Advertisement

ಉಪನಗರ ರೈಲಿಗೆ ಹೆಚ್ಚು ಹೂಡಿಕೆ

12:40 AM Jul 06, 2019 | Team Udayavani |

ಬೆಂಗಳೂರು: “ಪ್ರಾದೇಶಿಕ ಸಾರಿಗೆ ಸಂಪರ್ಕ ಕಲ್ಪಿಸುವಲ್ಲಿ ಉಪನಗರ ರೈಲು ಸೇವೆ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಭಾರತೀಯ ರೈಲ್ವೆಯು ಬರುವ ದಿನಗಳಲ್ಲಿ ಉಪನಗರ ರೈಲು ವ್ಯವಸ್ಥೆಗೆ ಆದ್ಯತೆ ಮೇರೆಗೆ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ತಿಳಿಸಿದ್ದಾರೆ.

Advertisement

ಈ ಹೇಳಿಕೆಯಿಂದ ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆಗೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಿದೆ. ಈ ಮೊದಲು ಉದ್ದೇಶಿತ ರೈಲು ಯೋಜನೆಗೆ ಬಂಡವಾಳ ಹೂಡಿಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಚೌಕಾಸಿ ನಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚೌಕಾಸಿಯಿಂದಲೇ ಯೋಜನೆ ಅನುಷ್ಠಾನ ಕೂಡ ವಿಳಂಬವಾಗಿದೆ. ಆದರೆ, ಈಗ ಕೇಂದ್ರ ಹಣಕಾಸು ಸಚಿವರೇ ಈ “ಕ್ಷಿಪ್ರ ಪ್ರಾದೇಶಿಕ ಸಾರಿಗೆ ವ್ಯವಸ್ಥೆ’ (ಆರ್‌ಆರ್‌ಟಿಎಸ್‌)ಗೆ ಹೆಚ್ಚು-ಹೆಚ್ಚು ಹೂಡಿಕೆ ಮಾಡುವುದಾಗಿ ಹೇಳಿರುವುದು ಮತ್ತಷ್ಟು ಉತ್ತೇಜನ ಸಿಕ್ಕಂತಾಗಿದೆ.

“ವಿಶೇಷ ಉದ್ದೇಶಿತ ವಾಹನ’ (ಎಸ್‌ಪಿವಿ)ದ ಮೂಲಕ ಉಪನಗರ ರೈಲು ವ್ಯವಸ್ಥೆಗೆ ಭಾರತೀಯ ರೈಲ್ವೆ ವತಿಯಿಂದ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದ ನಿರ್ಮಲಾ ಸೀತಾರಾಮನ್‌, “ಇದಲ್ಲದೆ ಮೆಟ್ರೋ ರೈಲ್ವೆ ಯೋಜನೆಗಳನ್ನೂ ಪ್ರೋತ್ಸಾಹಿಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಯೋಜನೆಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಲಾಗುವುದು’ ಎಂದು ಪ್ರಕಟಿಸಿದರು.

ಒಟ್ಟಾರೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ 2030ರವರೆಗೆ 50 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಗುರಿ ಇದೆ ಎಂದೂ ತಿಳಿಸಿದ್ದಾರೆ. ಇದರಿಂದ ನಗರದ ರೈಲ್ವೆ ವ್ಯವಸ್ಥೆಗೂ ಬಂಡವಾಳ ಹರಿದುಬರಲಿದ್ದು, ಈ ಮೂಲಕ ಇನ್ನಷ್ಟು ಪ್ರಯಾಣಿಕ ಸ್ನೇಹಿ ಆಗುವ ಸಾಧ್ಯತೆ ಇದೆ.

ಮುಕ್ತ ಮನಸ್ಸು; ಉತ್ತೇಜನದ ಕನಸು: “ಸುಮಾರು 1,745 ಕೋಟಿ ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಪ್ರತ್ಯೇಕ ಹಣ ಮೀಸಲಿಟ್ಟಿರುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಹಣಕಾಸು ಸಚಿವರ ಈ ಹೇಳಿಕೆಯಿಂದ ಯೋಜನೆಗೆ ವೇಗ ದೊರೆಯುವ ನಿರೀಕ್ಷೆ ಗರಿಗೆದರಿದೆ. ಯಾಕೆಂದರೆ, ಈ ಮೊದಲು ರೈಲ್ವೆ ಇಲಾಖೆಯ ಭಾಗವಾಗಿ ಯೋಜನೆಯನ್ನು ಪರಿಗಣಿಸುತ್ತಿರಲಿಲ್ಲ.

Advertisement

ಬದಲಿಗೆ ಇದೊಂದು ನಗರಾಭಿವೃದ್ಧಿಯ ಭಾಗವಾಗಿ ನೋಡುತ್ತಿದ್ದರು. ಬಜೆಟ್‌ನಲ್ಲಿಯೇ ಈಗ ಉದ್ದೇಶಿತ ಯೋಜನೆಗಳಿಗೆ ಬಂಡವಾಳ ಹೂಡಿಕೆಯಲ್ಲಿ ಮುಕ್ತ ಮನಸ್ಸು ಹೊಂದಿರುವುದಾಗಿ ಸರ್ಕಾರ ಹೇಳಿರುವುದು ಉತ್ತೇಜನ ಸಿಕ್ಕಿದೆ’ ಎಂದು ಪ್ರಜಾ ರಾಗ್‌ ಸಂಸ್ಥೆಯ ಸಂಜೀವ್‌ ದ್ಯಾಮಣ್ಣವರ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಅದೇ ರೀತಿ, ಯಾವುದೇ ಹೊಸ ಮೆಟ್ರೋ ಯೋಜನೆಗಳನ್ನು ಸರ್ಕಾರ ಪ್ರಕಟಿಸಿಲ್ಲ. ಆದರೆ, ಚಾಲ್ತಿಯಲ್ಲಿರುವ ಮೆಟ್ರೋ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಒತ್ತುನೀಡಲಾಗಿದೆ. ಇದೊಂದು ಸ್ವಾಗತಾರ್ಹ ಕ್ರಮ ಎಂದೂ ಅವರು ಹೇಳಿದರು. ಅಂದಹಾಗೆ, ಈಚೆಗೆ ಪ್ರಧಾನಿ ಕಚೇರಿಯಿಂದ ಬೆಂಗಳೂರು ಉಪನಗರ ರೈಲು ಯೋಜನೆ ಮರುಪರಿಶೀಲನೆಗೆ ಸಂಬಂಧಿಸಿದಂತೆ ಪತ್ರ ಬರೆಯಲಾಗಿತ್ತು. ಅದರಲ್ಲಿ ನಗರ ವ್ಯಾಪ್ತಿಯಲ್ಲಿ ಉಪನಗರದ ಬಗ್ಗೆ ಸಣ್ಣ ಅಪಸ್ವರವೂ ಇತ್ತು ಎಂದು ಉಪನಗರ ರೈಲು ಹೋರಾಟಗಾರರು ಇದೇ ವೇಳೆ ಸ್ಮರಿಸಿದರು.

ಆರು ವರ್ಷಗಳಲ್ಲಿ ಪೂರ್ಣ: ಬೆಂಗಳೂರು ಉಪನಗರ ರೈಲು ಯೋಜನೆ 162 ಕಿ.ಮೀ. ಸಂಪರ್ಕ ಜಾಲ ಒಳಗೊಂಡಿದ್ದು, ಈಗಾಗಲೇ ಇರುವ 31 ಹಾಗೂ ಹೊಸದಾಗಿ 50 ಸೇರಿ ಒಟ್ಟಾರೆ 81 ನಿಲ್ದಾಣಗಳು ಯೋಜನೆ ಮಾರ್ಗದಲ್ಲಿ ಬರಲಿವೆ. ಮುಂದಿನ ಆರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಸಂಬಂಧ ಎಸ್‌ಪಿವಿ ರಚನೆ ಆಗಬೇಕಾಗಿದೆ.

ಬಜೆಟ್‌ನಲ್ಲಿ ಸಣ್ಣ ಉದ್ಯಮಿಗಳಿಗೆ ಉತ್ತೇಜನ ನೀಡಿರುವುದು ಮತ್ತು 5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ನೀಡಿರುವುದು ಖುಷಿ ನೀಡಿದೆ.
-ಅಂಬಾಡಿ, ಖಾಸಗಿ ಉದ್ಯೋಗಿ

ಈಗಾಗಲೇ 10 ರೂ. ನಾಣ್ಯದ ಬಗ್ಗೆ ಜನರಲ್ಲಿ ಗೊಂದಲವಿದೆ. ಈಗ 20 ರೂ. ನಾಣ್ಯ ಪರಿಚಯಿಸುವುದಕ್ಕೆ ಮುಂದಾಗಿರುವುದು ಎಷ್ಟು ಯಶಸ್ವಿಯಾಗುತ್ತದೆ ಎಂದು ಕಾದು ನೋಡಬೇಕು.
-ಶ್ರೀವಾನನ್‌, ಬ್ಯಾಂಕ್‌ ಉದ್ಯೋಗಿ

ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ಗಳ ಬಗ್ಗೆ ಇದ್ದ ಗೊಂದಲ ನಿವಾರಿಸಿ ಕೆಲವು ವಿನಾಯಿತಿಗಳನ್ನು ನೀಡಿರುವುದು ಜನಸಾಮಾನ್ಯರ ಮಟ್ಟಿಗೆ ಸಕಾರಾತ್ಮಕ ಬೆಳವಣಿಗೆ.
-ದೇವನಾಥ ರೆಡ್ಡಿ, ಸರ್ಕಾರಿ ಉದ್ಯೋಗಿ

ಬಜೆಟ್‌ನಲ್ಲಿ ವಿವಿಧ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಬಿಎಸ್‌ಎನ್‌ಎಲ್‌ ಉದ್ಯೋಗಿಗಳ ಸಮಸ್ಯೆಗೆ ಪರಿಹಾರ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು.
-ಕೆ.ಆರ್‌.ರವೀಂದ್ರ, ಬಿಎಸ್‌ಎನ್‌ಎಲ್‌ ಉದ್ಯೋಗಿ

ಕರ್ನಾಟಕಕ್ಕೆ ವಿಶೇಷ ಯೋಜನೆಗಳು ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಸಂಕಷ್ಟದಲ್ಲಿರುವ ಉದ್ದಿಮೆಗಳಿಗೆ ಉತ್ತೇಜನ ನೀಡಲು ಮತ್ತಷ್ಟು ಅವಕಾಶಗಳನ್ನು ನೀಡಬಹುದಿತ್ತು.
-ಎನ್‌.ಆರ್‌.ಬಿರಾದರ್‌, ಸರ್ಕಾರಿ ಉದ್ಯೋಗಿ

ಸ್ಟಾರ್ಟ್‌ಆಪ್‌ ಕಂಪನಿಗಳಿಗೆ ತೆರಿಗೆ ವಿನಾಯಿತಿ ಸೇರಿ ಹಲವು ಸೌಲಭ್ಯಗಳ ಮೂಲಕ ಉತ್ತೇಜ ನೀಡಲಾಗಿದೆ. ಪ್ರವಾಸಿ ಕೇಂದ್ರಗಳನ್ನು ವಿಶ್ವ ದರ್ಜೆಗೆ ಏರಿಸಿರುವ ಚಿಂತನೆಯೂ ಉತ್ತಮ.
-ಶ್ರೀ ಗೌಡ, ಖಾಸಗಿ ಉದ್ಯೋಗಿ

ಅಸಂಘಟಿತ ವಲಯದ ಕಾರ್ಮಿಕರು 60ನೇ ವರ್ಷದವರೆಗೆ 100 ರೂ. ಪ್ರೀಮಿಯಂ ಕಟ್ಟಿದರೆ 60 ವರ್ಷದ ನಂತರ 3 ಸಾವಿರ ರೂ. ಪಿಂಚಣಿ ಸಿಗಲಿದೆ. “ಈಸಿ ಆಫ್ ಲಿವಿಂಗ್‌’ ಯೋಜನೆಯಿಂದ ಜೀವನ ಈಸಿ ಆಗದು.
-ಧನಂಜಯ್‌ ಎನ್‌., ವೈದ್ಯಕೀಯ ಪ್ರತಿನಿಧಿ

ಭಾರತವನ್ನು 5 ಟ್ರಿಲಿಯನ್‌ ಡಾಲರ್‌ ಆರ್ಥಿಕ ವ್ಯವಸ್ಥೆಯನ್ನಾಗಿ ಮಾಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ, ಇದರಿಂದ ಆರ್ಥಿಕ ಅಸಮಾನತೆ ಹೆಚ್ಚಾಗಲಿದೆ.
-ನಾಗೇಗೌಡ ಕೆ.ಎಸ್‌, ಪ್ರಾಧ್ಯಾಪಕ

Advertisement

Udayavani is now on Telegram. Click here to join our channel and stay updated with the latest news.

Next