ಬೆಳಗಾವಿ: ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಿರಂತರ ನಡೆಯುತ್ತಿರುತ್ತವೆ. ಆದೇ ರೀತಿ ಈ ಸಂಶೋಧನೆಗಳ ಬಗ್ಗೆ ಕಾರ್ಯಾಗಾರಗಳನ್ನು ನಿರಂತರವಾಗಿ ನಡೆಸಬೇಕು. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ದಾದಿಯರಿಗೆ ಹೆಚ್ಚಿನ ಜ್ಞಾನ ದೊರೆತಂತಾಗುತ್ತದೆ ಎಂದು ಡೆಕ್ಕನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ರಮೇಶ ದೊಡ್ಡಣ್ಣವರ ಅಭಿಪ್ರಾಯಪಟ್ಟರು.
ಹಲಗಾ ಗ್ರಾಮದಲ್ಲಿರುವ ಭರತೇಶ ಶಿಕ್ಷಣ ಸಂಸ್ಥೆಯ ಪಿ.ಡಿ. ಭರತೇಶ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಕಮ್ಯುನಿಟಿ ಹೆಲ್ತ್ ನರ್ಸಿಂಗ್ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ರಿಸರ್ಚ್ ಮೆಥಡಾಲಜಿ ಆಂಡ್ ಬಯೋಸ್ಟಾಟಿಸ್ಟಿಕ್ಸ್ ವಿಷಾಯಾಧಾರಿತ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದಾದಿಯರ ವೃತ್ತಿ ಜೀವನದಲ್ಲಿ ಇಂತಹ ಕಾರ್ಯಾಗಾರಗಳು ಅತೀ ಮಹತ್ವದ್ದಾಗಿವೆ. ಇದರಿಂದ ಹೊಸ ಅವಿಷ್ಕಾರ ಮತ್ತು ಸಂಶೋಧನೆಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಪಡೆಯಬಹುದಾಗಿದೆ.ಹಾಗಾಗಿ ದಾದಿಯರು ಪ್ರತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಹೆಚ್ಚಿನ ತಿಳಿವಳಿಕೆ ಪಡೆದು ತಮ್ಮ ಸೇವೆಯ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವೇಣುಗ್ರಾಮ ಆಸ್ಪತ್ರೆಯ ಕಾರ್ಯದರ್ಶಿ ಡಾ| ಅಭಿನಂದನ ಹಂಜಿ, ಕಾರ್ಯಾಗಾರದ ಮೂಲಕ ವೃತ್ತಿಪರ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಇದರ ಜೊತೆಗೆ ವೃತ್ತಿ ಬದ್ದತೆ ಮತ್ತು ಜವಾಬ್ದಾರಿಗಳನ್ನು ಸಹ ಕಲಿಯಬಹುದು ಎಂದರು.
ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಸಂಗೀತಾ ಮೋರೇಶ್ವರ ಸ್ವಾಗತಿಸಿದರು. ಪ್ರೊ| ಪದ್ಮಾವತಿ ಬಡಿಗೇರ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದರು. ಮಾಜಿ ಮಹಾಪೌರ ವಿಜಯ ಮೋರೆ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರೊ| ಮಹೇಶ ರೆಬಿನಾಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.