್‌ ವಲಯದಲ್ಲಿರುವ ಅಂಗಡಿ- ಮುಂಗಟ್ಟುಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಹವಾನುಕೂಲಿತ ಅಂಗಡಿಗಳು, ಹವಾನುಕೂಲಿತ ಶಾಪಿಂಗ್‌ ಕಾಪ್ಲೆಕ್ಸ್‌ಗಳು, ಮಾಲ್‌ಗ‌ಳಿಗೆ ಅನುಮತಿ ನೀಡಲಾಗಿಲ್ಲ. ಎಲ್ಲಾ ವಸ್ತುಗಳ ಹೋಂ ಡೆಲಿವರಿಗೆ ಸಂಪೂರ್ಣ ಅವಕಾಶ ನೀಡಲಾಗಿದೆ. ಎಲ್ಲಾ ರೀತಿಯ ಕೈಗಾರಿಕೆಗಳಿಗೆ ಶೇ.50ರಷ್ಟು ಸಿಬ್ಬಂದಿ ಬಳಸಿಕೊಂಡು ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ. ಆದರೆ ಗಾರ್ಮೆಂಟ್‌ ಕೈಗಾರಿಕೆಗೆ ಶೇ.30ರಷ್ಟು ಸಿಬ್ಬಂದಿಯನ್ನು ಮಾತ್ರ ಬಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಹೊಟೇಲ್‌, ರೆಸ್ಟೋರೆಂಟ್‌, ಬಾರ್‌ ಗಳು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ಶೇ. 50ರಷ್ಟು ಸಾಮರ್ಥ್ಯವನ್ನು ಬಳಸಿಕೊಂಡು ವಹಿವಾಟು ನಡೆಸಬಹುದು. ಆದರೆ ಮದ್ಯವನ್ನು ಸ್ಥಳದಲ್ಲೇ ಸೇವಿಸಲು ಅವಕಾಶವಿಲ್ಲ. ಹವಾನುಕೂಲಿತ ಹೊಟೇಲ್‌, ರೆಸ್ಟೋರೆಂಟ್‌,ಬಾರ್‌ ಮತ್ತು ಕ್ಲಬ್‌ಗಳಿಗೆ ಅವಕಾಶವಿಲ್ಲ. ಲಾಡ್ಜ್, ರೆಸಾರ್ಟ್‌ಗಳು ಸಹ ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದು. ಎಲ್ಲಾ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.

ಪಾರ್ಕ್‌ಗಳಲ್ಲಿ ಬೆಳಗ್ಗೆ 5ರಿಂದ ಸಂಜೆ 6ರವರೆಗೆ ವಾಕಿಂಗ್‌ ಮತ್ತು ಜಾಗಿಂಗ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹವಾನುಕೂಲಿತವಲ್ಲದ ಜಿಮ್‌ ಗಳು ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದಾಗಿದೆ. ಎಲ್ಲಾ ಹೊರಾಂಗಣ ಕ್ರೀಡೆಗಳಿಗೆ ಅನುಮತಿಸಲಾಗಿದ್ದು, ಪ್ರೇಕ್ಷಕರು ಸೇರುವಂತಿಲ್ಲ. ವಾರಾಂತ್ಯದಲ್ಲಿ ಅಂದರೆ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next