Advertisement

ಪಶುಸಂಗೋಪನೆಗೆ ಬಜೆಟ್‌ನಲ್ಲಿ ಹೆಚ್ಚು ಅನುದಾನ; ಸಿಎಂ ಭರವಸೆ

09:56 AM Dec 13, 2019 | Sriram |

ಬೆಂಗಳೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಕ್ಷೇತ್ರಕ್ಕೆ ಮುಂಬರುವ ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

Advertisement

ಹೆಬ್ಟಾಳದಲ್ಲಿ ಗುರುವಾರ ಪಶುಪಾಲನ ಭವನ ಮತ್ತು ಪಶು ವೈದ್ಯಕೀಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಸಶಕ್ತೀಕರಣಕ್ಕೆ ಕೃಷಿ ಜತೆಗೆ ಪಶುಸಂಗೋಪನೆ ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ರಾಜ್ಯದಲ್ಲಿ ಸುಮಾರು ವಾರ್ಷಿಕ 8.46 ಲ. ಲೀ. ಹಾಲು ಉತ್ಪಾದನೆಯಾಗುತ್ತಿದ್ದು, 255 ಕೋ. ರೂ. ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ. ಜತೆಗೆ ಕ್ಷೀರಧಾರೆ, ಜಾನುವಾರು ವಿಮೆ, ಪಶುಭಾಗ್ಯ ಯೋಜನೆ, ಗೋಶಾಲೆಗಳು ಸಹಿತ ನಗರದ ಹಲವು ಯೋಜನೆಗಳಿಂದ ರೈತರಿಗೆ ಅನುಕೂಲವಾಗಿದೆ ಎಂದ ಅವರು, ಪ್ರಸ್ತುತ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಿಸಲಾದ ಪಶುವೈದ್ಯಕೀಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸುತ್ತಲಿನ ಗ್ರಾಮೀಣ ಪ್ರದೇಶಗಳ ಜಾನುವಾರುಗಳಿಗೆ ನೆರವಾಗಲಿದೆ ಎಂದರು.

ಪಶುಸಂಗೋಪನೆ ಸಚಿವ ಪ್ರಭು ಚವಾಣ್‌ ಮಾತನಾಡಿ, ರಾಜ್ಯದ ಒಟ್ಟು ಆದಾಯದ ಪ್ರಾಥಮಿಕ ವಲಯದಲ್ಲಿ ಪಶುಸಂಗೋಪನ ವಲಯದ ಪಾಲು ಹೆಚ್ಚಿನದ್ದಾಗಿದೆ. ಭೂರಹಿತ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ, ಮಹಿಳೆಯರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಪಶುಸಂಗೋಪನೆ ಒದಗಿಸುತ್ತಿದೆ ಎಂದರು.

ರಾಜ್ಯದ ಇತರೆಡೆಯೂ ನಿರ್ಮಾಣ
ಇಲಾಖೆಯ ಪ್ರಮುಖ ಗುರಿ ಜಾನುವಾರು ಉತ್ಪನ್ನಗಳಾದ ಹಾಲು, ಮಾಂಸ, ಉಣ್ಣೆ ಮತ್ತು ಕುಕ್ಕುಟ ಉತ್ಪನ್ನಗಳಾದ ಮೊಟ್ಟೆ, ಕೋಳಿ ಮಾಂಸ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಜನರ ಆರ್ಥಿಕ ಮಟ್ಟ ಸುಧಾರಿಸುವುದಾಗಿದೆ. ಈ ನಿಟ್ಟಿನಲ್ಲಿ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಇಲಾಖೆಯ ಎಲ್ಲ ಶಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು 20 ಕೋ. ರೂ. ವೆಚ್ಚದಲ್ಲಿ ಪಶುಪಾಲನ ಭವನ ನಿರ್ಮಿಸಲಾಗಿದೆ. 6.5 ಕೋ. ರೂ. ವೆಚ್ಚದಲ್ಲಿ ನಗರದ ದಂಡುಪ್ರದೇಶದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಇದೇ ಮಾದರಿಯಲ್ಲಿ ತಲಾ 3.4 ಕೋ. ರೂ. ವೆಚ್ಚದಲ್ಲಿ ತುಮಕೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿಯಲ್ಲೂ ಆಸ್ಪತ್ರೆಗಳು ತಲೆಯೆತ್ತಿವೆ ಎಂದು ಮಾಹಿತಿ ನೀಡಿದರು.

Advertisement

ಇದೇ ವೇಳೆ “ಅನುಗ್ರಹ’ ಯೋಜನೆ ಅಡಿ ಕುರಿ ಮತ್ತು ಮೇಕೆಗಳ ಆಕಸ್ಮಿಕ ಮರಣದಿಂದ ನಷ್ಟ ಅನುಭವಿಸಿದವರಿಗೆ ಪರಿಹಾರದ ಚೆಕ್‌ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next