Advertisement

ಪ್ರವಾಸೋದ್ಯಮದಿಂದ ಹೆಚ್ಚು ಉದ್ಯೋಗ ಸೃಷ್ಟಿ

05:56 PM Sep 28, 2020 | Suhan S |

ಕಲಬುರಗಿ: ಪ್ರವಾಸೋದ್ಯಮ ಉದ್ಯೋಗವನ್ನು ಒದಗಿಸುವ ಎರಡನೇ ಅತಿದೊಡ್ಡ ಉದ್ಯಮವಾಗಿದೆ ಮತ್ತು ಜಾಗತಿಕ ಜಿಡಿಪಿಗೆ ಹತ್ತಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್‌. ಎಂ.ಮಹೇಶ್ವರಯ್ಯ ಹೇಳಿದರು.

Advertisement

ಸಿಯುಕೆಯ ಪ್ರವಾಸೋದ್ಯಮ ಮತ್ತು ಹೋಟೆಲ್‌ ನಿರ್ವಹಣಾ ವಿಭಾಗ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವೆಬಿನಾರ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್‌-19 ಸಾಂಕ್ರಾಮಿಕ ರೋಗದಿಂದ ಪ್ರವಾಸೋದ್ಯಮವು ಹೆಚ್ಚು ಹಾನಿಗೊಳಗಾದ ಉದ್ಯಮವಾಗಿದೆ. ಪ್ರವಾಸೋದ್ಯಮವನ್ನು ಸಹಜ ಸ್ಥಿತಿಗೆ ತರಲು ಎಲ್ಲ ಪಾಲುದಾರರು ಒಗ್ಗಟ್ಟಿನಿಂದ ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಈ ವರ್ಷ ಪ್ರವಾಸೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿ ಎಂಬ ವಿಷಯದ ಮೇಲೆ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಪ್ರಸ್ತುತ ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿ ನಗರಗಳು ಅಸುರಕ್ಷಿತ ಮತ್ತು ಜನದಟ್ಟಣೆಯಿಂದ ಕೂಡಿವೆ.ಆದ್ದರಿಂದ ಈ ವಿಷಯವು ಬಹಳ ಸೂಕ್ತವಾಗಿದೆ. ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲು ನಾವು ಗ್ರಾಮೀಣ ಪ್ರದೇಶಗಳನ್ನು ಪರ್ಯಾಯಪ್ರವಾಸೋದ್ಯಮ ಮೂಲವಾಗಿ ನೋಡಬೇಕಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶವು ಪರಂಪರೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಬಹಳ ಶ್ರೀಮಂತವಾಗಿದೆ. ಇಲ್ಲಿ ಗ್ರಾಮೀಣ ಪ್ರವಾಸೋದ್ಯಮದ ಅಭಿವೃದ್ಧಿಗೆ ಅಪಾರ ಅವಕಾಶಗಳಿವೆ. ಪ್ರಸ್ತುತ ಹಂಪಿ ಬಳಿಯ ಆನೆಗುಂದಿಯನ್ನು ಗ್ರಾಮೀಣ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಇದಲ್ಲದೆ ನಾರಾಯಣಪುರ, ಜಲಸಂಗ್ವಿ, ಅಷ್ಟುರ್‌ (ಬೀದರ), ಚಂದ್ರಪಳ್ಳಿ, ಕೊಂಚವರಂ, ಕಾಳಗಿ, ಸನ್ನತಿ (ಕಲಬುರಗಿ), ಬೊನಾಳ್‌, ಶಿರ್ವಾಳ್‌, ವಾಗಗೇರಾ, ವನದುರ್ಗ, ಹುನಸಗಿ (ಯಾದಗಿರಿ), ಇಟಗಿ, ಕಿನ್ನಾಳ (ಕೊಪ್ಪಳ) ದರೋಜ್‌, ಸಂಗಂಗಲ್‌, ಕಮಲಾಪುರ (ಬಳ್ಳಾರಿ) ಗ್ರಾಮಗಳನ್ನು ಗ್ರಾಮೀಣ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸುವ ಅವಕಾಶವಿದೆ.

ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತದೊಂದಿಗೆ ಕೆಲಸ ಮಾಡಲು ನಮ್ಮ ಪ್ರವಾಸೋದ್ಯಮ ಮತ್ತು ಹೋಟೆಲ್‌ ನಿರ್ವಹಣಾ ವಿಭಾಗದ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಕೆಲಸ ಮಾಡಬೇಕೆಂದು ಅವರು ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next