ಮುಡಿಪು: ಹೋಬಳಿ ಪ್ರದೇಶವಾದ ಮುಡಿಪು ಅಭಿವೃದ್ಧಿ ಹೊಂದುತ್ತಿದ್ದು ಮುಡಿಪು ಜಂಕ್ಷನ್‌ನ್ನು ಮಾದರಿಯನ್ನಾಗಿಸಿ, ಮುಡಿಪುವಿನಿಂದ ತೊಕ್ಕೊಟ್ಟು ಜಂಕ್ಷನ್ ಸಂಪರ್ಕಿಸುವ ರಸ್ತೆ ಚತುಷ್ಪಥ ರಸ್ತೆಯನ್ನಾಗಿಸುವ ಕಾರ್ಯ ಆರಂಭಗೊಂಡಿದೆ. ಇದಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಎಂದು ಜಿ.ಉ. ಸಚಿವ ಯು.ಟಿ. ಖಾದರ್ ಹೇಳಿದರು.
ಮುಡಿಪು ಗೋಪಾಲಕೃಷ್ಣ ದೇವಸ್ಥಾ ನದಿಂದ ಜಂಕ್ಷನ್ ವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಆಗಬಹುದಾದ ಖರ್ಚಿನ ರೂಪುರೇಖೆ ವೀಕ್ಷಿಸಿ ಮುಡಿಪು ಜಂಕ್ಷನ್ ಅಭಿವೃದ್ಧಿ ಕುರಿತಂತೆ ಎಂಜಿನಿಯರ್‌ಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದರು.
ದೇರಳಕಟ್ಟೆಯಿಂದ ತೊಕ್ಕೊಟ್ಟುವರೆಗಿನ ರಸ್ತೆ ಅಗಲೀಕರಣ ಮತ್ತು ದ್ವಿಫಥ ರಚನೆ ಕಾರ್ಯ ನಡೆಯುತ್ತಿದೆ. ಈಗಾಗಲೇ 10 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದ್ದು, 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ಫೋಸಿಸ್ ಸಹಭಾಗಿತ್ವದೊಂದಿಗೆ ಕಂಬಳ ಪದವಿನಿಂದ ಮುಡಿಪುವರೆಗೆ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ. ಇದರೊಂದಿಗೆ ದೇರಳಕಟ್ಟೆಯಿಂದ ಕಂಬಳಪದವುವರೆಗಿನ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು ರಾಜ್ಯ ಸರಕಾರದ ಅನುದಾನದಿಂದ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದರು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ಹೈದರ್ ಕೈರಂಗಳ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ ಕಾಜವ, ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಉಮ್ಮರ್ ಪಜೀರ್, ಬಾಳೆಪುಣಿ ಗ್ರಾ.ಪಂ. ಸದಸ್ಯ ಶರೀಫ್ ಚೆಂಬೆತೋಟ, ನಾಸೀರ್ ನಡುಪದವು, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ನರಿಂಗಾನ ಗ್ರಾ.ಪಂ. ಸದಸ್ಯ ಮುರಳೀಧರ್ ಶೆಟ್ಟಿ, ಕಾಂಗ್ರೆಸ್ ಕಿಸಾನ್ ಘಟಕಾಧ್ಯಕ್ಷ ಅರುಣ್ ಡಿ’ಸೋಜಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ರವೀಂದ್ರನಾಥ್ ಶೆಟ್ಟಿ, ಜಿ.ಪಂ. ಇಂಜಿನಿಯರ್ ರವಿಚಂದ್ರ, ಮುಖಂಡ ರಾದ ಜಗದೀಶ್ ಪಲಾಯಿ ಉಪಸ್ಥಿತರಿದ್ದರು.