ಹರಿಹರ: ಪ್ರಸಕ್ತ ಅವ ಧಿಯಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2500 ಕೋಟಿ ರೂ.ಗಳಷ್ಟು ಗರಿಷ್ಠ ಅನುದಾನ ತಂದಿರುವುದಾಗಿ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಗುರುವಾರ ತಾಲೂಕಿಗೆ ಆಗಮಿಸಿದ್ದ ಅವರು ಕೊಂಡಜ್ಜಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ನೀರಾವರಿ ನಿಗಮದ 80 ಲಕ್ಷ ರೂ. ಅನುದಾನದಲ್ಲಿ ರಂಗರಾವ್ ಕ್ಯಾಂಪ್ ನಿಂದ ಶ್ರೀನಿವಾಸ ಕ್ಯಾಂಪ್‌ವರೆಗೆ 2 ಕಿಮೀ ರಸ್ತೆ, ಶ್ರೀನಿವಾಸ ಕ್ಯಾಂಪ್‌ನಿಂದ ಕುಣೆಬೆಳೆಕೆರೆ-ದಾವಣಗೆರೆ ಕೂಡು ರಸ್ತೆವರೆಗೆ 2 ಕಿಮೀ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.
ಶಿವಮೊಗ್ಗ ಹೆದ್ದಾರಿಯಿಂದ ಬೆಳ್ಳೂಡಿಗೆ ಹೋಗುವ ರಸ್ತೆ ದುರಸ್ತಿಗೆ 15 ಲಕ್ಷ ರೂ., ಹಳ್ಳಿಹಾಳ್ ಗ್ರಾಮದಿಂದ ಕಡಾರನಾಯಕನಹಳ್ಳಿವರೆಗೆ 1ಕಿಮೀ ರಸ್ತೆ ಅಭಿವೃದ್ಧಿಗೆ 25 ಲಕ್ಷ ರೂ. ನೀಡಲಾಗಿದೆ. ಕೊಂಡಜ್ಜಿ ರಸ್ತೆಯಿಂದ ಕೆಂಚನಹಳ್ಳಿಗೆ ಹೋಗುವ 1 ಕಿಮೀ ರಸ್ತೆಯನ್ನು 20 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹರಳಹಳ್ಳಿ-ಯರೇಹಳ್ಳಿ ರಸ್ತೆಯ ಕತ್ತಲಗೆರೆ ಹಳ್ಳಕ್ಕೆ ಸೇತುವೆ ಕಾಮಗಾರಿಗೆ 75 ಲಕ್ಷ ರೂ., ಹರಳಹಳ್ಳಿಯಿಂದ ಯರೇಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ., ಕೆ.ಬೇವಿನಹಳ್ಳಿಯಿಂದ ಸತ್ಯನಾರಾಯಣ ಕ್ಯಾಂಪ್ ಮುಖಾಂತರ ತಾಲೂಕು ಗಡಿವರೆಗೆ 4 ಕಿಮೀ ರಸ್ತೆ ದುರಸ್ತಿ ಕಾಮಗಾರಿಗೆ 25 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. ಈ ಕಾಮಗಾರಿಗಳಿಗೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 68 ಲಕ್ಷ ರೂ. ಅನುದಾನ ನೀಡಲಾಗಿದೆ. ತಾಲೂಕಿನ 73 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್ ಯೋಜನೆಯನ್ನು 35 ಕೋಟಿ ರೂ. ಅನುದಾನದಲ್ಲಿ ಜಾರಿಗೊಳಿಸಲಾಗುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರಿಂದ ತಾಲೂಕಿನ ಬಹುತೇಕ ಗ್ರಾಮಗಳಿಗೆ ಶುದ್ಧ ನೀರು ತಲುಪಲಿದೆ ಎಂದು ಹೇಳಿದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ಚುನಾವಣಾ ಸಂದರ್ಭಕ್ಕೆ ಮಾತ್ರ ಪಕ್ಷ ರಾಜಕಾರಣ ಸೀಮಿತಗೊಳಿಸಬೇಕು. ನಂತರ ಎಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಬೆಕು ಎಂದರು.
ಸಂಸದರು ಸಾರಥಿ-ಚಿಕ್ಕಬಿದರಿ ಗ್ರಾಮದ ಮಧ್ಯದ ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದರು. ಕಮಲಾಪುರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟಿಸಿದರು. ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಎಂ. ವೀರೇಶ್ ಹನಗವಾಡಿ, ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ, ಬೆಳ್ಳೂಡಿ ಬಕ್ಕೇಶ್, ಗ್ರಾಮೀಣಾಭಿವೃದ್ಧಿ ಇಲಾಖೆ ಎಇಇ ಗಿರೀಶ್, ಜೆಇ ಯತಿರಾಜ್ ಇತರರು ಇದ್ದರು.