ಕಲಬುರಗಿ: ಸರ್ಕಾರದ ಜನಪರ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕಾದರೆ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಮಹತ್ವದ್ದು ಎಂದು ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಚಾಲಕ ಶೌಕತ್ ಅಲಿ ಆಲೂರ, ಜಿ.ಪಂ. ಸದಸ್ಯ ಮತ್ತು ಆರ್‌ಜಿಪಿಆರ್‌ಎಸ್ ಸಂಚಾಲಕ ಶರಣಗೌಡ ಪಾಟೀಲ ಹೇಳಿದರು.
ಕುಸನೂರ ಜಿ.ಪಂ. ಕ್ಷೇತ್ರದ ವ್ಯಾಪ್ತಿಯ ನಂದೂರ(ಕೆ), ಕುಸನೂರ, ಕಾಳನೂರ ಹಾಗೂ ಶ್ರೀನಿವಾಸ ಸರಡಗಿ ಗ್ರಾ.ಪಂ. ಜನಪ್ರತಿನಿಧಿಗಳಿಗೆ ಹಾಗೂ ಕಾಂಗ್ರೆಸ್ ಪಕ್ಷದ ಮುಖ್ಯ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಗ್ರಾಮ, ತಾಲೂಕು, ಜಿ.ಪಂ. ಸದಸ್ಯರು ಪ್ರಮುಖ ಪಾತ್ರ ವಹಿಸಬೇಕು. ಪಂಚಾಯತಗಳನ್ನು ಬಲಿಷ್ಠಗೊಳಿಸುವ ಮಹತ್ವದ ಆಸೆಯೊಂದಿಗೆ ಮತ್ತು ದೇಶದ ಅಭಿವೃದ್ಧಿ ದೃಷ್ಟಿಯಿಂದ ಮಾಜಿ ಪ್ರಧಾನಿ ರಾಜೀವಗಾಂಧಿ ಅವರುಸಂವಿಧಾನದ 73ನೇ ಹಾಗೂ 74ನೇ ವಿಧಿಗೆ ತಿದ್ದುಪಡಿ ತಂದು ಅಧಿಕಾರ ವಿಕೇಂದ್ರಿಕರಣಕ್ಕೆ ಅಡಿಪಾಯ ಹಾಕಿದ ಮುನ್ನೋಟದ ನಾಯಕರಾಗಿದ್ದರು ಎಂದರು.
ಅಧಿಕಾರ ವಿಕೇಂದ್ರಿಕರಣದ ಆಶಯಗಳ ಈಡೇರಿಕೆಗಾಗಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆ ಸ್ಥಾಪಿಸಿದೆ. ಈ ಸಂಘಟನೆಯಡಿ ಅಧಿಕಾರ ವಿಕೇಂದ್ರಿಕರಣ ಹಾಗೂ ಜನಪ್ರತಿನಿಧಿಗಳ ಗ್ರಾಮ ಸ್ವರಾಜ್ ಜಾಗೃತಿ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಮ ಮಟ್ಟದಲ್ಲಿ ಹೊಸ ನಾಯಕರನ್ನು ಗುರುತಿಸಿ, ಬೆಳೆಸಿ ಅವರ ಶಕ್ತಿ ಕ್ರೋಢಿಕರಿಸಿ, ಕಾಂಗ್ರೆಸ್ ಪಕ್ಷದಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಲು ಯುವಕರಿಗೆ ಇಂತಹ ಕಾರ್ಯಾಗಾರಗಳಲ್ಲಿ ಹಿರಿಯರು ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು. ಅಧಿಕಾರ ವಿಕೇಂದ್ರಿಕರಣದಲ್ಲಿ ಬಿಜೆಪಿ ಸಾಧನೆ ಶೂನ್ಯವಾಗಿದೆ.
ಅಧಿಕಾರ ವಿಕೇಂದ್ರಿಕರಣವನ್ನು ಹಾಗೂ ಸಾಮಾಜಿಕ ನ್ಯಾಯದಡಿಯಲ್ಲಿ ನೀಡುವಮೀಸಲಾತಿಯನ್ನು ಬಿಜೆಪಿ ವಿರೋಧಿಸಿತ್ತು ಎಂದ ಅವರು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಪರಿಕಲ್ಪನೆಯಿಂದ ಬಿಜೆಪಿಯವರು ಸಹ ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಕೆಡಿಪಿ ಸದಸ್ಯರಾದ ನಿರ್ಮಲಾ ಸಿ. ಬರಗಾಲಿ, ಗ್ರಾ.ಪಂ.ಅಧ್ಯಕ್ಷರಾದ ಸಂತೋಷ ರಾಠೊಡ, ಬಾಬು ರಾಠೊಡ, ದಯಾನಂದ ಸೊಪ್ಪನ್, ನಿಂಗಣ್ಣ ದೊಡ್ಮನಿ, ವಿಜಯಕುಮಾರ ರಾವೂರ ಹಾಗೂ ಇತರರು ಭಾಗವಹಿಸಿದ್ದರು.